ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನ ಪರೀಕ್ಷೆ ಆರಂಭಕ್ಕೂ ಮುನ್ನವೇ ವಾಟ್ಸಾಪ್ ಮೂಲಕ ಕಳುಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟ ಖಾಸಗಿ ಶಾಲೆಯ ಶಿಕ್ಷಕರು ಸೇರಿದಂತೆ ಕೆಲವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಮೇ.25): ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನ ಪರೀಕ್ಷೆ ಆರಂಭಕ್ಕೂ ಮುನ್ನವೇ ವಾಟ್ಸಾಪ್ ಮೂಲಕ ಕಳುಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟ ಖಾಸಗಿ ಶಾಲೆಯ ಶಿಕ್ಷಕರು ಸೇರಿದಂತೆ ಕೆಲವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಹೌದು! ರಾಜ್ಯದಲ್ಲಿ ಪಿಎಸ್‌ಐ ಆಕ್ರಮ ನೇಮಕಾತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಸಾಕಷ್ಟು ಜನರನ್ನ ಬಂಧಿಸಿ ಜೈಲಿಗೂ ಅಟ್ಟಿದ್ದಾರೆ. ಅದು ಮಾಸುವ ಮುನ್ನವೇ ಮತ್ತೊಂದು ಆಕ್ರಮ, ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಂದಹಾಗೆ ಕಳೆದ ತಿಂಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದು ಇದೀಗ ಫಲಿತಾಂಶ ಕೂಡ ಬಂದಿದೆ. ಆದರೆ ಪರೀಕ್ಷೆಯಲ್ಲಿ ಬಾರಿ ಆಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ ಹತ್ತು ಜನರನ್ನ ಬಂಧಿಸಿದ್ದಾರೆ. ಸದ್ಯ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಎಂಬಾತ, ಏಪ್ರಿಲ್ 11ರಂದು ವಿಜ್ಷಾನ ಪ್ರಶ್ನೆ ಪತ್ರಿಕೆಯನ್ನ, ಕೆಂಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಇರುವ ಎಚ್‌ಎಮ್ ಮಾಗಡಿ ಟೌನ್ ಎಂಬ ವಾಟ್ಸಾಪ್ ಗ್ರೂಪ್‌ಗೆ ಹರಿಬಿಟ್ಟಿದ್ದ. ಈ ವಿಚಾರ ಗೊತ್ತಿದ್ದರು ಕೆಲವರು ಸುಮ್ಮನೇ ಇದ್ದರು.
SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ರಾಮನಗರದಲ್ಲಿ ಓರ್ವ ಅರೆಸ್ಟ್
ಆದರೆ ಮಂಗಳವಾರ ಈ ವಿಚಾರವಾಗಿ ಡಿಡಿಪಿಐ ಗಂಗಣ್ಣಸ್ವಾಮಿ ಎಂಬುವವರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಈ ಸಂಬಂಧ ಪೊಲೀಸರು ಕ್ಲರ್ಕ್ ರಂಗೇಗೌಡ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಆಗ ಅಸಲಿ ಸತ್ಯ ಬೆಳಕಿಗೆ ಬಂದಿತ್ತು. ಕೇವಲ ಒಂದು ಪತ್ರಿಕೆಯನ್ನು ಮಾತ್ರವಲ್ಲದೇ ಎಲ್ಲ ಪ್ರಶ್ನೆ ಪತ್ರಿಕೆಗಳನ್ನ ಸೋರಿಕೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾನೆ. ಅಂದಹಾಗೆ ಮಾಗಡಿ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ, ರಂಗನಾಥ ಪ್ರೌಢಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಜೊತೆ ಶಾಮೀಲಾಗಿ, ರಂಗನಾಥ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಿಂದ ಬೆಳಗ್ಗೆ 10.15 ರ ಸುಮಾರಿಗೆ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಗಳ ಪೋಟೋ ತೆಗೆದು ಕೃಷ್ಣಮೂರ್ತಿ ರಂಗೇಗೌಡನಿಗೆ ಕಳುಹಿಸುತ್ತಿದ್ದ.
Textbook Controversy: ಪಠ್ಯ ಪರಿಷ್ಕರಣೆಗೆ ಹೆಚ್ಚಾಗುತ್ತಿದೆ ವಿರೋಧದ ಕೂಗು!
ಅದನ್ನ ರಂಗೇಗೌಡ ಇತರೇ ವಿಷಯ ಪರಿಣಿತರಿಗೆ ಪರೀಕ್ಷೆ ದಿನದಂದು ಕಳುಹಿಸಿ ಉತ್ತರವನ್ನ ವಾಟ್ಸಾಪ್ ಮೂಲಕ ತರಿಸಿಕೊಳ್ಳುತ್ತಿದ್ದ. ಅದನ್ನ ಇತರೇ ಶಿಕ್ಷಕರಿಗೆ ನೀಡಿ ಪರೀಕ್ಷಾ ಕೇಂದ್ರದಲ್ಲಿ ಇದ್ದ ಮಕ್ಕಳಿಗೆ ಕೇಳಿಕೊಡುತ್ತಿದ್ದ. ಈ ಮೂಲಕ ಶಾಲೆಗೆ ಹೆಚ್ಚು ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದ. ಅದರಂತೆ ಒಟ್ಟು ಆರು ಪರೀಕ್ಷೆಗಳಲ್ಲೂ ಇದೇ ರೀತಿ ಆಕ್ರಮ ಎಸೆಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಂಪೇಗೌಡ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ರಂಗನಾಥ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ, ವಿಷಯ ಪರಿಣಿತರಾದ ಅರ್ಜುನ್, ನಾಗರಾಜ್, ಅಲೀಂ, ಶ್ರೀನಿವಾಸ್, ಸುಬ್ರಮಣ್ಯ, ಸೇರಿದಂತೆ ಈ ಮೊದಲು ಆಕ್ರಮದ ಬಗ್ಗೆ ಗೊತ್ತಿದ್ದರು ಡೀಲ್ ಮಾಡಿಕೊಂಡು ಸುಮ್ಮನೆ ಇದ್ದ ಶಿಕ್ಷಕ ಲೋಕೇಶ್, ಖಾಸಗಿ ಪತ್ರಿಕೆ ವರದಿಗಾರ ವಿಜಯ್ ಎಂಬಾತನನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇರೆಗೆ ಮಾಗಡಿ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.