* ವಿದ್ಯಾರ್ಥಿಗಳ ಪರ ನಿಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
* ವಿದ್ಯಾರ್ಥಿಗಳ ಸಮಸ್ಯೆಗಳನ್ನ ಪರಿಹರಿಸುವಂತೆ ಸಿಎಂ ಮೊರೆ ಹೋದ ಸಚಿವ ಸುರೇಶ್ ಕುಮಾರ್
* ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಿಎಂಗೆ ಪತ್ರ
ಬೆಂಗಳೂರು, (ಜೂನ್.21): ಕೋವಿಡ್ ಕಾಲಘಟ್ಟದಲ್ಲಿ ಶಾಲಾ ಕಾಲೇಜು ತರಗತಿಗಳು ಆನ್‍ಲೈನ್ ಮೂಲಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇಂಟರ್ನಟ್ ನೆಟ್-ವರ್ಕ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮೂಹ ತೊಂದರೆಗೊಳಗಾಗಿದ್ದು, ಈ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನೆಟ್-ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್-ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ನೆಟ್ ವರ್ಕ್ ಸಮಸ್ಯೆಗೆ ಕೊನೆ ಹಾಡಲು ಆಪರೇಟರ್ ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕೆಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
undefined
ಶಾಲಾ ಶುಲ್ಕ ಹೆಚ್ಚಳ: ಪೋಷಕರಿಗೊಂದು ನೆಮ್ಮದಿ ಸುದ್ದಿ..!
ಇಂದಿನ ಸಂದರ್ಭವನ್ನು ಗಮನಿಸಿದರೆ ಈ ಕೋವಿಡ್ ಕಾಲಘಟ್ಟದಲ್ಲಿ ಆನ್ ಲೈನ್ ತರಗತಿಗಳೇ ಸಾಮಾನ್ಯವಾಗಬಹುದಾಗಿದೆ. ಕೋವಿಡ್ ಪೂರ್ವದ ಸಹಜ ಸಾಮಾಜಿಕ ಸ್ಥಿತಿಗತಿಗಳು ಸದ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹೊಸ ಸ್ಥಿತಿಗೆ ಹೊಂದಿಕೊಳ್ಳದೇ ಅನ್ಯದಾರಿ ಇಲ್ಲವಾದ್ದರಿಂದ ನಾವು ಅಂತರ್ಜಾಲ ನೆಟ್ ವರ್ಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕಿದೆ ಎಂದಿದ್ದಾರೆ.
ಮೊಬೈಲ್ ನೆಟ್-ವರ್ಕ್ ಸಿಗದೇ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಕಲಿಕಾ ಪ್ರಯತ್ನದಲ್ಲಿ ಮೊಬೈಲ್ ನೆಟ್ ವರ್ಕ್ ದೊರೆಯದೇ ಗುಡ್ಡದ ಮೇಲೆ ಮಳೆ ಹನಿಯಲ್ಲಿ ಪುಸ್ತಕ ಮತ್ತು ಮೊಬೈಲ್ ಹಿಡಿದು ಹತಾಶಳಾಗಿ ಕುಳಿತ ದೃಶ್ಯವೊಂದನ್ನು ಉಲ್ಲೇಖಿಸಿರುವ ಸಚಿವರು, ಆನ್-ಲೈನ್ ಶಿಕ್ಷಣ ಅನಿವಾರ್ಯವಾಗುತ್ತಿರುವ ಈ ದಿನಮಾನಗಳಲ್ಲಿ ವಿಶೇಷ ನೀತಿನಿರೂಪಣೆ ಮಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೆಟ್ ವರ್ಕ್ ಆಪರೇಟರ್ ಗಳ ಸಭೆಯನ್ನು ಶೀಘ್ರವೇ ಆಯೋಜಿಸಿ ಸಮರೋಪಾದಿಯಲ್ಲಿ ನೆಟ್-ವರ್ಕ್ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.