ಹೊಸ ವರ್ಷಕ್ಕೆ 10, 12ನೇ ಕ್ಲಾಸ್‌ ಆರಂಭಕ್ಕೆ ಸರ್ಕಾರ ಚಿಂತನೆ

By Kannadaprabha News  |  First Published Dec 17, 2020, 11:27 AM IST

ಕೊರೋನಾದ ಎರಡನೇ ಅಲೆ ಆರಂಭವಾಗದಿದ್ದರೆ ಹೊಸ ವರ್ಷದ ಆರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಬೆಂಗಳೂರು(ಡಿ.17): ಡಿಸೆಂಬರ್‌ ಕೊನೆಯ ವಾರದವರೆಗೆ ರಾಜ್ಯದಲ್ಲಿ ಪ್ರತಿದಿನ ವರದಿಯಾಗುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗದೆ ಇದ್ದಲ್ಲಿ ಹೊಸ ವರ್ಷ 2021ರ ಜನವರಿಯಿಂದಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ಸಂಬಂಧ ಡಿಸೆಂಬರ್‌ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.

Tap to resize

Latest Videos

ಕೋವಿಡ್‌ ಸೋಂಕು ದಿನೇ ದಿನೇ ಕಡಿಮೆಯಾಗುತ್ತಾ ಸಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ತಮಿಳುನಾಡು, ಒರಿಸ್ಸಾ, ಗೋವಾ, ಉತ್ತರ ಖಂಡ ಸೇರಿದಂತೆ ವಿವಿಧ ರಾಜ್ಯಗಳು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಕೆಲ ತರಗತಿಗಳಿಗೆ ಶಾಲೆಗಳನ್ನು ಆರಂಭಿಸಿವೆ. ಇನ್ನು, ಹರಾರ‍ಯಣದಲ್ಲಿ ಡಿ.14ರಿಂದ, ಜಾರ್ಖಂಡ್‌ನಲ್ಲಿ ಡಿ.16ರಿಂದ 10 ಮತ್ತು 12ನೇ ತರಗತಿ ಆರಂಭಿಸಲಾಗಿದೆ. ಮಧ್ಯ ಪ್ರದೇಶದಲ್ಲಿ ಡಿ.18 ರಿಂದ 10 ಮತ್ತು 12ನೇ ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ.

ಮಕ್ಕಳೇ, ವಿದ್ಯಾಗಮಕ್ಕೆ ರೆಡಿಯಾಗಿ, ಕೊರೊನಾ ನಿಯಮ ಪಾಲಿಸೋದನ್ನ ಮರೆಯಬೇಡಿ

ಶಾಲೆ ಆರಂಭಿಸಿರುವ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳದಂತಹ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ಹಾಗಾಗಿ ರಾಜ್ಯದಲ್ಲೂ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯಂತೆ ಡಿಸೆಂಬರ್‌ ಕೊನೆಯ ವಾರದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರದಿದ್ದರೆ 2ನೇ ಅಲೆ ಭೀತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಜನವರಿಯಿಂದ ಶಾಲೆ ಆರಂಭಿಸುವ ಚಿಂತನೆ ನಡೆಸಲಾಗಿದೆ. ಅಂತಿಮ ತೀರ್ಮಾನ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಆಗಲಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

2ನೇ ಅಲೆ ಕಂಡುಬಂದರೆ ವಿದ್ಯಾಗಮ ಪಾಠ ಮಾತ್ರ

ಕೋವಿಡ್‌ ತಾಂತ್ರಿಕ ಸಮಿತಿ ಈಗಾಗಲೇ ತನ್ನ ವರದಿ ನೀಡಿದ್ದು ಡಿಸೆಂಬರ್‌ ತಿಂಗಳ ಕೊನೆಯ ಏಳು ದಿನಗಳಲ್ಲಿ ಪ್ರತಿ ದಿನದ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ 2ನೇ ಅಲೆ ಆರಂಭವನ್ನು ನಿರ್ಧರಿಸಬಹುದು. ಈ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಕಂಡು ಬರದಿದ್ದರೆ 2ನೇ ಅಲೆಯ ಆತಂಕ ಇರುವುದಿಲ್ಲ. ಹಾಗಾಗಿ ಶಾಲೆ ಆರಂಭಿಸಬಹುದು ಎಂದು ಹೇಳಿದೆ. ಮೊದಲು ಬೋರ್ಡ್‌ ಪರೀಕ್ಷೆ ಇರುವುದರಿಂದ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ತೆರೆಯಲಾಗುವುದು. ನಂತರ ಉಳಿದ ತರಗತಿಗಳಿಗೆ ಹಂತ ಹಂತವಾಗಿ ಶಾಲೆ ಆರಂಭಿಸಿವ ಆಲೋಚನೆ ಇದೆ. ಒಂದು ವೇಳೆ ಕೋವಿಡ್‌ ಪ್ರಕರಣಗಳು ಏರಿಕೆಯಾಗಿ 2ನೇ ಅಲೆ ಲಕ್ಷಣಗಳು ಕಂಡುಬಂದರೆ ವಿದ್ಯಾಗಮ ಮೂಲಕವೇ ಇನ್ನೂ ಕೆಲ ದಿನ ಕಲಿಕೆ ಮುಂದುವರೆಸಲಾಗುತ್ತದೆ. ಇದನ್ನೂ ಗಮನದಲ್ಲಿಟ್ಟುಕೊಂಡೇ ಪೂರಕ ಮಾದರಿಯಲ್ಲೇ ವಿದ್ಯಾಗಮವನ್ನು ಪರಿಷ್ಕರಿಸಿ ಜ.1ರಿಂದ ಆರಂಭಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

click me!