* ಕೋವಿಡ್ ವಿಪತ್ತು ವರ್ಷಕ್ಕಿರಲಿ ಪ್ರತ್ಯೇಕ ನಿಯಮಗಳು
* ಪರ್ಸೆಂಟೇಜ್ ಬೇಡ, ಎಲ್ಲ ಖಾಲಿ ಹುದ್ದೆಗಳ ವರ್ಗಾವಣೆಗೆ ಅವಕಾಶವಿರಲಿ
* ವರ್ಗಾವಣೆ ಮಾಡುವ ವೇಳೆ ಶಿಕ್ಷಕ ಸ್ನೇಹಿ ಆಗಿರಬೇಕು
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.16): ಹಲವರು ವಿವಾದದಿಂದ ಕೋರ್ಟ್ ಮೆಟ್ಟಿಲು ಏರಿದ ಬಳಿಕ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಕೊನೆಗೂ ಶಿಕ್ಷಕರ ವರ್ಗಾವಣೆಯನ್ನು ಮಾಡಲು ಮುಂದಾಗಿದ್ದು, ಇದಕ್ಕಾಗಿ ನಿಯಮಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಿದೆ. ಈ ನಡುವೆ ಶಿಕ್ಷಕ ಸಮುದಾಯದಲ್ಲಿ ಶಿಕ್ಷಕರ ವರ್ಗಾವಣೆಯ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಒತ್ತಡ ಹೆಚ್ಚಾಗುತ್ತಿದೆ.
ಕಳೆದೆರಡು ವರ್ಷಗಳ ಕೋವಿಡ್ ಸಂಕಷ್ಟದಲ್ಲಿ ಅದೆಷ್ಟೋ ಶಿಕ್ಷಕರು ಪ್ರಾಣ ತೆತ್ತಿದ್ದಾರೆ. ಅದೆಷ್ಟೋ ಶಿಕ್ಷಕರು ಕೋವಿಡ್‌ಗೆ ತುತ್ತಾಗಿ, ಚೇತರಿಸಿಕೊಳ್ಳಲು ಈಗಲೂ ಹೆಣಗಾಡುತ್ತಿದ್ದಾರೆ. ಹೀಗಾಗಿ ಕೋವಿಡ್ ವಿಪತ್ತು ವರ್ಷದ ವರ್ಗಾವಣೆಯಾದ್ದರಿಂದ ಇರುವ ಷರತ್ತುಗಳನ್ನು ಸಡಿಲಿಕೆ ಮಾಡಿ, ಅನುಕೂಲ ಮಾಡಿಕೊಡಬೇಕು ಎನ್ನುವ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಶಿಕ್ಷಕಸ್ನೇಹಿ ವರ್ಗಾವಣೆ ಮಾಡುವುದಾಗಿ ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳುತ್ತಲೇ ಇದ್ದಾರೆ. ಹೀಗಾಗಿ, ಈಗ ಕೋವಿಡ್ ವಿಪತ್ತು ಸಂದರ್ಭದಲ್ಲಿಯಾದರೂ ಇದ್ದಬಿದ್ದ ಷರತ್ತುಗಳನ್ನು ತೆಗೆದು ಹಾಕಿ, ಕೋವಿಡ್ ಸಂಕಷ್ಟದಲ್ಲಿ ಕುಟುಂಬದಿಂದ ದೂರ ಇರುವಂತಾಗಿರುವ ಶಿಕ್ಷಕರಿಗೆ ಕುಟುಂಬದೊಂದಿಗೆ ಇರುವ ಅವಕಾಶ ಕಲ್ಪಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.
ಶಿಕ್ಷಕರ ವರ್ಗಾವಣೆ ಕರಡು ನಿಯಮ ಪ್ರಕಟ
ಹೀಗಾಗಲಿ:
ಶಿಕ್ಷಕರ ವರ್ಗಾವಣೆಗೆ ಇಂತಿಷ್ಟುಎಂದು ಪರ್ಸೇಂಟೇಜ್ ತೆಗೆದು ಹಾಕಬೇಕು. ಖಾಲಿ ಇದ್ದ ಎಲ್ಲ ಹುದ್ದೆಗಳ ವರ್ಗಾವಣೆಗೂ ಅವಕಾಶ ನೀಡಬೇಕು. ಮಿತಿಗಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ತಾಲೂಕು, ಜಿಲ್ಲೆಯ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶವೇ ಇಲ್ಲದಂತೆ ಆಗಿದೆ. ಇದನ್ನು ತೆಗೆದು ಹಾಕಬೇಕು. ಕೋವಿಡ್ ವಿಪತ್ತು ಇರುವ ಈ ಸಂದರ್ಭದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳಿಗೂ ವರ್ಗಾವಣೆಗೆ ಅವಕಾಶ ನೀಡಬೇಕು. ತೆರವಾಗುವ ಸ್ಥಾನಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಈಗ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡೇ ಖಾಲಿ ಇರುವ ಅಷ್ಟು ಹುದ್ದೆಗಳನ್ನು ನಡೆಸಲಾಗುತ್ತದೆ. ವರ್ಗಾವಣೆಯಿಂದ ತೆರವಾದ ಸ್ಥಾನಗಳಷ್ಟನ್ನು ಅತಿಥಿ ಶಿಕ್ಷಕರ ಮೂಲಕ ಭರ್ತಿ ಮಾಡಿಕೊಳ್ಳಬಹುದಾಗಿದೆ.
ಸ್ಪಷ್ಟತೆ ಇರಲಿ:
ಸರ್ಕಾರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಿಯೇ ವರ್ಷವಾಗಿದೆ. ಹೀಗಾಗಿ, ಈಗ ಮತ್ತೆ ಅರ್ಜಿಯನ್ನು ಸಲ್ಲಿಸಲು ಅರ್ಹರಾದವರು ಹತ್ತಾರು ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲದೆ ಪರಸ್ಪರ ವರ್ಗಾವಣೆಯಲ್ಲಿ ಕೆಲವರು ವರ್ಗವಾಗಿದ್ದಾರೆ. ಕೆಲವರು ಅರ್ಹತೆ ಬಂದಿದೆ. ಕಪಲ್ ಕೇಸ್‌ನಲ್ಲಿಯೂ ಕೆಲವರು ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಬೇಡಿಕೆಯನ್ನು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲೆಯ ಶಿಕ್ಷಕರ ಸಂಘವೂ ಒತ್ತಾಯಿಸಿದೆ. ಈ ದಿಸೆಯಲ್ಲಿ ಸಚಿವ ಸುರೇಶ ಕುಮಾರ ಅವರು ಭರವಸೆಯನ್ನು ನೀಡಿದ್ದಾರೆ. ಆದರೆ, ಹಾಗೊಂದು ವೇಳೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೆ ಬಹಳಷ್ಟುಶಿಕ್ಷಕರಿಗೆ ಅನ್ಯಾಯವಾಗುತ್ತದೆ.
ಕೋವಿಡ್ ವಿಪತ್ತು ವರ್ಷದ ಈ ಸಂದರ್ಭದಲ್ಲಿ ಶಿಕ್ಷಕರ ವರ್ಗಾವಣೆ ಮಾಡುವ ವೇಳೆ ಶಿಕ್ಷಕ ಸ್ನೇಹಿ ಆಗಿರಬೇಕು. ಖಾಲಿ ಇರುವ ಅಷ್ಟೂಹುದ್ದೆಗಳನ್ನು ಷರತ್ತು ರಹಿತ ವರ್ಗಾವಣೆಗೆ ಅವಕಾಶ ನೀಡಬೇಕು. ಖಾಲಿಯಾಗುವ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಅನೇಕ ಶಿಕ್ಷಕರು ಬಲಿಯಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ವಿಪತ್ತು ವರ್ಷದಲ್ಲಿನ ವರ್ಗಾವಣೆಯಲ್ಲಿ ವಿನಾಯತಿ ಹೆಚ್ಚಾಗಿ ಇರಲಿ, ವಿಶೇಷ ಸಡಿಲಿಕೆ ನೀಡಬೇಕು ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ತಿಳಿಸಿದ್ದಾರೆ.