15 ದಿನಗಳ ಅಂತರದಲ್ಲಿ ಎರಡೆರಡು ಸೆಮಿಸ್ಟರ್‌ ಪರೀಕ್ಷೆ: ವಿದ್ಯಾರ್ಥಿಗಳ ಅಳಲು

By Kannadaprabha NewsFirst Published Aug 2, 2021, 1:40 PM IST
Highlights

* ಸ್ನಾತಕ, ಸ್ನಾತಕೋತ್ತರ ಕೊನೆಯ ವರ್ಷದ ವಿದ್ಯಾರ್ಥಿಗಳ ಅಳಲು
*  ಮುಂದೂಡಿದ್ದ ಪರೀಕ್ಷೆಗಳನ್ನು ನಡೆಸಬಾರದು: ಎಸ್‌ಎಫ್‌ಐ ಮನವಿ 
* ಸೂಚಿಸಿದ ದಿನಾಂಕದಂದು ಪರೀಕ್ಷೆ ನಡೆಸಲು ಕವಿವಿ ತಯಾರಿ 
 

ಅಕ್ಷಯಕುಮಾರ ಶಿವಶಿಂಪಿಗೇರ

ಗದಗ(ಆ.02):  ಒಂದೇ ತಿಂಗಳ ಅಂತರದಲ್ಲಿ ನಾವು ಎರಡು ಸೆಮಿಸ್ಟರ್‌ ಬರೆಯುವುದಾದರೂ ಹೇಗೆ? ಕೋವಿಡ್‌ ಸೋಂಕು ಹರಡುವಿಕೆ ಹಾಗೂ ಕವಿವಿಯ ವಿಳಂಬ ನೀತಿಗಳಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ದ ಸ್ನಾತಕ ಹಾಗೂ ಸ್ನಾತಕೋತ್ತರ ಕೊನೆಯ ವರ್ಷದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಹೌದು, ಆ. 16ರಿಂದ 1, 3, 5ನೇ ಸೆಮಿಸ್ಟರ್‌ ಪರೀಕ್ಷೆ ನಡೆಸಲು ಹಾಗೂ ಸೆಪ್ಟೆಂಬರ್‌ 16ರಿಂದ 4 (2 ವರ್ಷದ ಕೋರ್ಸ್‌ಗೆ) ಹಾಗೂ 6ನೇ ಸೆಮ್‌ (3 ವರ್ಷದ ಕೋರ್ಸ್‌ಗೆ) ಪರೀಕ್ಷೆ ನಡೆಸುವುದಾಗಿ ಸೂಚಿಸಿದ್ದು, ಇದರಿಂದ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದಲ್ಲಿ ಅಭ್ಯಸಿಸುತ್ತಿರುವ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು 15 ದಿನಗಳ ಅಂತರದಲ್ಲಿ ಎರಡು ಸೆಮ್‌ ಪರೀಕ್ಷೆ ಬರೆಯುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಕೊನೆಯ ವರ್ಷದ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ಹಲವು ಸಂಕಷ್ಟ:

ಕೊರೋನಾ ಪದವಿ ಆನ್‌ಲೈನ್‌ ತರಗತಿಗಳಲ್ಲೇ ಪದವಿ ಮುಗಿಸುವಂತಾಗಿದೆ. ಸೂಕ್ತ ಬೋಧನೆ ಇಲ್ಲದೇ ಕೊರಗುವಂತಾಗಿದೆ. ಇದಕ್ಕೆ ಕವಿವಿಯೂ ಹೊರತಾಗಿಲ್ಲ. ಕರ್ನಾಟಕ ವಿವಿಯ ವಿಳಂಬ ನೀತಿ ಹಾಗೂ ಸಾರಿಗೆ ನೌಕರರ ಮುಷ್ಕರ ಇಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಮಹಾಮಾರಿ ಕೊರೋನಾ ಪರಿಣಾಮ, ಸರ್ಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಅನುಸರಿಸಿದ ವಿಳಂಬ ನೀತಿಯಿಂದಾಗಿ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯಾರ್ಥಿಗಳು ಒಂದು ತಿಂಗಳ ಅಂತರದಲ್ಲಿ ಎರಡು ಸೆಮ್‌ ಪರೀಕ್ಷೆ ಬರೆಯಲು ಕೋವಿಡ್‌ ಹೇಗೆ ಕಾರಣವಾಯಿತೋ ಹಾಗೆಯೇ ಧಾರವಾಡದ ಕವಿವಿಯ ವಿಳಂಬ ನೀತಿ ಹಾಗೂ ಪರೀಕ್ಷೆ ನಡೆಸಬೇಕು ಎನ್ನುವ ಹೊತ್ತಿಗೆ ಸಾರಿಗೆ ನೌಕರರು ಕೈಗೊಂಡ ಮುಷ್ಕರ ಸಹ ಕಾರಣವಾಗಿದೆ.

ಫೆಬ್ರುವರಿಯಲ್ಲೇ ನಡೆಯಬೇಕಿತ್ತು ಪರೀಕ್ಷೆ:

ಈ ಹಿಂದೆ ಜನವರಿಯಲ್ಲಿ ಕವಿವಿ ಕಾಲೇಜು ಪ್ರಾಂಶುಪಾಲರು ಹಾಗೂ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ, 1, 3, 5ನೇ ಸೆಮ್‌ ವಿದ್ಯಾರ್ಥಿಗಳ ವರ್ಕಿಂಗ್‌ ಡೇ ಜ. 30ರ ವರೆಗೆ ಹಾಗೂ ಫೆಬ್ರುವರಿಯಲ್ಲಿ ಪರೀಕ್ಷೆ ನಡೆಸುವುದಾಗಿಯೂ ಹೇಳಿತ್ತು. ಆದರೆ, ಆಗ ಕಾರಣಾಂತರದಿಂದ ಪರೀಕ್ಷೆ ನಡೆಸಲೇ ಇಲ್ಲ. ಇದೇ ವೇಳೆ ಸಾರಿಗೆ ನೌಕರರ ಮುಷ್ಕರ ಆರಂಭಿಸಿದ್ದು ಸಹ ವಿಳಂಬಕ್ಕೆ ಕಾರಣವಾಯಿತು. ಕೊನೆಯದಾಗಿ ವಿವಿ ನೂತನ ವೇಳಾಪಟ್ಟಿಪ್ರಕಾರ ಏಪ್ರಿಲ… 22ರಿಂದ ಪರೀಕ್ಷೆಗಳು ಪ್ರಾರಂಭವಾಗಬೇಕಿತ್ತು. ಆದರೆ, ಆಗ ರಾಜ್ಯದಲ್ಲಿ ಕೊರೋನಾ ಪರಿಣಾಮ ಪರಿಸ್ಥಿತಿ ಉಲ್ಬಣಗೊಳ್ಳಲಾರಂಭಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ವಿವಿ ಆದೇಶಿಸಿತ್ತು.

ಪದವಿ, ಪಿಜಿ ಪರೀಕ್ಷೆ ನಡೆ​ಸಲು ಕರ್ನಾ​ಟಕ ವಿವಿ ತೀರ್ಮಾನ

ಇನ್ನು ಯುಜಿಸಿ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿದ್ದ ಪರೀಕ್ಷೆಗಳನ್ನು ನಡೆಸದಂತೆ ಸೂಚಿಸಿದೆಯಾದರೂ, ಕವಿವಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಒಟ್ಟಾರೆ ಕಳೆದೆರಡು ವರ್ಷಗಳಿಂದ ಕವಿವಿ ವಿದ್ಯಾರ್ಥಿಗಳ ಪಾಡು ಅಯೋಮಯವಾಗಿದೆ.

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು:

ಈ ರೀತಿ ಎರಡು ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುತ್ತಿರುವ ವಿವಿಯ ಕ್ರಮವನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಈಚೆಗೆ ಕವಿವಿ ಎದುರು ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಸೂಚಿಸಿದ ದಿನಾಂಕದಂದು ಪರೀಕ್ಷೆ ನಡೆಸಲು ಕವಿವಿ ತಯಾರಿ ಮಾಡಿಕೊಂಡಿದೆ.

ವಿದ್ಯಾರ್ಥಿಗಳಿಗೆ ತೊಂದರೆ:

ಕವಿವಿ ಪರೀಕ್ಷೆ ನಡೆಸಿದರೂ, ನಡೆಸದೇ ಪ್ರಮೋಟ್‌ ಮಾಡಿದರೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುವುದಂತು ನಿಜ. ಒಂದು ವೇಳೆ ಪರೀಕ್ಷೆ ನಡೆಸಿದರೆ ಪರೀಕ್ಷೆ ಫಲಿತಾಂಶ ಕಡಿಮೆಯಾಗಲಿದೆ. ಪ್ರೊಮೋಟ್‌ ಮಾಡಿದರೆ, ಅದೂ ಮುಂದೆ ಹುದ್ದೆ ಪಡೆಯುವಲ್ಲಿ ಪರೋಕ್ಷವಾಗಿ ತೊಂದರೆಯೇ. ಇದರ ಬದಲಾಗಿ ಕವಿವಿ ಪಠ್ಯಕ್ರಮವನ್ನು ಕಡಿಮೆ ಮಾಡಿ, ಇನ್ನೂ ಹೆಚ್ಚಿನ ಸಮಯಾವಕಾಶ ನೀಡಿ ಪರೀಕ್ಷೆ ನಡೆಸಬೇಕು ಎಂಬುದೂ ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿದ್ದ ಪರೀಕ್ಷೆಗಳನ್ನು ನಡೆಸದಂತೆ ಯುಜಿಸಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದೂಡಿದ್ದ ಪರೀಕ್ಷೆಗಳನ್ನು ನಡೆಸಬಾರದು ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಗಣೇಶ್‌ ರಾಠೋಡ ತಿಳಿಸಿದ್ದಾರೆ.  
 

click me!