ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

By Kannadaprabha NewsFirst Published Mar 31, 2023, 6:28 AM IST
Highlights

ಈ ಬಾರಿ ಪರೀಕ್ಷೆಗೆ 8,42,811 ವಿದ್ಯಾರ್ಥಿಗಳು ನೋಂದಣಿ, - ಹಿಜಾಬ್‌ ಧರಿಸಿ ಬಂದರೆ ಪ್ರವೇಶವಿಲ್ಲ, ರಾಜ್ಯಾದ್ಯಂತ 3305 ಕೇಂದ್ರಗಳಲ್ಲಿ ಪರೀಕ್ಷೆ, ಪರೀಕ್ಷೆ ಸುಸೂತ್ರಗೊಳಿಸಲು ಸರ್ವ ಸಿದ್ಧತೆ,  ಸಮವಸ್ತ್ರ ಧರಿಸಿ ಪರೀಕ್ಷೆಗೆ ಬರಲು ಸೂಚನೆ. 

ಬೆಂಗಳೂರು(ಮಾ.31): ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಶುಕ್ರವಾರದಿಂದ (ಮಾ.31) ರಾಜ್ಯಾದ್ಯಂತ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಈ ಬಾರಿ ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ 3,305 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷೆಗೆ ಆಯಾ ಶಾಲೆಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಿ ಬರುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಿಜಾಬ್‌ ಸೇರಿದಂತೆ ಯಾವುದೇ ಧರ್ಮಾಧಾರಿತ ಉಡುಪು ತೊಟ್ಟು ಬಂದರೆ ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಪರೀಕ್ಷಾ ಕೇಂದ್ರದ ವರೆಗೂ ಹಿಜಾಬ್‌ ಮತ್ತಿತರ ನಿಷೇಧಿತ ಉಡುಪು ಧರಿಸಿ ಬಂದರೂ ಅವುಗಳನ್ನು ಕಳಚಿಟ್ಟು ಪರೀಕ್ಷಾ ಕೊಠಡಿಗೆ ಹೋಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ಹೊಸ ವಿಶ್ವವಿದ್ಯಾಲಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಏ.15ರವರೆಗೂ ಪರೀಕ್ಷೆಗಳು ನಡೆಯಲಿದ್ದು, ಮೊದಲ ದಿನ ಶುಕ್ರವಾರ ಪ್ರಥಮ ಭಾಷಾ ವಿಷಯದ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕಣ್ಗಾವಲು, ಮೊಬೈಲ್‌ ನಿಷೇಧ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಮೇಲ್ವಿಚಾರಕರು ಕೂಡ ಕ್ಯಾಮರಾ ಇಲ್ಲದ ಬೇಸಿಕ್‌ ಹ್ಯಾಂಡ್‌ ಸೆಟ್‌ ಮಾತ್ರ ತರಬೇಕು. ಸ್ಮಾರ್ಚ್‌ ಫೋನ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ಮಂಡಳಿ ತಿಳಿಸಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಬಿಗಿ ಪೊಲೀಸ್‌ ಬಂದೋಬಸ್‌್ತ ಇರುತ್ತದೆ. ಪರೀಕ್ಷಾ ಕೇಂದ್ರದೊಳಗೆ ವಾಚ್‌, ಮೊಬೈಲ್‌ ಮತ್ತಿತರ ಎಲೆಕ್ಟ್ರಾನಿಕ್ಸ್‌ ಪರಿಕರಗಳನ್ನು ಕೊಂಡೊಯ್ಯುವಂತಿಲ್ಲ.

ಗ್ರಾಮೀಣ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಸಿಗಲಿ: ಅಶ್ವತ್ಥನಾರಾಯಣ್‌

ಪರೀಕ್ಷೆ ನಡೆಸಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (ಕೆಎಸ್‌ಇಎಬಿ) ಕೇಂದ್ರ ಕಚೇರಿಯಿಂದ ಹಿಡಿದು ಪರೀಕ್ಷಾ ಕೇಂದ್ರಗಳ ವರೆಗೂ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ ಕೇಂದ್ರಗಳಲ್ಲಿ ಎಲ್ಲೆಡೆ 24/7 ಸಿಸಿಟಿವಿ ನಿಗಾ ಹಾಗೂ ಪೊಲೀಸ್‌ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದವರ ಮೇಲೆ ನಿಗಾ ಇಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಟ್ಯೂಷನ್‌, ಕೋಚಿಂಗ್‌ ಕೇಂದ್ರಗಳು, ಝೆರಾಕ್ಸ್‌ ಕೇಂದ್ರಗಳು, ಸೈಬರ್‌ ಕೇಂದ್ರ, ಕಂಪ್ಯೂಟರ್‌ ಕೇಂದ್ರ ಹಾಗೂ ಗೇಮ್ಸ್‌ ಕೇಂದ್ರಗಳ ಮೇಲೆ ಗಮನ ಹರಿಸಲಾಗಿದೆ. ಪರೀಕ್ಷೆ ಕುರಿತು ಸಾಮಾಜಿಕ ತಾಣಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ವದಂತಿ, ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೆಎಸ್‌ಇಎಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳೇ ಗಮನಿಸಿ...

- ಪರೀಕ್ಷೆ ಆರಂಭಕ್ಕೂ ಒಂದು ತಾಸು ಮುನ್ನ ಕೇಂದ್ರ ತಲುಪಿ
- ಮರೆಯದೆ ಹಾಲ್‌ ಟಿಕೆಟ್‌, ಪೆನ್ನು ಕೊಂಡೊಯ್ಯಿರಿ
- ಶಾಲಾ ಸಮವಸ್ತ್ರ ಧರಿಸಿಕೊಂಡು ಹೊರಡಿ
- ಮೊಬೈಲ್‌, ವಾಚ್‌ ಸೇರಿ ಯಾವುದೇ ಎಲೆಕ್ಟ್ರಾನಿಕ್ಸ್‌ ಉಪಕರಣ ಕೊಂಡೊಯ್ಯಬೇಡಿ
- 15 ನಿಮಿಷ ಕಾಲಾವಕಾಶವಿರುತ್ತದೆ, ಪ್ರಶ್ನೆಗಳನ್ನು ನಿಧಾನವಾಗಿ ಓದಿಕೊಳ್ಳಿ
- ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ

click me!