* ನೆಟ್‌ವರ್ಕ್ ಸಮಸ್ಯೆಯಿಂದಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ
* ಓದಿದ್ದನೇ ಆಧರಿಸಿ ಪರೀಕ್ಷೆಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳು
* 10ನೇ ತರಗತಿ ವಿದ್ಯಾರ್ಥಿಗಳಿಗೆ ಆದ್ಯತೆ ದೊರೆಯಲಿ
ಗದಗ(ಜೂ.30): ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದ್ದು, ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವರ್ಷಪೂರ್ತಿ ಸರಿಯಾಗಿ ಪಾಠ ಕೇಳಲು ಸಾಧ್ಯವಾಗದೇ ಪರದಾಡಿದ್ದು, ಈಗ ಜು. 19 ಹಾಗೂ 22ರಂದು ನಡೆಯಲಿರುವ ಪರೀಕ್ಷೆ ಎದುರಿಸುವುದು ಹೇಗೆ ಎನ್ನುವ ಭಯದಲ್ಲಿದ್ದಾರೆ.
ಕೊರೋನಾ 1ನೇ ಮತ್ತು 2ನೇ ಅಲೆ ಅಬ್ಬರದಿಂದಾಗಿ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಆನ್‌ಲೈನ್ ತರಗತಿಯೇ ಅನಿವಾರ್ಯವಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ಶತಾಯಗತಾಯ ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದರು. ಆದರೆ ಸಿಬಿಎಸ್ಸಿ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಪರೀಕ್ಷೆಗಳಿಲ್ಲದೇ ತೇರ್ಗಡೆ ಮಾಡುತ್ತಾರೆ ಎನ್ನುವ ಭರಾಟೆಯಲ್ಲಿ ವಿದ್ಯಾರ್ಥಿಗಳು ಅಷ್ಟಕಷ್ಟೇ ಓದಿದ್ದು, ಈಗ ಪರೀಕ್ಷೆ ಎದುರಿಸುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ.
ನೆಟ್‌ವರ್ಕ್ ಸಮಸ್ಯೆ ಗಂಭೀರ
ಜಿಲ್ಲೆಯ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿರುವ ಮುಂಡರಗಿ, ಗದಗ ಹಾಗೂ ಶಿರಹಟ್ಟಿತಾಲೂಕಿನ ಹಲವಾರು ತಾಂಡಾಗಳಲ್ಲಿ ನೆಟ್‌ವರ್ಕ್ ಇಲ್ಲ, ಇರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಾರ್ಯ ನಿರ್ವಹಿಸುವುದಕ್ಕಿಂತ ಸ್ಥಗಿತಗೊಂಡಿದ್ದೇ ಹೆಚ್ಚು, ಹಾಗಾಗಿ ಆ ಗ್ರಾಮಗಳ ತರಗತಿಗಳನ್ನು ಕೇಳಲು ಸಾಧ್ಯವಾಗಿಲ್ಲ, ಇನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿಯೇ ಸರ್ಕಾರ ಚಂದನ ವಾಹಿನಿಯ ಮೂಲಕ ತರಗತಿಗಳನ್ನು ಬಿತ್ತರಿಸಿದೆ, ಆದರೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಹಲವಾರು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಿದ್ದಾರೆ. ಕೆಲವು ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಕೂಡಾ ಇಲ್ಲದೇ ಇರುವುದು ಮತ್ತಷ್ಟುಸಮಸ್ಯೆಗೆ ಕಾರಣವಾಗಿದೆ.
ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ರಿಪೀಟರ್ಸ್ ಪಾಸ್?
82 ಸಾವಿರ ವಿದ್ಯಾರ್ಥಿಗಳು
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 625 ಪ್ರಾಥಮಿಕ ಹಾಗೂ 113 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 1ರಿಂದ 10ನೇ ತರಗತಿಯಲ್ಲಿ 82145 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಶೇ 15ರಷ್ಟು ವಿದ್ಯಾರ್ಥಿಗಳ ಕುಟುಂಬದಲ್ಲಿ ಸ್ಮಾರ್ಟ್‌ಫೋನ್‌ಗಳಾಗಲಿ, ಟಿವಿಯಾಗಲಿ ಇಲ್ಲ. ಇವರೆಲ್ಲಾ ಬಡವರ ಮಕ್ಕಳು, ಆನ್‌ಲೈನ್ ತರಗತಿ ಇವರಿಗೆ ಮರೀಚಿಕೆಯಾಗಿದ್ದು, ಸದ್ಯ ಅವರೇ ಸ್ವಯಂ ಇಚ್ಛೆಯಿಂದ ಓದಿದ್ದನ್ನೇ ಆಧರಿಸಿ ಪರೀಕ್ಷೆಗೆ ಅಣಿಯಾಗಬೇಕಿದೆ. ಇನ್ನು ಹಲವು ಕುಟುಂಬಗಳಲ್ಲಿ ಮಗ ಎಸ್ಸೆಸ್ಸೆಲ್ಸಿ, ಮಗಳು ಎಸ್ಸೆಸ್ಸೆಲ್ಸಿ, ಅಣ್ಣನ ಮಗ, ತಮ್ಮನ ಮಗ ಈ ಬಾರಿ ದ್ವಿತೀಯ ಪಿಯುಸಿ ಓದುತ್ತಿದ್ದು, ಮನೆಯಲ್ಲಿರುವ ಒಂದೇ ಸ್ಮಾಟ್ ಫೋನ್‌ನಲ್ಲಿಯೇ ವಿದ್ಯಾರ್ಥಿಗಳು ತರಗತಿ ಕೇಳಿದ್ದು, ಅದರ ಆಧಾರದಲ್ಲಿ ಪರೀಕ್ಷೆ ಬರೆಯಬೇಕಿದೆ.
3ನೇ ಅಲೆ ಬಂದರೆ ಬಹಳ ಕಷ್ಟ
ಕೋವಿಡ್ ಸಂಭವನೀಯ 3ನೇ ಅಲೆಯಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶ್ರೀಮಂತರ ಮಕ್ಕಳು ಮತ್ತೆ ಆನ್‌ಲೈನ್ ತರಗತಿಗಳಲ್ಲಿ ಪಾಠ ಕೇಳುತ್ತಾರೆ. ಆದರೆ ಬಡ, ಮಧ್ಯಮ ವರ್ಗದವರಿಗೆ ತೀರಾ ತೊಂದರೆಯಾಗಲಿದ್ದು, ಈ ಕುರಿತು ಜಿಲ್ಲಾಡಳಿತ ತೀರಾ ಬಡ ಮಕ್ಕಳ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಅವರ ಶಿಕ್ಷಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಶ್ರೀಮಂತರ ಮಕ್ಕಳು ಮತ್ತಷ್ಟು ಜಾಣರು, ಬಡವರ ಮಕ್ಕಳು ತಮ್ಮದಲ್ಲದ ತಪ್ಪಿನಿಂದಾಗಿ ಶಿಕ್ಷಣದಿಂದ ವಂಚಿತರಾಗುವಂತಾಗುತ್ತದೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಆದ್ಯತೆ ದೊರೆಯಲಿ
10ನೇ ತರಗತಿ ಪರೀಕ್ಷೆಯ ದಿನಾಂಕ ಘೋಷಣೆಯಾಗಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಕ್ಷಣವೇ ಗ್ರಾಮೀಣ ಭಾಗದಲ್ಲಿ ಎಷ್ಟು ವಿದ್ಯಾರ್ಥಿಗಳ ಬಳಿ ಸ್ಮಾಟ್‌ಪೋನ್ ಇಲ್ಲ, ಎಷ್ಟು ಮನೆಯಲ್ಲಿ ಟಿವಿ ಇಲ್ಲ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆ ವಿದ್ಯಾರ್ಥಿಗಳನ್ನು ಅವರ ಸಮೀಪದ ಮೊಬೈಲ್ ಹೊಂದಿರುವ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಜೋಡಣೆ ಮಾಡಿ, ಮಾದರಿ ಪ್ರಶ್ನೆ ಪತ್ರಿಕೆ ನೀಡಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಪರೀಕ್ಷೆ ಅಣಿಗೊಳಿಸಬೇಕಿದ್ದು, 10ನೇ ತರಗತಿಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕಿದೆ.
ಸರ್ಕಾರಿ ಶಾಲೆಗೆ ಆನ್ಲೈನ್ ಕ್ಲಾಸ್ ಆರಂಭ : ದಿನಾಂಕ ನಿಗದಿ
ಕೋವಿಡ್ ಸಂಕಷ್ಟದಲ್ಲಿ ಆನ್‌ಲೈನ್ ತರಗತಿಗಳು ಅನಿವಾರ್ಯ ಮತ್ತು ಸೂಕ್ತ. ಆದರೆ ಇಂಟರ್‌ನೆಟ್ ಸಮಸ್ಯೆ ಬಹಳವಿದ್ದು, ಶಿಕ್ಷಕರು ತರಗತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಒಮ್ಮೆ ಸ್ಥಗಿತಗೊಂಡರೆ ಮತ್ತೊಮ್ಮೆ ಲಾಗಿನ್ ಆಗಬೇಕು, ಅದಕ್ಕಾಗಿ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಸೇರ್ಪಡೆ ಮಾಡಬೇಕು ಹೀಗೆ ಹತ್ತಾರು ಸಮಸ್ಯೆಗಳಾಗುತ್ತಿವೆ, ಇನ್ನು ಗ್ರಾಮೀಣ ಪ್ರದೇಶದಲ್ಲಿನ ನಮ್ಮ ಕೆಲ ಗೆಳೆಯರು ಮನೆಯ ಮೇಲೆ ಕುಳಿತು ತರಗತಿ ಕೇಳುವಂತಾಗಿದೆ ಎಂದು ಕಬಲಾಯತ ಕಟ್ಟಿತಾಂಡಾದ 10ನೇ ತರಗತಿ ವಿದ್ಯಾರ್ಥಿ ಪಾಂಡಪ್ಪ ಲಮಾಣಿ ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳು ಸಮಸ್ಯೆ ಕುರಿತು ಈಗಾಗಲೇ ಅಗತ್ಯ ಮಾಹಿತಿ ಕಲೆ ಹಾಕಲಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗದಗ ಡಿಡಿಪಿಐ ಬಸಲಿಂಗಪ್ಪ ಎಸ್. ಹೇಳಿದ್ದಾರೆ.