ಸರ್ಕಾರದ ಎಡಬಿಡಂಗಿ ನಿಲುವಿನಿಂದ ಎಲ್ಲರಿಗೂ ಸಂಕಷ್ಟ| ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ಬೀದಿಗಿಳಿದ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಮಾಲೀಕರು| ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣ ಸ್ಪಷ್ಟನಿರ್ಧಾರ ಕೈಗೊಂಡು ಈ ಬಿಕ್ಕಟ್ಟು ಬಗೆಹರಿಸಬೇಕು|
ಬೆಂಗಳೂರು(ಡಿ.21): ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳಿಲ್ಲದೆ ಇದ್ದರೂ ಖಾಸಗಿ ಶಾಲೆಗಳು ಪೋಷಕರಿಂದ ಪೂರ್ಣ ಶುಲ್ಕ ವಸೂಲಿ ಮಾಡುತ್ತಿವೆ. ಶುಲ್ಕ ನೀಡದವರಿಗೆ ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ ಪೋಷಕರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಇಷ್ಟಾದರೂ ಖಾಸಗಿ ಶಾಲೆಗಳೊಂದಿಗೆ ಶಾಮೀಲಾಗಿರುವ ಸರ್ಕಾರ ಕಣ್ಣುಮುಚ್ಚಿಕೊಂಡು ಕುಳಿತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಮಾಲೀಕರು ಎಲ್ಲರೂ ಬೀದಿಗಿಳಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಕ್ಷಣ ಸ್ಪಷ್ಟನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಬೇಕು. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಜಗಳ ತಂದಿಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
undefined
ಖಾಸಗಿ ಶಾಲೆಗಳ ದುಬಾರಿ ಫೀಸ್ ವಿರುದ್ಧ ಪೋಷಕರ ಸಮರ; ಸರ್ಕಾರಕ್ಕೆ ಬಿಸಿತುಪ್ಪ..!
ಮುಖ್ಯಮಂತ್ರಿ, ಶಿಕ್ಷಣ ಸಚಿವರೇ ಹೊಣೆ:
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರೇ ನೇರ ಹೊಣೆಗಾರರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಜಗಳ ತಂದು ಹಾಕಿ ಇವರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ತರಗತಿಗಳು ನಡೆಯದೆ ಇದ್ದರೂ ಬೋಧನಾ ಶುಲ್ಕದ ಜೊತೆಯಲ್ಲಿ ಪ್ರಯೋಗಶಾಲೆ, ಗ್ರಂಥಾಲಯ ಮತ್ತಿತರ ಪಠ್ಯೇತರ ಶುಲ್ಕ ವಸೂಲಿಗೆ ಹೊರಟಿರುವ ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳು ಬೆದರಿಕೆಗೆ ಜಗ್ಗುತ್ತಿಲ್ಲ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ಶಾಮೀಲಾಗಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಆರೋಪಿಸಿದರು.