ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಸಚಿವರು ಬರೋದು ಬಹುತೇಕ ಡೌಟ್, ಶಿಕ್ಷಕರಿಗೆ ಶಿಷ್ಯಂದಿರ ಭಾಗ್ಯ ಯಾವಾಗ?

Published : Jul 03, 2023, 05:32 PM ISTUpdated : Jul 04, 2023, 04:19 PM IST
ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಸಚಿವರು ಬರೋದು ಬಹುತೇಕ ಡೌಟ್, ಶಿಕ್ಷಕರಿಗೆ ಶಿಷ್ಯಂದಿರ ಭಾಗ್ಯ ಯಾವಾಗ?

ಸಾರಾಂಶ

ಶಿಕ್ಷಕರ ನೇಮಕಾತಿ ಆದೇಶ ಪ್ರತಿಗಾಗಿ ನಡೆಯುತ್ತಿರುವ ಧರಣಿ. ಮಳೆ ಬಂದರೂ ಲೆಕ್ಕಿಸದೆ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮುಂದುವರೆಸಿದ ಭಾವಿ ಶಿಕ್ಷಕರು . 

ವರದಿ: ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು.3): ಆತ ಪದವೀಧರ, ಖಾಸಗಿ ಸಂಸ್ಥೆಯೊಂದರಲ್ಲಿ ಶಿಕ್ಷಕನೂ ಆಗಿದ್ದ. ಆತನಿಗೋ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಬೇಕೆನ್ನುವ ಕನಸು. 2022ರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದಾಗ ಪರೀಕ್ಷೆ ಬರೆದು ಆಯ್ಕೆಯೂ ಆಗಿದ್ದ. ಅದೇ ಖುಷಿಯಲ್ಲಿ ಊರಿಗೆಲ್ಲಾ ಸ್ವೀಟ್ ಹಂಚಿ ಕೆಲಸಕ್ಕೂ ರಾಜಿನಾಮೆ ಕೊಟ್ಟಿದ್ದ. ಆದರೆ ಆದೇಶ ಪ್ರತಿ ಕೈ ಸೇರಲೇ ಇಲ್ಲ. ದಿನ ಬೆಳಗಾದರೆ ಅಮ್ಮ ‘ಕೆಲಸಕ್ಕೆ ಹೋಗಲ್ವೇನೋ ಅಂತ ಕೇಳ್ತಿದಾರೆ’ ಸರ್, ಪಕ್ಕದ ಅಂಗಡಿಗೂ ಮಾಸ್ಕ್ ಹಾಕಿ ಹೋಗೋ ಪರಿಸ್ಥಿತಿ ಬಂದಿದೆ. ಇಲ್ಲಿಗೆ ಬರೋಕೆ ಅಕ್ಕನ ಹತ್ರ ಎರಡು ಸಾವಿರ ಸಾಲ ತಗೊಂಡು ಬಂದಿದೀನಿ ಅಂತ ಕಣ್ಣೀರು ಹಾಕ್ತಾ ಹೇಳ್ತಾರೆ ಉಡುಪಿಯಿಂದ ಬಂದಿರುವ ರಾಜೇಶ್.

ಇದು ರಾಜೇಶ್ ಒಬ್ಬರ ಕಥೆಯಲ್ಲ. ನೂರಾರು ಕನಸು ಕಟ್ಟಿಕೊಂಡು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗುತ್ತೇವೆಂದು ಕಾದು ಕುಳಿತಿರುವ ಸಾವಿರಾರು ಜನರ ನೋವಿನ ಕಥೆ. ನೇಮಕಾತಿ ಆದೇಶ (Recruitment order)   ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಇವರೆಲ್ಲರೂ ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೌನ ಪ್ರತಿಭಟನೆಗಳಿದಿದ್ದಾರೆ. ಅವರ ಬೇಡಿಕೆ ಇಷ್ಟೇ. ಆದೇಶ ಪ್ರತಿ ಕೊಟ್ಟು ಸ್ಥಳ ಸೂಚಿಸಿ ಎಂಬುದು!

NITK SURATHKAL ಕ್ಯಾಂಪಸ್ ಸೆಲೆಕ್ಷನ್‌, ಅಮೆರಿಕಾ ಕಂಪೆನಿಯಲ್ಲಿ ವಿದ್ಯಾರ್ಥಿಗೆ 2.3 ಕೋಟಿ ರೂ ಪ್ಯಾಕೇಜ್ ಉದ್ಯೋಗ

2022ರ ಮಾರ್ಚ್ ನಲ್ಲಿ ಶಿಕ್ಷಣ ಇಲಾಖೆ (education department) ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ (Teachers Recruitment) ಅರ್ಜಿ ಆಹ್ವಾನಿಸಿತ್ತು. ಅಂದು 15,000 ಹುದ್ದೆಗಳಿಗೆ 70 ಸಾವಿರಕ್ಕೂ ಅಧಿಕ ಜನ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 13,352 ಜನ ಅಧಿಕೃತವಾಗಿ ಆಯ್ಕೆಯಾಗಿದ್ದರು. ಈ ನೇಮಕಾತಿ ಸಂಬಂಧ ಒಂದಿಷ್ಟು ಜನ ದಾಖಲಾತಿ ಸಮಸ್ಯೆಯಿಂದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಯಾವುದೇ ಕಾನೂನಾತ್ಮಕ ತೊಡಕುಗಳಿಲ್ಲದ, ಸಮಸ್ಯೆಯೇ ಇಲ್ಲದ ಅಭ್ಯರ್ಥಿಗಳು ತೊಂದರೆ ಅನುಭವಿಸುತ್ತಿದ್ದೇವೆ ಎಂಬುದು ಆಯ್ಕೆಯಾದ ಅಭ್ಯರ್ಥಿಗಳ ಅಳಲು. 

ಈಗಾಗಲೇ ಸರ್ಕಾರಿ ಶಾಲೆಗಳಲ್ಲೂ ಸರಿಯಾದ ಸಂಖ್ಯೆಗಳಲ್ಲಿ ಶಿಕ್ಷಕರೂ ಇಲ್ಲದೆ ಹಲವು ಕಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ‌. ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗುತ್ತಿರುವುದರಿಂದ ಇಲಾಖೆ ಮತ್ತು ಸರ್ಕಾರದ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಸಾಧನೆಗಳಿಗೂ ಹಿನ್ನಡೆಯಾಗುತ್ತಿದೆ. ಹಲವು ಕಡೆಗಳಲ್ಲಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಹಾಗಾಗಿ ಹೊಸ ಸರ್ಕಾರ ಈ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ಮತ್ತು ಸ್ಥಳ ನಿಯುಕ್ತಿ ಮಾಡಬೇಕೆಂಬುದು ಅವರ ಆಗ್ರಹ.

ಸದ್ಯ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಒಂದಿಷ್ಟು ಜನ ತಮ್ಮ ಮಕ್ಕಳನ್ನು ಯಾವ ಊರಿನ ಶಾಲೆಗಳಿಗೆ ಸೇರಿಸಬೇಕೆಂಬ ಗೊಂದಲದಲ್ಲೂ ಇದ್ದಾರೆ. ಈಗಾಗಲೇ ಶೈಕ್ಷಣಿಕ ವರ್ಷಾರಂಭವಾಗಿದ್ದು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಎದುರಾಗಲಿದೆ ಎಂಬ ಆತಂಕದಲ್ಲೂ ಪೋಷಕರಿದ್ದಾರೆ.  ಇನ್ನು ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ದಿನಾಂಕಗಳೂ ಹತ್ತಿರದಲ್ಲಿರುವುದರಿಂದ ಚುನಾವಣಾ ನೀತಿ ಸಂಹಿತೆಯಿಂದಾಗಿ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಆತಂಕದಲ್ಲಿ ಭಾವೀ ಶಿಕ್ಷಕರಿದ್ದಾರೆ. 

Karnataka Textbook Revision: ಸರಕಾರದಿಂದ 2023-24ನೇ ಸಾಲಿನ ಹೊಸ ಪಠ್ಯಗಳ ಪಟ್ಟಿ ಬಿಡುಗಡೆ

ಇದರ ಜೊತೆ ಜೊತೆಗೆ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೂ ಜಾತಿ ಆದಾಯ ಸಿಂಧುತ್ವ ಮಾಡಿಸಬೇಕೆಂದು ಕೆಲವು ಜಿಲ್ಲೆಗಳ DDPI ಗಳು ಅಭ್ಯರ್ಥಿಗಳಿಗೆ ಸೂಚಿಸುತ್ತಿದ್ದು ಅಭ್ಯರ್ಥಿಗಳನ್ನು ಇನ್ನಷ್ಟು ಗೊಂದಲಕ್ಕೆ ಸಿಲುಕಿಸಿದೆ. 

ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಶೀಘ್ರವಾಗಿ ನಮಗೆ ನೇಮಕಾತಿ ಆದೇಶ ಪ್ರತಿ ಕೊಡಿ, ಕೆಲಸದ ಸ್ಥಳವನ್ನು ಸೂಚಿಸಿ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಇನ್ನು ಫ್ರೀಡಂ ಪಾರ್ಕ್ ನ ಪ್ರತಿಭಟನೆಯಲ್ಲಿ ಇಂದು ಸಾಕಷ್ಟು ಜನ ಬಾಣಂತಿಯರು, ಮಕ್ಕಳೂ ಇದ್ದು ನೇಮಕಾತಿ ಆದೇಶ ಪ್ರತಿ ದೊರೆಯದೆ ನಾವು ಏಳೋಲ್ಲ ಅಂತ ಕೂತಿದ್ದಾರೆ. 

ಇಂದು ನೂತನ ಸರ್ಕಾರದ ಬಜೆಟ್ ಅಧಿವೇಶನ ಆರಂಭ ಹಿನ್ನಲೆ ಶಿಕ್ಷಣ ಸಚಿವರೂ ಸೇರಿದಂತೆ ಎಲ್ಲಾ ಸಚಿವರೂ ಅಧಿವೇಶನದಲ್ಲಿ ಬ್ಯುಸಿ ಇದ್ದು ಸಂಜೆಯ ವೇಳೆಗೆ ಶಿಕ್ಷಣ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಕಳೆದ ಒಂದು ವರ್ಷದಿಂದ ಸರ್ಕಾರದ ಮುಂದೆ ಈ ನೇಮಕಾತಿ ಆದೇಶ ಪ್ರತಿಯ ಬೇಡಿಕೆ ಇಡುತ್ತಲೇ ಬಂದಿರುವ ಭಾವಿ ಶಿಕ್ಷಕರಿಗೆ ಈ ಗುರು ಪೂರ್ಣಿಮೆಯ ದಿನವೇ ಶಿಕ್ಷಕರಾಗುವ ಅವಾಕಾಶ ದೊರೆಯುತ್ತದೆಯಾ ಕಾದು ನೋಡಬೇಕಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ