SSLC Exams: ಈ ವರ್ಷವೇ ಬದಲಾವಣೆ: ಬಹು ಮಾದರಿ ಆಯ್ಕೆ ರದ್ದು

By Kannadaprabha NewsFirst Published Dec 17, 2021, 5:32 AM IST
Highlights

*  ಎಸ್ಸೆಸ್ಸೆಲ್ಸಿ ಪರೀಕ್ಷೇಲಿ ಬದಲಾವಣೆ: ಬಹು ಮಾದರಿ ಆಯ್ಕೆ ರದ್ದು
*  ಮೊದಲಿನಂತೆ ವಿವರವಾಗಿ ಉತ್ತರ ಬರೆಯುವ ಪದ್ಧತಿ ಜಾರಿಗೆ
*  ಸರ್ಕಾರದ ನಿರ್ಧಾರಕ್ಕೆ ಶಿಕ್ಷಕರ ಸಂಘಟನೆಗಳ ಪರ-ವಿರೋಧ
 

ಬೆಂಗಳೂರು(ಡಿ.17):   ಎಸ್‌ಎಸ್‌ಎಲ್‌ಸಿ(SSLC) ಅಂತಿಮ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಟ್ಟು ಮೊದಲಿನಂತೆ ವಿವರವಾಗಿ ಉತ್ತರ ಬರೆಯುವ ಪದ್ಧತಿ ಜಾರಿಗೆ ತರಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು(Karnataka Secondary Education Examination Board) ನಿರ್ಧರಿಸಿದೆ. ಈ ನಿರ್ಧಾರಕ್ಕೆ ಶಿಕ್ಷಕರ ಸಂಘಟನೆಗಳಿಂದ ಪರ-ವಿರೋಧ ವ್ಯಕ್ತವಾಗಿದೆ.

ಮೊದಲಿನಿಂದಲೂ ವಿವರವಾದ ಉತ್ತರ ಪದ್ಧತಿಯೇ ಇತ್ತು. ಆದರೆ ಕೊರೋನಾ(Coronavirus) ಹಿನ್ನೆಲೆಯಲ್ಲಿ 2021ರಲ್ಲಿ ಮಾತ್ರ ಬಹು ಆಯ್ಕೆ(Multiple Choice Question) ಪದ್ಧತಿಯಲ್ಲಿ ಪ್ರಶ್ನೆಗಳನ್ನು ನೀಡಲಾಗುವುದು ಎಂದು ಮಂಡಳಿ ಮೊದಲೇ ತಿಳಿಸಿತ್ತು. ಇದೀಗ ಅದರಂತೆ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ಕೆಲವರು ಸ್ವಾಗತಿಸಿದರೆ, ಕೆಲವರು ಒಂದೊಂದು ಪದ್ಧತಿಯಲ್ಲಿ ಮಧ್ಯ ವಾರ್ಷಿಕ ಮತ್ತು ಅಂತಿಮ ಪರೀಕ್ಷೆ(Examination) ನಡೆಸಲಿ ಎಂದು ಒತ್ತಾಯಿಸಿದ್ದಾರೆ.

Good news for SSLC Students: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌, ವಿವರವಾಗಿ ಉತ್ತರ ಬರೆಯುವ ಪದ್ಧತಿಯಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟಹೆಚ್ಚುತ್ತದೆ. ಅಲ್ಲದೆ ಬರವಣಿಗೆ ಕೌಶಲ ಹಾಗೂ ಜ್ಞಾನಮಟ್ಟ ವೃದ್ಧಿಯಾಗಲಿದೆ. ಬಹು ಆಯ್ಕೆ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಬರೆಯುವುದನ್ನೇ ಮರೆಯುತ್ತಾರೆ ಎಂದು ವಿವರಿಸಿದರು.

ವಿಷಯದ ವಿಶ್ಲೇಷಣೆ:

ವಿವರವಾಗಿ ಉತ್ತರ ಬರೆಯುವುದರಿಂದ ವಿಷಯದ ವಿಶ್ಲೇಷಣೆ ನಡೆಸಲಾಗುತ್ತದೆ. ಹೀಗಾಗಿ ಪರೀಕ್ಷಾ ಪದ್ಧತಿಯಲ್ಲಿ ಬರವಣಿಗೆಗೆ ಒತ್ತು ನೀಡಬೇಕು. ಬಹು ಆಯ್ಕೆ ಕೈಬಿಡುವಂತೆ ಮಂಡಳಿಗೆ ಮನವಿ ಮಾಡಲಾಗಿದ್ದು, ಬದಲಾವಣೆ ತರುವುದಾಗಿ ಹೇಳಿದೆ. ಶಿಕ್ಷಕರು ಹಾಗೂ ತಜ್ಞರ ಅಭಿಪ್ರಾಯ ಪಡೆದು ಬಹು ಆಯ್ಕೆ ಪ್ರಶ್ನೆ ಪದ್ಧತಿ ಕೈಬಿಡಲಾಗಿದೆ. ಪ್ರಥಮ ಭಾಷೆಗೆ 125 ಅಂಕ ನಿಗದಿಪಡಿಸಲಾಗಿದ್ದು, ಯಾವುದೇ ಆಂತರಿಕ ಪರೀಕ್ಷೆ ಇರುವುದಿಲ್ಲ. ಉಳಿದ ವಿಷಯಗಳಿಗೆ 100 ಅಂಕ ನಿಗದಿ ಮಾಡಿದ್ದು, ಇದರಲ್ಲಿ 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೋನಾ ಭೀತಿ ಇರುವುದರಿಂದ ಈಗಾಗಲೇ ಪೂರೈಸಲಾಗಿರುವ ಸಿಲೆಬಸ್‌ ಆಧಾರದಲ್ಲಿ ಮೊದಲು ಮಧ್ಯ ವಾರ್ಷಿಕ ಪರೀಕ್ಷೆಯನ್ನು ಬಹು ಆಯ್ಕೆ ಪದ್ಧತಿಯಂತೆ ನಡೆಸಲಿ. ಅಂತಿಮ ಪರೀಕ್ಷೆಯನ್ನು ವಿವರವಾದ ಉತ್ತರ ಪದ್ಧತಿಯಂತೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.

National Education Policy: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ

ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಲ್ಕ ಏರಿಕೆ

ಕೊರೋನಾ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನುಸರಿಸಿದ್ದರಿಂದ ಹೊರೆಯಾದ ವೆಚ್ಚ ಸರಿದೂಗಿಸಲು ಹಾಗೂ ಪರೀಕ್ಷಾ ಪ್ರಕ್ರಿಯೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು 100 ರು. ಹೆಚ್ಚಿಸಿ ಶಿಕ್ಷಣ ಇಲಾಖೆ ದೇಶ ಹೊರಡಿಸಿದೆ. ಅದರಿಂದಾಗಿ ಶುಲ್ಕ 485 ರು.ನಿಂದ 585 ರು.ಗೆ ಏರಿಕೆಯಾಗಿದೆ. ಪುನರಾವರ್ತಿತ ಶಾಲಾ, ಖಾಸಗಿ ಅಭ್ಯರ್ಥಿಗಳು ಒಂದು ವಿಷಯಕ್ಕೆ ಕಟ್ಟಬೇಕಿದ್ದ ಶುಲ್ಕವನ್ನು 320 ರಿಂದ 370 ಕ್ಕೆ ಹೆಚ್ಚಳ ಮಾಡಲಾಗಿದೆ. 
2 ವಿಷಯಕ್ಕೆ 386 ರು. ಪಾವತಿಸಬೇಕಿದ್ದ  ಎಸ್‌ಎಸ್‌ಎಲ್‌ಸಿ  ವಿದ್ಯಾರ್ಥಿಗಳು 461 ರು. ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 520 ರು. ಬದಲಿಗೆ 620 ರು. ಪರೀಕ್ಷಾ ಶುಲ್ಕ ಪಾವತಿಸಬೇಕಿದೆ. 

ಸಿಬಿಎಸ್‌ಸಿ ವಿದ್ಯಾರ್ಥಿಗಳ ನೋಂದಣಿ ಡಿ.15 ರಿಂದ ಆರಂಭ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಬುಧವಾರ 2021-22 ನೇ ತರಗತಿಗೆ 9 ಮತ್ತು 10ನೇ ತರಗತಿಗಳಿಗೆ ವಿದ್ಯಾರ್ಥಿಗಳ ನೋಂದಣಿ ಡಿಸೆಂಬರ್ 15 ರಿಂದ ಪ್ರಾರಂಭವಾಗುತ್ತದೆ ಎಂದು ಅಧಿಕೃತ ಮಾಹಿತಿ ನೀಡಿದೆ. ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಲಿಂಕ್ ಲಭ್ಯವಾಗಲಿದೆ ಮಾತ್ರವಲ್ಲ ಅಂಗಸಂಸ್ಥೆ (affiliated) ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಒಂಬತ್ತನೇ ಮತ್ತು ಹತ್ತನೇ ತರಗತಿಗಳಿಗೆ ಆನ್‌ಲೈನ್‌ನಲ್ಲಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮುನ್ನ ತಾವು ನೋಂದಣಿ ಮಾಡಿಕೊಳ್ಳಬೇಕು ಎಂದು ಮಂಡಳಿ ತಿಳಿಸಿದೆ. ಆನ್​ಲೈನ್​ ನೋಂದಣಿ ಪ್ರಕ್ರಿಯೆ ಮೂಲಕ ಹೆಸರು ಸಲ್ಲಿಸಿದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ 2022-23 ನೇ ಸಾಲಿನ ಬೋರ್ಡ್​ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿಸಲಾಗುವುದು ಎಂದು CBSE ಸ್ಪಷ್ಟಪಡಿಸಿದೆ. 
 

click me!