ಕಡುಬಡತನದಲ್ಲಿ ಮೈಕ್ರೋ ಬಯಾಲಾಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ತಸ್ನಿಮ್, ಮದುವೆಯಾಗಿ ಮಕ್ಕಳಾದ ಮೇಲು ಛಲ ಬಿಡದೆ ಸಾಧನೆ ಮಾಡಿದ ಮುಕ್ತಾಯಕ್ಕ
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಸೆ.13): ಆತ ವೈದ್ಯಕೀಯ ಕಾಲೇಜಿನಲ್ಲಿ ಲ್ಯಾಬ್ ಇನ್ ಚಾರ್ಜ್ ಆಗಿದ್ದ. ಲ್ಯಾಬ್ ಗೆ ಬರುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಂಡು ನನ್ನ ಮಗಳು ಡಾಕ್ಟರ್ ಆಗಬೇಕು ಎಂದು ಕನಸು ಕಾಣುತ್ತಿದ್ದ. ಇದೀಗ ತಂದೆಯ ಕನಸನ್ನು ಮಗಳು ನನಸು ಮಾಡಿದ್ದಾಳೆ. ಬಡತನದಲ್ಲಿಯೇ ಓದಿ ಬೆಳೆದ ಮಗಳು ವೈದ್ಯಕೀಯ ಸ್ನಾತಕೋತ್ತರ ಪದವಿ ಮುಗಿಸಿ ತಂದೆಯ ಗರಿಮೆಯನ್ನು ಹೆಚ್ಚಿಸಿದ ವಿದ್ಯಾರ್ಥಿನಿ ಒಂದು ಕಡೆಯಾದ್ರೆ, ಮದುವೆ ಆದ್ರೆ ಎಲ್ಲವೂ ಮುಗಿಯಿತು ಎನ್ನುವ ಕಾಲದಲ್ಲಿ, ಪಿಹೆಚ್ಡಿ ಮುಗಿಸಿ ಮಕ್ಕಳಾದ ಮೇಲೂ ಏನನ್ನಾದರೂ ಸಾಧಿಸಬಹುದು ಎನ್ನುವ ಮಹಿಳೆ ಇನ್ನೊಂದು ಕಡೆ. ಇವರಿಬ್ಬರೂ ಸಾಧಿಸುವ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ ತಸ್ನಿಮ್ ಮಸಳಿ
ನೀನು ಏನಾದರೂ ಓದು ಗಮನವಿಟ್ಟು ಓದು. ಓದಿನಲ್ಲಿಯೇ ಏನನ್ನಾದರೂ ಸಾಧಿಸು ಎನ್ನುವ ತಂದೆ-ತಾಯಿಯ ಮಾತನ್ನು ಕೇಳುತ್ತಾ, ತನ್ನಲ್ಲಿಯೇ ಸಾಧಿಸುವ ಛಲವನ್ನು ಬೆಳೆಸಿಕೊಂಡು ಸರಕಾರಿ ಕೋಟಾದಲ್ಲಿಯೇ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ಹಾಜ್ರ ತಸ್ನಿಮ್ ಮಸಳಿ ಬಡತನದಲ್ಲಿ ಅರಳಿದವಳು.
JEE Advanced Result 2022: ರಾಷ್ಟ್ರೋತ್ಥನ ಸಂಸ್ಥೆಯ 12 ವಿದ್ಯಾರ್ಥಿಗಳು Rank
ಮೈಕ್ರೋ ಬಯಾಲಾಜಿ ವಿಭಾಗದಲ್ಲಿ ತಸ್ನಿಮ್ ಸ್ನಾತಕೋತ್ತರ ಪದವಿ..!
ತಂದೆ ರಫೀಕ್ ಮಸಳಿ ವಿಜಯಪುರದ ಖಾಸಗಿ ಕಾಲೇಜಿನಲ್ಲಿ ಲ್ಯಾಬ್ ಇನ್ ಚಾರ್ಜ್ ಆಗಿದ್ದವರು, ಹಾಗೂ ತಾಯಿ ಯಾಸ್ಮಿನ್ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಗಳೇ ಹಾಜ್ರ ತಸ್ನಿಮ್. ವಿದ್ಯಾರ್ಥಿ ದೆಸೆಯಿಂದಲೇ ರ‍್ಯಾಂಕ್ ಸ್ಟುಡೆಂಟ್ ಆಗಿದ್ದ ಈಕೆ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದವಳು. ನಂತರ ಅಲ್ಪಸಂಖ್ಯಾತರ ಕೋಟಾದಲ್ಲಿ ಉಚಿತವಾಗಿ ಅಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಗಿಟ್ಟಿಸಿಕೊಂಡು, ಈಗ ಬಿಎಲ್ಡಿಇ ಡೀಮ್ಡ್ ವಿವಿಯಿಂದ ಮೈಕ್ರೋ ಬಯಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ.
ಪದವಿ ಪ್ರಮಾಣಪತ್ರ ಪಡೆಯೋವಾಗ ಅಪಾರ ಸಂತಸ
ನಿನ್ನೆ ನಡೆದ ಬಿಎಲ್ಡಿಇ ಡೀಮ್ಡ್ ವಿವಿಯ ಘಟಿಕೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರಿಂದ ಪದವಿಯ ಪ್ರಮಾಣ ಪತ್ರ ಪಡೆಯುವಾಗ ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ನಾನು ವೈದ್ಯಯೇ ಆಗಬೇಕೆಂಬ ಕನಸು ಕಂಡವಳಲ್ಲ, ಕಾರಣ ನಮ್ಮ ಬಡತನ. ಹೇಗಾದರೂ ಮಾಡಿ ಬಡತನ ಹೋಗಲಾಡಿಸಬೇಕು, ಇದಕ್ಕೆ ಓದುವುದು, ಒಳ್ಳೆಯ ಶಿಕ್ಷಣ ಪಡೆಯುವುದು ಒಂದೇ ಮಾರ್ಗ ಎಂದು ನಾನು ನಂಬಿದ್ದೆ. ನನ್ನ ಓದಿನ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ ಅಂತ ಸಂತಸ ವ್ಯಕ್ತಪಡಿಸಿದಳು.
ಬಡತನದ ನಡುವೆ ಹಠ ಹಿಡಿದು ಮಾಡಿದ ಸಾಧನೆ
ಮನೆಯವರಲ್ಲದೆ ಊರಿನವರೂ ನನ್ನ ಬಗ್ಗೆ ಮಾತನಾಡಿಕೊಂಡು ಖುಷಿ ಪಡುತ್ತಾರೆ. ಇದ್ದರೆ ನಿನ್ನಂತಹ ಮಗಳಿರಬೇಕು. ಹಠ ಮಾಡಿ ಓದಿ ಸಾಧನೆ ಮಾಡಿದ್ದೀಯ, ಇದು ಇಷ್ಟಕ್ಕೆ ನಿಲ್ಲಬಾರದು, ಇನ್ನಷ್ಟು ಓದಿ ಏನನ್ನಾದರೂ ಸಾಧನೆ ಮಾಡು ಎಂದು ಪ್ರೋತ್ಸಾಹಿಸುತ್ತಿದ್ದಾರೆ. ಅಪ್ಪ, ಅಮ್ಮನಿಗೆ ನನ್ನನ್ನು ಎಷ್ಟು ಹೊಗಳಿದರೂ ಸಮಾಧಾನವಿಲ್ಲ. ಮುಂದೆ ಪಿಎಚ್‌ಡಿ ಮಾಡಬೇಕೆಂಬ ಆಸೆ ಇದೆ ಎಂದು asianetsuvarnanews.com ಜೊತೆಗೆ ತಮ್ಮ ಸಂತಸ ಹಂಚಿಕೊಂಡರು.
ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರ: ರಾಘವೇಶ್ವರ ಶ್ರೀ
ಮದುವೆಯಾಗಿ ಮಕ್ಕಳಾದ್ರೂ ಛಲ ಬಿಡದ ಮುಕ್ತಾಯಕ್ಕ
ಇವೆಲ್ಲವುಗಳ ನಡುವೆ, ಮದುವೆ ಆದ್ರೆ ಎಲ್ಲವೂ ಮುಗಿದೆ ಹೋಯ್ತು ಎನ್ನುವ ಕಾಲದಲ್ಲಿ, ಅತ್ತೆ, ಮಾವ, ಗಂಡ ಹಾಗೂ ಮಕ್ಕಳು ಇವುಗಳ ಜಂಜಾಟದಲ್ಲಿಯೇ ಪಿಹೆಚ್ಡಿ ಪಡೆದು ಸಾಧನೆ ಮಾಡಿದ ಮಹಿಳೆ ಇನ್ನೊಂದು ಕಡೆ. ಇದೆ ಘಟಿಕೋತ್ಸವದಲ್ಲಿ ಮೈಕ್ರೋಬಯಾಲಜಿ ವಿಭಾಗದಲ್ಲಿ ಪಿಹೆಚ್ಡಿ ಪಡೆದ ಜಿ.ಮುಕ್ತಾಯಕ್ಕ ಕುಟುಂಬ ಸದಸ್ಯರ ಬೆಂಬಲದಿಂದ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಸಾಧನೆಯ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ asianetsuvarnanews.com ಜೊತೆಗೆ ಸಂತಸ ಹಂಚಿಕೊಂಡ ಮುಕ್ತಾಯಕ್ಕ, ನಾನು ಬಿಎಸ್ಸಿ ಓದುವಾಗಲೇ ಸಂಶೋಧನೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ಮದುವೆ, ಮಕ್ಕಳಾದ ಮೇಲೆ ಸ್ವಲ್ಪ ವಿಶ್ರಾಂತಿ ಪಡೆದಿದ್ದೆ. ಆದರೆ ಸಾಧಿಸುವ ಛಲ ಮಾತ್ರ ಬಿಟ್ಟಿರಲಿಲ್ಲ. ನನ್ನ ಮನೆಯ ಸದಸ್ಯರ ಬೆಂಬಲದಿಂದ ಈಗ ಪಿಹೆಚ್ಡಿ ಪಡೆಸಿದ್ದೇನೆ ನನಗೆ ತುಂಬಾ ಸಂತೋಷವಾಗಿದೆ, ಮದುವೆಯಾದ ಮಹಿಳೆಯರು ಯಾರೂ ಕೈಕಟ್ಟಿ ಕೂರಬೇಕಿಲ್ಲ. ಏನಾದ್ರು ಸಾಧನೆ ಮಾಡುವ ಛಲ ಇಟ್ಟುಕೊಳ್ಳಿ ಅಂತಾ ಮಹಿಳೆಯರಿಗೆ ಮನವಿ ಮಾಡಿದ್ರು.
ಇಬ್ಬರ ಸಾಧನೆಗೆ ಎಂ.ಬಿ. ಪಾಟೀಲ್ ಸಂತಸ
ಒಟ್ಟಾರೆಯಾಗಿ ಇವರಿಬ್ಬರೂ ಹೆಣ್ಣು ಮಕ್ಕಳು ತಮ್ಮ ಹಾಗೂ ತಮ್ಮ ಕುಟುಂಬದವರ ಆಸೆಯನ್ನು ಸತತ ಅಧ್ಯಯನ ಹಾಗೂ ಪರಿಶ್ರಮದಿಂದ ಈಡೇರಿಸಿದ್ದಾರೆ. ಇತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಈ ಮಹಿಳೆಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ್ ಅವರೂ ಸಂತಸ ವ್ಯಕ್ತಪಡಿಸಿದ್ದಾರೆ.