ಎಸ್ಸೆಸ್ಸೆಲ್ಸಿ ಫಲಿತಾಂಶ ಬೆನ್ನಲ್ಲೇ ಕಾಲೇಜುಗಳಿಗೆ ವಿದ್ಯಾರ್ಥಿಗಳ ದೌಡು

By Kannadaprabha News  |  First Published Aug 11, 2021, 7:59 AM IST
  • ಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ
  • ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳತ್ತ ಧಾವಿಸಿದರು
  •  ಲಭ್ಯ ಕೋರ್ಸುಗಳ ಮಾಹಿತಿ ಪ್ರವೇಶ ಶುಲ್ಕದ ಮಾಹಿತಿ ಪಡೆದರು

 ಬೆಂಗಳೂರು (ಆ.11):  ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಗಳವಾರದಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳತ್ತ ಧಾವಿಸಿ ಲಭ್ಯ ಕೋರ್ಸುಗಳ ಮಾಹಿತಿ ಪ್ರವೇಶ ಶುಲ್ಕದ ಮಾಹಿತಿ ಪಡೆದಿದ್ದು ಕಂಡುಬಂತು.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಪಿಯು ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭಿಸಬಹುದೆಂದು ಕಳೆದ ಜು.23ರಂದು ಪಿಯು ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಇದೀಗ ಮಂಗಳವಾರ ಪ್ರವೇಶ ಪ್ರಕ್ರಿಯೆಗೆ ಸಂಬಂಧ ವಿವರವಾದ ವೇಳಾಪಟ್ಟಿಪ್ರಕಟಿಸಿ ಆ.10ರಿಂದ 31ರವರೆಗೆ ದಂಡ ಶುಲ್ಕವಿಲ್ಲದೆ ಕಾಲೇಜುಗಳಲ್ಲಿ ದಾಖಲಾತಿ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. 670 ರು. ದಂಡ ಶುಲ್ಕದೊಂದಿಗೆ ಸೆ.1ರಿಂದ 11ರವರೆಗೆ ಹಾಗೂ 2890 ರು. ವಿಶೇಷ ದಂಡ ಶುಲ್ಕದೊಂದಿಗೆ ಸೆ.13ರಿಂದ 25ರವರೆಗೆ ದಾಖಲಾತಿ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ, ಆ.16ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಆರಂಭಿಸಲು ಕೂಡ ಇಲಾಖೆ ಸೂಚಿಸಿದೆ.

Tap to resize

Latest Videos

ಈ ಬಾರಿ SSLC ಫಲಿತಾಂಶ ಮರು ಮೌಲ್ಯಮಾಪನ ಇಲ್ಲ..!

ಪ್ರವೇಶಕ್ಕೆ ಒತ್ತಡ:  ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲಾ 8.71 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಉತ್ತೀರ್ಣಗೊಂಡಿರುವುದರಿಂದ ಸಹಜವಾಗಿಯೇ ಪಿಯು ಕಾಲೇಜುಗಳಲ್ಲಿ ಪ್ರವೇಶಕ್ಕೆ ಭಾರೀ ಒತ್ತಡದ ಸ್ಥಿತಿ ನಿರ್ಮಾಣಗೊಳ್ಳಲಿದೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶೇ.71.80ರಷ್ಟುಫಲಿತಾಂಶದೊಂದಿಗೆ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಪಿಯು ಪ್ರವೇಶಕ್ಕೆ ಅರ್ಹರಾಗಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ 2.5 ಲಕ್ಷ ಮಕ್ಕಳು ಅರ್ಹರಾಗಿದ್ದಾರೆ. ಸರ್ಕಾರ ಪಿಯು ಕಾಲೇಜುಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಸೀಟುಗಳು ಪ್ರವೇಶಕ್ಕೆ ಲಭ್ಯವಿದೆ ಎಂದು ಹೇಳಿದ್ದರೂ ಹೆಚ್ಚು ಬೇಡಿಕೆ ಇರುವ ವಾಣಿಜ್ಯ, ವಿಜ್ಞಾನ ಕೋರ್ಸುಗಳು ಎಲ್ಲ ಕಾಲೇಜುಗಳಲ್ಲೂ ಇಲ್ಲದಿರುವುದು ಒತ್ತಡಕ್ಕೆ ಕಾರಣವಾಗಿದೆ.

ಮೊದಲ ಪ್ರಯತ್ನದಲ್ಲೇ SSLC ಪರೀಕ್ಷೆ ಬರೆದು ಪಾಸ್ ಆದ 44 ವರ್ಷದ ಕರ್ನಾಟಕದ ಮಹಿಳೆ

ಮೊದಲು ಸೀಟು ಬ್ಲ್ಯಾಕ್‌:  ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸುವುದಾಗಿ ಸರ್ಕಾರ ಮೊದಲೇ ಪ್ರಕಟಿಸಿದ್ದರಿಂದ ಕೆಲ ಕಾಲೇಜುಗಳು ಮೊದಲೇ ಪ್ರವೇಶಾಕಾಂಕ್ಷಿ ವಿದ್ಯಾರ್ಥಿಗಳಿಗೆ ಸೀಟು ಕಾಯ್ದಿರಿಸಿ ಈಗ ಫಲಿತಾಂಶ ಪ್ರಕಟವಾದ ಬಳಿಕ ಪ್ರವೇಶ ಪ್ರಕ್ರಿಯೆ ಆರಂಭಿಸಿರುವುದು ಕಂಡುಬರುತ್ತಿದೆ. ನಗರದ ಮಲ್ಲೇಶ್ವರದ ಪ್ರತಿಷ್ಠಿತ ಕಾಲೇಜಿನಲ್ಲಿ ದಾಖಲಾತಿಗೆ ಮಂಗಳವಾರ ಆಗಮಿಸಿದ್ದ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಮೊದಲೇ ಇತ್ತು. ಅದರಂತೆ ಶೇ.80ರಷ್ಟುಫಲಿತಾಂಶ ಬಂದಿದೆ. ಪೋಷಕರ ಸಲಹೆಯಂತೆ ಮೊದಲೇ ನನ್ನ ಇಚ್ಚೆಯ ಕಾಲೇಜಿನಲ್ಲಿ ಸಂಬಂಧಿಸಿದ ಶುಲ್ಕ ಪಾವತಿಸಿ ಸೀಟು ಕಾಯ್ದಿರಿಸಿದ್ದೆ. ಈಗ ಪ್ರವೇಶ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.

ಕೆಲ ಪ್ರತಿಷ್ಠಿತ ಖಾಸಗಿ ಪಿಯು ಕಾಲೇಜುಗಳಲ್ಲಿ ಪ್ರವೇಶಕ್ಕೆ ಪ್ರತ್ಯೇಕ ಪ್ರವೇಶ ಪರೀಕ್ಷೆ ಕೂಡ ನಿಗದಿಪಡಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ತೆಗೆಯುವ ಅಂಕಗಳನ್ನು ಆಧರಿಸಿ ಲಭ್ಯ ಸೀಟುಗಳಿಗೆ ಮೆರಿಟ್‌ ಲಿಸ್ಟ್‌ ಪ್ರಕಟಿಸಲಾಗುವುದು ಎಂದು ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹೇಳುತ್ತಿದ್ದಾರೆ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ಮಕ್ಕಳೂ ಉತ್ತೀರ್ಣವಾಗಿರುವುದರಿಂದ ಸಹಜವಾಗಿಯೇ ಪಿಯು ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಮೊದಲ ದಿನದಿಂದಲೇ ಸಾಕಷ್ಟುಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಭೇಟಿ ನೀಡಿ ಲಭ್ಯ ಕೋರ್ಸು, ಯಾವ್ಯಾವ ಕೋರ್ಸಿಗೆ ಎಷ್ಟುಪ್ರವೇಶ ಶುಲ್ಕ ಮತ್ತಿತರ ಮಾಹಿತಿ ಪಡೆದು ಹೋಗುತ್ತಿದ್ದಾರೆ. ಕೆಲವರು ದಾಖಲಾತಿ ಪ್ರಕ್ರಿಯೆಯನ್ನೂ ಆರಂಭಿಸಿದ್ದಾರೆ. ಈ ಭಾರಿ ಲಭ್ಯ ಸೀಟುಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆ ಇದೆ.

ನಾರಾಯಣಪ್ಪ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಚಾಮರಾಜಪೇಟೆ

ಸಹಜವಾಗಿಯೇ ಈ ಬಾರಿಯು ವಾಣಿಜ್ಯ ಕೋರ್ಸುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ನಂತರದ ಸಾಲಿನಲ್ಲಿ ವಿಜ್ಞಾನ ವಿಭಾಗದ ಕೋರ್ಸುಗಳು ಮತ್ತು ಕಲಾ ವಿಭಾಗದ ಕೋರ್ಸುಗಳಿಗೂ ಪ್ರವೇಶಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

ರುಕ್ಮಾನಂದ ನಾಯ್ಡು, ಸಂಸ್ಥಾಪಕರು, ಶ್ರೀಕೃಷ್ಣ ಪಿಯು ಕಾಲೇಜು, ವಿದ್ಯಾಪೀಠ

click me!