ಶಿಕ್ಷಕರಿಗೊಂದು ಸಂತಸದ ಸುದ್ದಿ..!

By Kannadaprabha News  |  First Published Aug 2, 2021, 10:49 AM IST

* 2 ಲಕ್ಷ ಶಿಕ್ಷಕರ ಖಾತೆಗೆ 5000 ವರ್ಗಕ್ಕೆ ಸೂಚನೆ
* ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಶಿಕ್ಷಕರು
* ಅರ್ಹ ಫಲಾನುಭವಿಗಳಿಗೆ ಪರಿಹಾರ ಮೊತ್ತ ವರ್ಗಾಯಿಸಲು ತುರ್ತು ಕ್ರಮ
 


ಬೆಂಗಳೂರು(ಆ.02):  ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಬಿಡುಗಡೆ ಮಾಡಿರುವ ತಲಾ 5000 ರು. ಆರ್ಥಿಕ ನೆರವನ್ನು ಅರ್ಹ ಶಿಕ್ಷಕರ ಬ್ಯಾಂಕ್‌ ಖಾತೆಗಳಿಗೆ ನೇರ ವರ್ಗಾವಣೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. 

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಅವರು, ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಅನುದಾನರಹಿತ ಶಾಲೆಗಳ 1,72,945 ಶಿಕ್ಷಕರು ಮತ್ತು 34,00 ಸಿಬ್ಬಂದಿಗೆ ತಲಾ 5 ಸಾವಿರ ರು. ಆರ್ಥಿಕ ಪ್ಯಾಕೇಜ್‌ ನೀಡಲು ಸರ್ಕಾರ ಒಟ್ಟಾರೆಯಾಗಿ 103.47 ಕೋಟಿ ರು. ವನ್ನು ಜು.2ರಂದು ಬಿಡುಗಡೆ ಮಾಡಿದೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ಮೊತ್ತ ವರ್ಗಾಯಿಸಲು ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Tap to resize

Latest Videos

ಕೋವಿಡ್‌ ಪರಿಣಾಮ: ಶಾಲೆಗಳ ಆದಾಯ ಶೇ.20-50 ಕುಸಿತ!

ಶಿಕ್ಷಕರು, ಸಿಬ್ಬಂದಿಗಳ ಮಾಹಿತಿಯನ್ನು ಸ್ಟೂಡೆಂಟ್ಸ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಎಸ್‌ಎಟಿಎಸ್‌) ನಲ್ಲಿ ದಾಖಲಿಸುವ ಜವಾಬ್ದಾರಿಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ನೀಡಿದ್ದು, ಈ ಕಾರ್ಯವನ್ನು ಆ.3ರೊಳಗೆ ಮುಕ್ತಾಯಗೊಳಿಸಬೇಕಿದೆ. ಅದೇ ರೀತಿ ಮುಖ್ಯ ಶಿಕ್ಷಕರು ದಾಖಲಿಸಿದ ಶಿಕ್ಷಕರ ಮತ್ತು ಸಿಬ್ಬಂದಿಗಳ ವಿವರಗಳನ್ನು ಬಿಇಒಗಳು ಆ.6ರೊಳಗೆ ಪರಿಶೀಲಿಸಿ ಅನುಮೋದಿಸಬೇಕು. ಶಿಕ್ಷಕರ ಡೇಟಾ ಮಾಹಿತಿಯನ್ನು ಪರಿಶೀಲಿಸದೆ ಅನುಮೋದನೆ ನೀಡಿ, ಮುಂದೆ ಸಮಸ್ಯೆಗಳು ಉದ್ಭವಿಸಿದಲ್ಲಿ ಮುಂದಿನ ಆಗು-ಹೋಗುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ನೇರ ಜವಾಬ್ದಾರಿಯನ್ನಾಗಿ ಮಾಡಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
 

click me!