* ಭೌತಿಕ ತರಗತಿ ಆರಂಭವಾದರೆ ಪೂರ್ಣ ಶುಲ್ಕ
* ಆನ್‌ಲೈನ್ ಕ್ಲಾಸ್ ನಡೆದರೆ ಶುಲ್ಕ ಕಡಿತ
* ಖಾಸಗಿ ಶಾಲಾ ಆಡಳಿತಗಳ ಒಕ್ಕೂಟ ನಿರ್ಧಾರ
ಬೆಂಗಳೂರು(ಜೂ.21): ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲೂ (2021-22) ನಮ್ಮ ಶಾಲೆಗಳಲ್ಲಿ ಶುಲ್ಕ ಹೆಚ್ಚಿಸುವುದಿಲ್ಲ, 2019-20ರಲ್ಲಿ ಇದ್ದಷ್ಟೇ ಶುಲ್ಕ ಇರಲಿದೆ. ಭೌತಿಕ ತರಗತಿಗಳು ಆರಂಭವಾದರೆ ಪೂರ್ಣ ಶುಲ್ಕ ಪಡೆಯುತ್ತೇವೆ. ಆನ್‌ಲೈನ್ ತರಗತಿಗಳನ್ನಷ್ಟೇ ನಡೆಸಬೇಕಾಗಿ ಬಂದರೆ ಸರ್ಕಾರ ನಿಗದಿಪಡಿಸುವ ಶುಲ್ಕ ಕಡಿತ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ ಎಂದು ‘ಕರ್ನಾಟಕ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ’ ಘೋಷಿಸಿದೆ.
ಅಲ್ಲದೆ, ಕೋವಿಡ್ ಸೋಂಕಿನಿಂದ ತಂದೆ, ತಾಯಿ ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ಉಚಿತ ಶಿಕ್ಷಣ ಸೇರಿದಂತೆ ಹಲವು ನಿರ್ಣಯ ಹಾಗೂ ಖಾಸಗಿ ಶಾಲೆಗಳು ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಸೇರಿ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಸಲ್ಲಿಸಲು ಒಕ್ಕೂಟ ತೀರ್ಮಾನಿಸಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಪ್ರಮುಖವಾಗಿ ಈ ವರ್ಷವೂ ಶುಲ್ಕ ಹೆಚ್ಚಿಸದಿರಲು ತೀರ್ಮಾನಿಸಿದ್ದೇವೆ. ಸದ್ಯಕ್ಕೆ ಪೋಷಕರ ಮೇಲೆ ಒತ್ತಡ ಹೇರದೆ ಅಲ್ಪ ಸ್ವಲ್ಪ ಶುಲ್ಕ ನೀಡಿದರೂ ಮಕ್ಕಳ ದಾಖಲಾತಿ ಮಾಡಲಾಗುವುದು. ಕೋವಿಡ್ ತಹಬದಿಗೆ ಬಂದು ಸರ್ಕಾರ ಭೌತಿಕ ತರಗತಿಗೆ ಅವಕಾಶ ನೀಡಿದರೆ ಪೂರ್ಣ ಶುಲ್ಕ ಪಡೆಯುತ್ತೇವೆ. ಒಂದು ವೇಳೆ ಈ ವರ್ಷವೂ ಆನ್‌ಲೈನ್ ತರಗತಿಯೇ ಅನಿವಾರ್ಯವಾದರೆ ಸರ್ಕಾರ ನಿಗದಿಪಡಿಸುವ ಶುಲ್ಕ ಪಡೆಯಲು ನಮ್ಮ ಒಕ್ಕೂಟದಡಿ ಬರುವ ರುಪ್ಸಾ ಕರ್ನಾಟಕ ಸೇರಿ 12 ಸಂಘಟನೆಗಳಡಿ ನೋಂದಾಯಿತ 10 ಸಾವಿರಕ್ಕೂ ಹೆಚ್ಚು ಶಾಲೆಗಳು ಬದ್ಧ ಎಂದರು.
ಅತಿಥಿ ಬೋಧಕರ ಸೇವೆ ಕಾಯಂ ಮಾಡಿ: ಸಿಎಂಗೆ ಹೊರಟ್ಟಿ ಪತ್ರ
ಉಚಿತ ಶಿಕ್ಷಣ:
ಅಲ್ಲದೆ, ಕೋವಿಡ್‌ನಿಂದ ತಂದೆ, ತಾಯಿ ಅಥವಾ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಒಕ್ಕೂಟದ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ತೀರ್ಮಾನಿಸಲಾಗಿದೆ. ಅಂತಹ ಮಕ್ಕಳ ಮಾಹಿತಿಯನ್ನು ಒಕ್ಕೂಟದ ಯಾವುದೇ ಪದಾಧಿಕಾರಿಗಳ ಗಮನಕ್ಕೆ ತಂದರೆ ಮಕ್ಕಳ ವಾಸಸ್ಥಳದ ಸಮೀಪದ ಯಾವುದಾದರೂ ಶಾಲೆಯಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದರು.
ಬಡ್ಡಿ ಮನ್ನಾ ಮಾಡಿ:
ಸರ್ಕಾರ ಕಳೆದ ವರ್ಷ ಶೇ.30ರಷ್ಟು ಶುಲ್ಕ ಕಡಿತಗೊಳಿಸಿದರೂ ಶೇ.50ರಷ್ಟು ಪೋಷಕರು ಶೇ.70ರಷ್ಟು ಶುಲ್ಕವನ್ನೂ ಪಾವತಿಸಿಲ್ಲ. ಶೇ.30ರಷ್ಟು ಪೋಷಕರು 2019-20ರ ಶುಲ್ಕದಲ್ಲೂ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಾಕಿ ವಸೂಲಿ ಸಮಸ್ಯೆ ಇತ್ಯರ್ಥಕ್ಕೆ ಆದಷ್ಟು ಬೇಗ ಪರಿಹಾರ ನೀಡಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳಿಗೂ ಆರ್ಥಿಕ ಪರಿಹಾರ ನೀಡಬೇಕು. ಶಾಲೆಗಳು ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಒಟ್ಟು 12 ವಿಷಯಗಳ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ರುಪ್ಸಾ ಕರ್ನಾಟಕ ಅಧ್ಯಕ್ಷರೂ ಆದ ಲೋಕೇಶ್ ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ಖಾಸಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಒಕ್ಕೂಟದ ಉಪಾಧ್ಯಕ್ಷ ರಾಮಲಿಂಗೇಗೌಡ ಸೇರಿದಂತೆ ಉತ್ತರ ಕನ್ನಡ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮತಿ, ದಕ್ಷಿಣ ಕನ್ನಡ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಕರ್ನಾಟಕ ಮೈನಾರಿಟಿ ಸ್ಕೂಲ್ಸ್ ಅಸೋಸಿಯೇಷನ್, ಕರ್ನಾಟಕ ಎಸ್ಸಿ-ಎಸ್ಟಿ ಸ್ಕೂಲ್ಸ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸೇರಿ ಒಟ್ಟು 12 ಸಂಘಟನೆಗಳ ಅನೇಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.