* RSS ಸಂಸ್ಥಾಪಕ ಕೆ ಬಿ ಹೆಡಗೆವಾರ್ ಪಠ್ಯಕ್ಕೆ ಭಾರೀ ವಿರೋಧ
* ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರಿಂದ ಪಠ್ಯಪುಸ್ತಕ ರಚನೆ ಮರು ಪರಿಷ್ಕರಣೆ ಮಾಡುವಂತೆ ಒತ್ತಾಯ
* ನೂತನ ಪಠ್ಯ ಸಮಿತಿ ವಜಾ ಮಾಡಿ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಮೇ.25): ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರ್ತಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಪಠ್ಯ ಪರಿಷ್ಕರಣೆ ವಿಚಾರಕ್ಕೆ ಕನ್ನಡಪರ ಸಂಘಟನೆಗಳು ಧ್ವನಿಗೂಡಿಸಿದ್ದು ವಿವಾದಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ದೇವನೂರು ಮಹದೇವ ಅವರು ಧ್ವನಿಯೆತ್ತಿದ ಬೆನ್ನಲ್ಲೆ ಸಾಹಿತಿಗಳು ಜತೆಗೂಡಿ ಪಠ್ಯ ಪರಿಷ್ಕರಣೆ ವಿರುದ್ದ ಅಭಿಯಾನಕ್ಕೆ ಮುಂದಾಗಿದ್ದಾರೆ. ನೂತನ ಪಠ್ಯ ಸಮಿತಿ ವಜಾ ಮಾಡಿ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಹೆಡಗೆವಾರ್ ಪಠ್ಯ ಸೇರ್ಪಡೆ, ದೇವನೂರು ಮಹಾದೇವ ಅವರ ಸಾಹಿತ್ಯ ಕೈಬಿಟ್ಟಿದ್ದು, ಕುವೆಂಪು ವಿವಾದ, ಭಗತ್ ಸಿಂಗ್ ಪಠ್ಯ ವಿವಾದ ಹೆಚ್ಚು ಸದ್ದು ಮಾಡ್ತಿದೆ.
ಪಠ್ಯ ಪರಿಷ್ಕರಣೆಗೆ ವಿರೋಧದ ಕೂಗು ಜೋರಾಗ್ತಿದೆ. ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆ ಮರು ಪರಿಷ್ಕರಣೆಯಾಗಬೇಕು ಅಂತಾ ಕೆಲ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಹಾಗೂ ಕವಿಗಳು ಪಟ್ಟು ಹಿಡಿದಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಒತ್ತಾಯಿಸಿ ಇಂದು ಗಾಂಧಿ ಭವನದಲ್ಲಿ ಶಿಕ್ಷಣ ತಜ್ಞರು ಚಿಂತಕರೊಂದಿಗೆ ಸಮಾಲೋಚನೆ ಸಭೆ ನಡೆಸಿ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ, ಪ್ರೊ ಕೆ ಮರುಳಸಿದ್ದಪ್ಪ, ರಾಜೇಂದ್ರ ಚೆನ್ನಿ, ಎಸ್ ಜಿ ಸಿದ್ದರಾಮಯ್ಯ, ಬಿ.ಟಿ ಲಲಿತಾ ನಾಯಕ್ ಸೇರಿದಿಂದ ಅನೇಕ ಚಿಂತಕರು ಚರ್ಚೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಪಠ್ಯ ಪರಿಷ್ಕರಣೆ ವಿವಾದ: ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ
ಪಠ್ಯ ಕ್ರಮವನ್ನು ಮೊದಲು ಸಿದ್ಧಪಡಿಸಬೇಕು: ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮಾತನಾಡಿ ಯಾವುದೇ ಪಠ್ಯಪುಸ್ತಕ ರಚನೆ, ಪರಿಷ್ಕರಣೆಗೆ ಮಾಡುವಾಗ ಪ್ರಜಾಸತ್ತಾತ್ಮಕ ವಿಧಾನ ಅನುಸರಿಸಬೇಕು. ಪಠ್ಯಕ್ರಮ ಪರಿಷ್ಕರಿಸುವಾಗ ಪಠ್ಯಕ್ರಮವನ್ನು ಮೊದಲು ಸಿದ್ಧಪಡಿಸಬೇಕು ನಂತರ ಪಠ್ಯ ವಸ್ತುವನ್ನು ತಯಾರಿಸಬೇಕು. ಈ ಕ್ರಮ ಬಿಟ್ಟು ಪಠ್ಯಪುಸ್ತಕ ಮಾಡ್ತಿದ್ದೀವಿ ಅಂದ್ರೆ ಇದು ಎಡಬಿಡಂಗಿ ಕೆಲಸ ಮಾಡಿದಂತೆ, ಹೀಗಾಗಿರೋದು ಇದೇ ಮೊದಲು. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಮನಸ್ಸೋ ಇಚ್ಚೆ ಸೇರಿಸುವುದು, ತೆಗೆಯುವುದು ಮಾಡಲಾಗುವುದಿಲ್ಲ ಅಂತಂದ್ರು.
ಶಿಕ್ಷಣ ಸಚಿವರು ತುಂಬಾ ಅಗ್ರೈಸಿವ್ ಆಗಿದ್ದಾರೆ. ಶಿಕ್ಷಣ ಸಚಿವರಾದವರು ಪಕ್ಷದ ಕಾರ್ಯಕರ್ತರಾಗಿ ವರ್ತಿಸ್ತಿದ್ದಾರೆ. ಚಿಲ್ಲರೆ ಜನರು ಅಂತ ಸಚಿವರು ಹೇಳ್ತಾರೆ, ಇದು ಯಾವ ಪರಿಚಯ ಭಾಷೆಯೋ ಗೊತ್ತಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಪರಿಶೀಲನಾ ಸಮಿತಿ ಅಧ್ಯಕ್ಷರ ಪರಿಚಯ ಕೊಡಿ ಅಂದ್ರೆ, ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಒಬ್ಬ ಸಿಇಟಿ ಪ್ರೊಫೆಸರ್ ಅಂತಾರೆ ಇದು ಹಾಸ್ಯಾಸ್ಪದ ಎಂದು ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇನ್ನು ಪ್ರೋಫೆಸರ್ ಮರುಳ ಸಿದ್ದಪ್ಪ ಮಾತನಾಡಿ ಪಠ್ಯ ವಿಚಾರದಲ್ಲಿ ಇಂತಹ ಗೊಂದಲ ಯಾವತ್ತೂ ಆಗಿರಲಿಲ್ಲ ಇದೇ ಮೊದಲು.
ಹಿಂದೆ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಎಲ್ಲಾ ವರ್ಗದ 8-10 ಜನ ತಜ್ಞರು ಇರುತ್ತಿದ್ದರು ಇಂದು ಒಂದೇ ವರ್ಗದ ಜನರನ್ನ ಇಟ್ಟುಕೊಂಡು ಸಮಿತಿ ಮಾಡಲಾಗ್ತಿದೆ. ಇವರ ಉದ್ದೇಶ ಇಷ್ಟೇ ತಮಗೆ ಬೇಕಾದವರ ಪಠ್ಯ ಸೇರಿಸೋದು, ಇದು ಸಂವಿಧಾನದ ತತ್ವಗಳಿಗೆ ವಿರುದ್ಧವಾದದ್ದು. ಕುವೆಂಪು ಅವರ ನಾಡಗೀತೆಗೆ ಅವಮಾನ ಮಾಡಿದವನನ್ನು ಪಠ್ಯ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದೇಕೆ. ಪಠ್ಯ ವಿಚಾರದಲ್ಲಿ ಬಿಜೆಪಿ ಸರ್ಕಾರಕ್ಕೆ ವಿರುದ್ಧವಾಗಿ ದೊಡ್ಡ ಜನಾಭಿಪ್ರಾಯ ರೂಪಿಸಿ, ಸರ್ಕಾರವನ್ನು ಕಿತ್ತೊಗೆಯೋವರೆಗೂ ನಾವು ಹೋರಾಟ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ರು.
ಪಠ್ಯ ಬಗ್ಗೆ ಬರಗೂರು ಜತೆ ಚರ್ಚೆಗೆ ಸಿದ್ಧ: ಸಚಿವ ನಾಗೇಶ್
ಪಠ್ಯ ಪರಿಷ್ಕರಣೆಗೆ ಕನ್ನಡಪರ ಸಂಘಟನೆಗಳ ಆಕ್ರೋಶ: ಇನ್ನು ಪಠ್ಯ ಪರಿಷ್ಕರಣೆ ವಿರುದ್ಧ ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿವೆ. ದೇವನೂರು ಮಹದೇವ, ಡಾ ಜಿ ರಾಮಕೃಷ್ಣ ಸೇರಿದಂತೆ ಸಾಹಿತಿಗಳ ಪರ ನಿಂತ ಕರವೇ ನಾರಾಯಣಗೌಡ ಸರಣಿ ಟ್ವೀಟ್ ಮಾಡಿ ರೋಹಿತ್ ಚಕ್ರತೀರ್ಥ ಕೂಡಲೆ ಸಮಿತಿಯಿಂದ ವಜಾಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.