* ಇಂಜಿನಿಯರಿಂಗ್ ಪ್ರವೇಶಾವಕಾಶ ನೀಡಿದ ಸುಪ್ರೀಂ ಕೋರ್ಟ್
* ಡಿ.31ರವರೆಗೂ ಪ್ರವೇಶಾವಕಾಶ
* ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ
ಬೆಂಗಳೂರು, (ಡಿ.17): ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ಕೋರ್ಸುಗಳಿಗೆ ಡಿ.31ರವರೆಗೂ ಪ್ರವೇಶಾವಕಾಶ (Engineering Admissions) ಕಲ್ಪಿಸಲು ಸುಪ್ರೀಂಕೋರ್ಟ್ (Supreme Court) ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಮಾಹಿತಿ ನೀಡಿದ್ದಾರೆ.
ಇಂದು ಶುಕ್ರವಾರ ಈ ಬಗ್ಗೆ ಮಾತನಾಡಿರುವ ಅಶ್ವತ್ಥ್ ನಾರಾಯಣ, ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರತೀವರ್ಷ ಜುಲೈ 31ರೊಳಗೆ ಪ್ರವೇಶಾತಿ ಮುಗಿಸುವಂತೆ ಈ ಹಿಂದೆ (2012ರಲ್ಲಿ) ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂಜಿನಿಯರಿಂಗ್ ಮತ್ತು ಫಾರ್ಮಸಿ ಕೋರ್ಸುಗಳಿಗೆ ಡಿ.31ರವರೆಗೂ ಪ್ರವೇಶ ಪಡೆಯಲು ಅವಕಾಶ ಕೊಡಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಸಲ್ಲಿಸಿತ್ತು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯದ ಮನವಿಯನ್ನು ಪುರಸ್ಕರಿಸಿದೆ ಎಂದು ತಿಳಿಸಿದರು.
undefined
SSLC Exams: ಈ ವರ್ಷವೇ ಬದಲಾವಣೆ: ಬಹು ಮಾದರಿ ಆಯ್ಕೆ ರದ್ದು
ಸುಪ್ರೀಂಕೋರ್ಟಿನ ಆದೇಶದಂತೆ ಇದೇ ತಿಂಗಳ 31ರೊಳಗೆ ಎಂಜಿನಿಯರಿಂಗ್ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮುಗಿಸಬೇಕಾಗಿದೆ. ಹೀಗಾಗಿ ವೈದ್ಯಕೀಯ ಸೀಟು ಹಂಚಿಕೆಯ ನಂತರ ಖಾಲಿ ಉಳಿದ ಎಂಜಿನಿಯರಿಂಗ್, ಆರ್ಕಿಕೆಟ್ಚರ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ಸೀಟುಗಳಿಗೆ ಮತ್ತೊಮ್ಮೆ `ಕ್ಯಾಶುಯಲ್ ವೇಕೆನ್ಸಿ ರೌಂಡ್’ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳನ್ನು ಒಟ್ಟಿಗೇ ಹಂಚಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಆದಾಯ ಮಿತಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದು ಇತ್ಯರ್ಥವಾಗುವವರೆಗೂ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿ ಕೈಗೊಳ್ಳದಂತೆ ತಡೆಯಾಜ್ಞೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ಮತ್ತು ಭಾರತೀಯ ಮೆಡಿಕಲ್ ಕೌನ್ಸಿಲ್ ಜತೆ ಚರ್ಚಿಸಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ ಸಂಯೋಜಿತವಾಗಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸುವಂತೆ ಕೇಂದ್ರ ಸರಕಾರವನ್ನು ಕೋರಲಾಗುವುದು ಎಂದು ಅವರು ಹೇಳಿದರು.