Karnataka schools self defence training: ರಾಜ್ಯದ ವಿದ್ಯಾರ್ಥಿನಿಯರಿಗೆ 'ಸ್ವಯಂ ರಕ್ಷಣಾ' ಕೌಶಲ್ಯ ತರಬೇತಿ

By Suvarna NewsFirst Published Jan 3, 2022, 1:55 PM IST
Highlights
  • ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ 'ಸ್ವಯಂ ರಕ್ಷಣಾ' ಕೌಶಲ್ಯ ತರಬೇತಿ 
  • ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪ್ರಯೋಜನ
  • ವಿದ್ಯಾರ್ಥಿನಿಯರಿಗೆ ಕರಾಟೆ, ಟೇಕ್ವಾಂಡೋ ಮತ್ತು ಜೂಡೋ  ತರಭೇತಿ

ಬೆಂಗಳೂರು (ಜ.3): ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಮೆಟ್ರಿಕ್ ನಂತರದ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ 'ಸ್ವಯಂ ರಕ್ಷಣಾ' ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ತಿಂಗಳ ಮೊದಲ ವಾರದಿಂದಲೇ ಈ ತರಗತಿಗಲು ಆರಂಭವಾಗಲಿವೆ. ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯದ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ವಿಶೇಷ ತರಬೇತಿಯನ್ನು ಪಡೆಯಲಿದ್ದಾರೆ. ಈ ತರಬೇತಿಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ, ಟೇಕ್ವಾಂಡೋ ಮತ್ತು ಜೂಡೋ ಕಲಿಸಲಾಗುವುದು.

ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರುವ ಬಾಲಕಿಯರು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದ ಬಾಲಕಿಯರಿಗೆ ನುರಿತ ಮಹಿಳಾ ತರಬೇತುದಾರರ ಮೂಲಕ ಕರಾಟೆ, ಜುಡೋ, ಟೈಕ್ವಾಂಡೋ ಇತ್ಯಾದಿ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ನೀಡಲು ನಿರ್ಧಾರ ಮಾಡಲಾಗಿದೆ.  4245 ಸರ್ಕಾರಿ ಪ್ರೌಢಶಾಲೆಗಳು ಮತ್ತು 441 ಪದವಿಪೂರ್ವ ಕಾಲೇಜುಗಳ ಬಾಲಕಿಯರು ಇದರ ಪ್ರಯೋಜನ ಪಡೆಯಲಿದ್ದಾರೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ವಾಸಿಸುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮದಡಿ, ತರಬೇತಿದಾರರಿಗೆ ಮಾಸಿಕ 4,000 ರೂ. ಮತ್ತು ತರಬೇತಿ ವೆಚ್ಚವಾಗಿ 1,36,000 ರೂ. ಮತ್ತು 100 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು 50 ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಳಿಗೆ 68,000 ರೂ ಖರ್ಚು ಮಾಡಲಾಗುತ್ತಿದ್ದು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

SAVITRIBAI PHULE'S BIRTH ANNIVERSARY: ಸ್ತ್ರೀಯರ ಬಾಳು ಬೆಳಗಿದ ವಿದ್ಯಾದಾತೆ ಸಾವಿತ್ರಿಬಾಯಿ ಫುಲೆ

ಆಯ್ಕೆಯಾದ ತರಬೇತುದಾರರಿಗೆ ತರಬೇತಿಗಾಗಿ ಎಂಟು ತಿಂಗಳಿಗೆ 4,000 ರೂ, ಪ್ರತಿ ಹಾಸ್ಟೆಲ್‌ಗೆ ಪ್ರಯಾಣ ವೆಚ್ಚವಾಗಿ 800 ರೂ. ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೊಮ್ಮೆ ಏಕರೂಪದ ವೆಚ್ಚವಾಗಿ 500 ರೂಪಾಯಿಗಳನ್ನು ನೀಡಲಾಗುತ್ತದೆ.  ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಈ ವಿಶೇಷ ತರಬೇತಿಗಾಗಿ 2 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 

ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ತರಬೇತುದಾರರು ಪ್ರತಿ ಹಾಸ್ಟೆಲ್‌ಗೆ ವಾರಕ್ಕೆ ಎರಡು ಬಾರಿ ಮತ್ತು ತಿಂಗಳಿಗೆ ಎಂಟು ಬಾರಿ ಭೇಟಿ ನೀಡಬೇಕು. ಪ್ರತಿ ವಾರ 45 ನಿಮಿಷಗಳ ಅವಧಿಯ ಎರಡು ತರಗತಿಗಳನ್ನು ನಡೆಸಬೇಕು. ಮತ್ತು ವಿದ್ಯಾರ್ಥಿನಿಯರಿಗೆ ವಿವಿಧ ಸ್ವರಕ್ಷಣೆ ತಂತ್ರಗಳನ್ನು ಕಲಿಸಬೇಕಾಗುತ್ತದೆ. ಮೂರು ತಿಂಗಳಲ್ಲಿ ಒಟ್ಟು 20 ತರಬೇತಿ ಕ್ಲಾಸುಗಳು ಪೂರ್ಣಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಕೋರ್ಸ್ ಪ್ರಾರಂಭವಾಗುವ ಮೊದಲು ಪ್ರತಿಯೊಬ್ಬ ವಿದ್ಯಾರ್ಥಿನಿಯು ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ.

Delhi IIT STEM Mentorship: ಹುಡುಗಿಯರಿಗೆ ಸ್ಟೆಮ್ ಮೆಂಟರ್‌ಶಿಪ್ ಆರಂಭಿಸಿದ ದೆಹಲಿ

ತರಬೇತಿಯು ಹೊಸ ವರ್ಷ ಜನವರಿ 1, 2022 ರಿಂದ ಮಾರ್ಚ್ 31, 2022 ರವರೆಗೆ ಮೂರು ತಿಂಗಳ ಅವಧಿಗೆ ಮಾತ್ರ ನಡೆಯಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನಿಯಮಿತವಾಗಿ ತರಬೇತಿ ನೀಡಲಾಗುತ್ತದೆ.

ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಸೇರಿದ 629 ಹಾಸ್ಟೆಲ್‌ಗಳಲ್ಲಿ ಸುಮಾರು 69,867 ವಿದ್ಯಾರ್ಥಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ಈ ತರಬೇತಿ ಪಡೆದುಕೊಳ್ಳಲು ಅರ್ಹತೆಯನ್ನು ಹೊಂದಿರುತ್ತಾರೆ.

ಈ ಕಾರ್ಯಕ್ರಮ ಕುರಿತು ಪ್ರತಿಕ್ರಿಯೆ ನೀಡಿಲುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರೇಷ್ಮಾ ಕೌಸರ್ ಅವರು, ಯಾವುದೇ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಲು ಈ ಕಾರ್ಯಕ್ರಮ ಹುಡುಗಿಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಈಗಾಗಲೇ ಮಾರ್ಷಲ್ ಆರ್ಟ್ಸ್ ತರಬೇತುದಾರರನ್ನು ಆಯ್ಕೆ ಮಾಡಿದ್ದೇವೆ. ಕಾರ್ಯಕ್ರಮವು ಜನವರಿ 1 ರಿಂದ ಪ್ರಾರಂಭವಾಗುತ್ತದೆ. ಇದು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕೌಶಲ್ಯವನ್ನು ಹೆಚ್ಚಿಸುತ್ತದೆ. ತರಬೇತಿ ಪಡೆದವರಿಗೆ ದುಷ್ಕರ್ಮಿಗಳನ್ನು ಎದುರಿಸುವ ಮಾರ್ಗಗಳನ್ನು ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.

click me!