ಮೆಣಸೆ ಶಾಲೆಗೆ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಗರಿ

By Kannadaprabha NewsFirst Published Oct 1, 2022, 9:39 AM IST
Highlights
  • ಮೆಣಸೆ ಶಾಲೆಗೆ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಗರಿ
  • ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ವಿವಿಧ ಶೈಕ್ಷಣಿಕ ಸ್ಪರ್ಧೆಗಳಲ್ಲೂ ಮುಂದಿರುವ ಶಾಲೆ
  • 1940ರಲ್ಲಿ ಆರಂಭವಾದ ಶಾಲೆ

ನೆಮ್ಮಾರ್‌ ಅಬೂಬಕರ್‌

ಶೃಂಗೇರಿ (ಅ.1) :  ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಶಾಲೆಗಳು ಮುಚ್ಚಿದರೆ, ಇನ್ನು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತ ಮುಚ್ಚುವ ಹಂತ ತಲುಪುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ತಾಲೂಕಿನ ಮೆಣಸೆಯಲ್ಲಿರುವ ಸರ್ಕಾರಿ ಮಾದರಿ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಧನೆ ಗಮನೀಯವಾಗಿದೆ.

Menase School: ಶೃಂಗೇರಿಯ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆ

 

ವಿದ್ಯಾರ್ಥಿಗಳು, ಮೂಲಸೌಲಭ್ಯಗಳನ್ನು ಹೊಂದಿರುವ ಈ ಶಾಲೆ ಶೈಕ್ಷಣಿಕ ಸಾಧನೆಯಲ್ಲೂ ಮುಂದಿದೆ. ಯಾವುದೇ ಕೊರತೆಯಿಲ್ಲದಂತೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇವೆಲ್ಲದರ ಫಲವಾಗಿ 2022ರಲ್ಲಿ ರಾಜ್ಯಮಟ್ಟದಲ್ಲಿ ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿ ಗಳಿಸಿಕೊಂಡಿದೆ.

1940ರಲ್ಲಿ 2-3 ಕೊಠಡಿಗಳೊಂದಿಗೆ ಈ ಶಾಲೆ ಕಾರ್ಯಾರಂಭ ಮಾಡಿತು. 1996 ರಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್‌.ಜಿ.ಗೋವಿಂದೇಗೌಡ ಅವಧಿಯಲ್ಲಿ ಈ ಶಾಲೆ ಶಾಸಕರ ಮಾದರಿ ಶಾಲೆಯಾಗಿ ಆಯ್ಕೆಗೊಂಡಿತು. ಅಂದಿನಿಂದ ಶಾಲೆಗೆ ಅಗತ್ಯ ಮೂಲಸೌಕರ್ಯಗಳು ಲಭ್ಯವಾದವು. ಹಂತಹಂತವಾಗಿ ಅಭಿವೃದ್ಧಿ ಪಥದಲ್ಲಿ ಸಾಗತೊಡಗಿತು. ಇಂದು ಸುಸಜ್ಜಿತ ಕಟ್ಟಡ, ಕೊಠಡಿಗಳು, ಪ್ರಯೋಗಾಲಯ, ಕಂಪ್ಯೂಟರ್‌ ತರಬೇತಿ ಕೇಂದ್ರಗಳು, ಆಟದ ಮೈದಾನ, ಒಳಾಂಗಣ ಕ್ರೀಡಾಂಗಣ, ರಂಗಮಂದಿರ, ತೆರೆದ ಗ್ರಂಥಾಲಯ, ಉದ್ಯಾನವನ, ಕೈದೋಟ, ತರಕಾರಿ ವನ, ವಿದ್ಯಾರ್ಥಿಗಳು ಬಂದು ಹೋಗಲು ಉಚಿತ ಬಸ್‌ ಸೌಲಭ್ಯ ಹೀಗೆ ಹತ್ತುಹಲವು ಸೌಲಭ್ಯಗಳಿವೆ.

2009- 2010ರಿಂದ ಈ ಶಾಲೆಯಲ್ಲಿ ಮೊದಲ ಬಾರಿಗೆ 6ನೇ ತರಗತಿಯಿಂದ ಆಂಗ್ಲಮಾಧ್ಯಮ ತರಗತಿ ಆರಂಭಗೊಂಡಿತು. ರಾಜ್ಯದಲ್ಲಿಯೇ ಸರ್ಕಾರಿ ಶಾಲೆಯೊಂದು ಆಂಗ್ಲಮಾಧ್ಯಮ ತರಗತಿ ಆರಂಭಿಸಿದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2015- 2016ರಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿ, ರಾಜ್ಯದ ಮೊದಲ ಸರ್ಕಾರಿ ಶಾಲೆಯೆಂಬ ಖ್ಯಾತಿ ಗಳಿಸಿಕೊಂಡಿತು. ಸರ್ಕಾರದ ಸರ್ವಶಿಕ್ಷಣ ಯೋಜನೆ, ನಲಿ ಕಲಿ, ಹೀಗೆ ಸರ್ಕಾರದ ಹತ್ತುಹಲವು ಯೋಜನೆಗಳೊಂದಿಗೆ, ದಾನಿಗಳು, ಸಂಘ ಸಂಸ್ಥೆಗಳು, ಶಾಲಾಭಿವೃದ್ಧಿ ಸಹಕಾರಗಳೊಂದಿಗೆ ಕಳೆದ ಹತ್ತು ವರ್ಷಗಳಿಂದ ಈ ಶಾಲೆಗೆ ಸಿಗುವ ಅನುದಾನಗಳ ಸದ್ಬಳಕೆ ಆಗುತ್ತಿದೆ.

2015 ರಿಂದ ಗ್ರಾಮೀಣ, ಪಟ್ಟಣ ಪ್ರದೇಶಗಳಿಂದ ಶಾಲೆಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೌಲಭ್ಯ ಆರಂಭಿಸಲಾಗಿದೆ. ಅನ್ನದಾಸೋಹ ಯೋಜನೆಯಂತೆ ಎಲ್ಲ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಆರಂಭಿಸಲಾಗಿದೆ. ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ನೋಟ್‌ ಬುಕ್‌, ಶೈಕ್ಷಣಿಕ ಪರಿಕರಗಳನ್ನು ನೀಡಲಾಗುತ್ತಿದೆ. 2022- 2023ನೇ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿಯಿಂದ 8ನೇ ತರಗತಿವರೆಗೆ 339ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಹೊಂದಿದ ಶಾಲೆಯೆಂಬ ಖ್ಯಾತಿ ಪಡೆದಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಪ್ರಬಂಧ, ಬರವಣಿಗೆ ಕಲೆ, ಚರ್ಚಾಸ್ಪರ್ಧೆ, ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗುತ್ತಿದೆ. ಉಚಿತ ಕಂಪ್ಯೂಟರ್‌ ತರಬೇತಿ, ಹೆಣ್ಣುಮಕ್ಕಳಿಗೆ ಹೊಲಿಗೆ, ಗಂಡುಮಕ್ಕಳಿಗೆ ಕಸೂತಿ, ಸಂಗೀತ, ಸ್ಮಾರ್ಚ್‌ಕ್ಲಾಸ್‌ ಹಾಗೂ ಚಿತ್ರಕಲೆ ತರಬೇತಿಗಳನ್ನು ನುರಿತ, ಅನುಭವಿ ಶಿಕ್ಷಕರಿಂದ ನೀಡಲಾಗುತ್ತಿದೆ.

ಈ ಶಾಲೆಗೆ ಸಂದ ಪ್ರಶಸ್ತಿ- ಪುರಸ್ಕಾರಗಳು ಹಲವಾರು. ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದೆ. ದಸರಾ ಉತ್ಸವದಲ್ಲಿ ಶಿಲ್ಪಕಲಾ ವೈಭವ, ಸ್ತಬ್ಧಚಿತ್ರ ಪ್ರದರ್ಶನ, ನಾಟಕ, ನೃತ್ಯಪ್ರದರ್ಶನಗಳಲ್ಲಿ ಸಾಧನೆ ಮಾಡಿದೆ. ಜಿಲ್ಲಾ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ಶಾಲೆಯ ಎಲ್ಲ ಸಾಧನೆ, ಅಭಿವೃದ್ಧಿಗೆ ಈಗ ರಾಜ್ಯ ಸರ್ಕಾರದಿಂದ 2022ನೇ ಸಾಲಿನಲ್ಲಿ ಸ್ವಾಭಿಮಾನಿ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ.

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರಿಗೆ ಬೆದರಿಕೆ ಕರೆ

ಅಭಿವೃದ್ಧಿ ರೂವಾರಿ ಡಾ.ಬಿ.ಆರ್.ಗಂಗಾಧರಪ್ಪ:

ಈ ಶಾಲೆ ಸಾಧನೆ ರೂವಾರಿ ಮುಖ್ಯಶಿಕ್ಷಕ ಡಾ. ಬಿ.ಆರ್‌.ಗಂಗಾಧರಪ್ಪ. 2008ರಲ್ಲಿ ಪದವೀಧರ ಮುಖ್ಯೋಪಾಧ್ಯಾಯರಾಗಿ ಈ ಶಾಲೆಗೆ ಬಂದಿದ್ದಾರೆ. ಶಾಲಾಭಿವೃದ್ಧಿ, ಗ್ರಾಮಸ್ಥರ ಸಹಕಾರದೊಂದಿಗೆ ಹಂತಹಂತವಾಗಿ ಶಾಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಇವರ ಸೇವೆ ಪರಿಗಣಿಸಿ ಸಂಘ ಸಂಸ್ಥೆಗಳು, ಸರ್ಕಾರ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಭಾರತ ಸೇವಾ ರತ್ನ ಪ್ರಶಸ್ತಿ, ಗೌರವ ಡಾಕ್ಟರೇಟ್‌ ಪದವಿ, 2022ನೇ ಸಾಲಿನ ರಾಜ್ಯ ಅತ್ತುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಶಾಲೆ ಇನ್ನಷ್ಟುಪ್ರಗತಿಯ ಪಥದಲ್ಲಿ ಸಾಗಲಿ.

click me!