Savitribai Phule's birth anniversary: ಸ್ತ್ರೀಯರ ಬಾಳು ಬೆಳಗಿದ ವಿದ್ಯಾದಾತೆ ಸಾವಿತ್ರಿಬಾಯಿ ಫುಲೆ

Kannadaprabha News   | Asianet News
Published : Jan 03, 2022, 01:15 PM ISTUpdated : Jan 03, 2022, 01:47 PM IST
Savitribai Phule's birth anniversary: ಸ್ತ್ರೀಯರ ಬಾಳು ಬೆಳಗಿದ ವಿದ್ಯಾದಾತೆ ಸಾವಿತ್ರಿಬಾಯಿ ಫುಲೆ

ಸಾರಾಂಶ

ಆ ಕಾಲದಲ್ಲಿ ಹೆಣ್ಣೊಬ್ಬಳು ಶಿಕ್ಷಕಿಯಾಗುವುದು (Teacher) ಎಂದರೆ ಯಾರೂ ಮಾಡಬಾರದ ತಪ್ಪು ಎಂದೇ ಜನರು ಭಾವಿಸುತ್ತಿದ್ದರು. ಹೀಗಾಗಿ ಫುಲೆ ಅವರು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಅವರನ್ನು ತಡೆದು ಸೆಗಣಿ, ಕೆಸರು ಎರಚಿ ಅವಮಾನಿಸುತ್ತಿದ್ದರು. ಆದರೂ ಫುಲೆ ಎದೆಗುಂದಲಿಲ್ಲ, ಧೈರ್ಯ ಕಳೆದುಕೊಳ್ಳಲಿಲ್ಲ.

ಜನವರಿ 03, ಇಂದು ದೇಶದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಅವರ 191ನೇ ಜನ್ಮದಿನೋತ್ಸವ. ಭಾರತದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದೆಂದರೆ ಅದೊಂದು ದೊಡ್ಡ ಅಪಚಾರ, ಅಪವಿತ್ರ ಎಂದು ಭಾವಿಸುತ್ತಿದ್ದ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳೂ ಶಿಕ್ಷಣ ಪಡೆಯಬೇಕೆಂದು ಹೋರಾಡಿದ ದಿಟ್ಟಮಹಿಳೆ ಸಾವಿತ್ರಿಬಾಯಿ ಫುಲೆ.

ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅದರ ನಷ್ಟಆ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಆಗುತ್ತದೆ ಎಂದು ಭಾವಿಸಿದ್ದ ಸಾವಿತ್ರಿಬಾಯಿ ಫುಲೆ ಅವರು ಅದಕ್ಕಾಗಿ ಅವಿರತವಾಗಿ ಹೋರಾಡಿದರು. ಹಾಗಾಗಿಯೇ ಅವರನ್ನು ‘ಆಧುನಿಕ ಶಿಕ್ಷಣದ ತಾಯಿ’ಯೆಂದು ಕರೆಯಲಾಗುತ್ತದೆ.

ಶಿಕ್ಷಣ ಕ್ಷೇತ್ರದ ಕ್ರಾಂತಿ

19ನೇ ಶತಮಾನದಲ್ಲಿ ತಮ್ಮ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಅಸ್ಪೃಶ್ಯರು, ದಮನಿತರು, ಶೋಷಿತರು ಹಾಗೂ ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು. ಸಾವಿತ್ರಿಬಾಯಿ ಫುಲೆ ಅವರು ಇಡುತ್ತಿದ್ದ ಪ್ರತಿ ಹೆಜ್ಜೆಯ ಹಿಂದೆ ಅವರ ಪತಿ ಜ್ಯೋತಿ ಬಾ ಫುಲೆ ಅವರ ಸಹಕಾರವಿರುತ್ತಿತ್ತು. ಅವರಿಬ್ಬರ ದಾಂಪತ್ಯ ಜೀವನವೇ ಒಂದು ಆದರ್ಶ ಬದುಕು. ಅದೊಮ್ಮೆ ತನ್ನ ಸ್ನೇಹಿತನ ಮದುವೆಯಲ್ಲಿ ಅವಮಾನಿತರಾಗಿ ಹೊರಬಂದ ಜ್ಯೋತಿಬಾ ಫುಲೆ, ಶಿಕ್ಷಣದಿಂದ ವಂಚಿತರಾದ ಸಮುದಾಯಕ್ಕಾಗಿ ಶಾಲೆಯನ್ನು ತೆರೆಯುವ ಪಣತೊಟ್ಟು 1848ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಅಸ್ಪೃಶ್ಯರು, ಹಿಂದುಳಿದವರು ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ತೆರೆದರು. ಆಗ ಕೆಳವರ್ಗದವರ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬಾರದಿದ್ದಾಗ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿ ಸಾವಿತ್ರಿಬಾಯಿ ಫುಲೆ ಅವರನ್ನೇ ಶಿಕ್ಷಕಿಯನ್ನಾಗಿ ನೇಮಿಸಿದರು.

18 ಶಾಲೆಗಳನ್ನು ತೆರೆದರು

ಆ ಕಾಲದಲ್ಲಿ ಹೆಣ್ಣೊಬ್ಬಳು ಶಿಕ್ಷಕಿಯಾಗುವುದು ಎಂದರೆ ಸಮಾಜ ಆಕೆಯನ್ನು ನೋಡುತ್ತಿದ್ದ ರೀತಿಯೇ ಬೇರೆ ಇತ್ತು. ಯಾರೂ ಮಾಡಬಾರದ ದೊಡ್ಡ ತಪ್ಪೊಂದನ್ನು ಆಕೆ ಮಾಡುತ್ತಿದ್ದಾಳೇನೋ ಎಂದೇ ಅನೇಕರು ಭಾವಿಸಿದ್ದರು. ಹಲವರು ಈಕೆಗೇಕೆ ಬೇಕು ಸಮಾಜದ ಹಾಗೂ ಮಹಿಳೆಯರ ಉಸಾಬರಿ ಎಂದು ಆಡಿ ನಕ್ಕರು. ಸಾಲದ್ದಕ್ಕೆ ಸಾವಿತ್ರಿಬಾಯಿ ಫುಲೆ ಅವರು ಪಾಠ ಮಾಡಲು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಅವರನ್ನು ತಡೆದು ಅವರ ಮೇಲೆ ಸೆಗಣಿ, ಕೆಸರು, ಕೊಳಚೆ ನೀರನ್ನು ಎರಚಿ ಅವಮಾನಿಸುತ್ತಿದ್ದರು. ಈ ತರಹದ ಅವಮಾನ ಅವರಿಗೆ ದಿನನಿತ್ಯವೂ ಆಗುತ್ತಿತ್ತು. ಆದರೂ ಅವರು ಎದೆಗುಂದಲಿಲ್ಲ, ಧೈರ್ಯ ಕಳೆದುಕೊಳ್ಳಲಿಲ್ಲ. ಪ್ರತಿದಿನವೂ ದಾರಿಯಲ್ಲಿ ಆಗುತ್ತಿದ್ದ ಅವಮಾನವನ್ನು ಮನಗಂಡಿದ್ದ ಸಾವಿತ್ರಿಬಾಯಿಯವರು ಅದಕ್ಕೆಂದೇ ತಾವು ಶಾಲೆಗೆ ತೆಗೆದುಕೊಂಡು ಬರುತ್ತಿದ್ದ ಕೈಚೀಲದಲ್ಲಿ ಇನ್ನೊಂದು ಸೀರೆಯನ್ನು ಮರೆಯದೆ ತರುತ್ತಿದ್ದರು!

ಮಕ್ಕಳು ಶಾಲೆಗೆ ಬರುವುದಕ್ಕೂ ಮುನ್ನ ಸೆಗಣಿ, ಕೆಸರು ತಾಗಿ ಒದ್ದೆಯಾಗಿದ್ದ ಸೀರೆಯನ್ನು ಬದಲಿಸಿ ಬ್ಯಾಗಿನಲ್ಲಿ ತಂದಿದ್ದ ಬದಲಿ ಸೀರೆಯನ್ನುಟ್ಟು ಮಕ್ಕಳಿಗೆ ಪಾಠ ಮಾಡಲು ಅಣಿಯಾಗುತ್ತಿದ್ದರು. ಯಾರೆಷ್ಟೇ ಅವಮಾನಿಸಿದರು, ವಿರೋಧಿಸಿದರು, ಕೊನೆಗೆ ಕೊಲೆಯ ಸಂಚು ಹೂಡಿದರೂ ಸಾವಿತ್ರಿಬಾಯಿ ಅವರು ತಾವು ತಳೆದಿದ್ದ ನಿರ್ಧಾರದಿಂದ ಒಂದಿನಿತೂ ಹಿಂದೆ ಸರಿಯಲಿಲ್ಲ. ಯಾವ ಗೊಡ್ಡು ಬೆದರಿಕೆಗಳಿಗೂ ಕಿವಿಗೊಡಲಿಲ್ಲ. ಬದಲಾಗಿ ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆ ಇಬ್ಬರೂ ಸೇರಿ 1848ರಿಂದ 1852ರ ಅವಧಿಯಲ್ಲಿ ಸುಮಾರು 18 ಶಾಲೆಗಳನ್ನು ತೆರೆದರು. ಈ ಶಾಲೆಗಳ ಜವಾಬ್ದಾರಿಯನ್ನು ಸ್ವತಃ ಸಾವಿತ್ರಿಬಾಯಿ ಅವರೇ ವಹಿಸಿಕೊಂಡರು.

ನಿರ್ಗತಿಕರಿಗೆ ಆಸರೆಯಾದರು

ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ, ಶಾಲಾ ಸಂಚಾಲಕಿಯಾಗಿ ವಹಿಸಿಕೊಂಡ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತಮ್ಮ ಪತಿಯಿಂದಲೇ ಸೈ ಎನಿಸಿಕೊಂಡರು. ನಂತರ ಅಂದರೆ 1854ರ ಹೊತ್ತಿಗೆ ಕಾರ್ಮಿಕರು ಹಾಗೂ ರೈತರಿಗಾಗಿ ರಾತ್ರಿ ಶಾಲೆಗಳನ್ನು ಸಹ ತೆರೆದರು. ತಾವು ಸ್ಥಾಪಿಸಿದ ಸತ್ಯಶೋಧಕ ಸಮಾಜದ ಮೂಲಕ ಹತ್ತಾರು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ತಾಯ್ತನದಿಂದ ವಂಚಿತರಾಗಿದ್ದ ಸಾವಿತ್ರಿಬಾಯಿ ಅವರು ಅಪ್ಪ-ಅಮ್ಮಂದಿರನ್ನು ಕಳೆದುಕೊಂಡು ಬೀದಿಯಲ್ಲಿದ್ದ ಮಕ್ಕಳಿಗಾಗಿ ಅನಾಥಾಶ್ರಮಗಳನ್ನು ಸ್ಥಾಪಿಸುವ ಮೂಲಕ ಆ ನಿರ್ಗತಿಕ ಮಕ್ಕಳಿಗೆ ತಾವೇ ತಾಯಿ-ತಂದೆಯಾದರು. ಇಷ್ಟೇ ಅಲ್ಲದೆ ಸಾವಿತ್ರಿಬಾಯಿ ಅವರು ಮಹಿಳೆಯರ ಅನೇಕ ಸಮಸ್ಯೆಗಳ ನಿವಾರಣೆಗೆ ಮುಂದಾದರು. ಅದಕ್ಕಾಗಿ ಅವರು ಸಾಕಷ್ಟುಹೋರಾಟಗಳನ್ನು ಮಾಡಬೇಕಾಯಿತು.

ಆ ಸಮಯದಲ್ಲಿ ವಿಧವೆಯರ ತಲೆ ಬೋಳಿಸುವ ಅನಿಷ್ಠ ಪದ್ಧತಿಯನ್ನು ಸಾವಿತ್ರಿಬಾಯಿ ಅವರು ಪ್ರಬಲವಾಗಿ ವಿರೋಧಿಸಿದರು. ಯಾರ ವಿರೋಧವನ್ನೂ ಲೆಕ್ಕಿಸದೆ ವಿಧವೆಯರ ಪುನರ್ವಿವಾಹ ಮಾಡಿಸುವ ಮೂಲಕ ವಿಧವೆಯರ ಬಾಳು ಬೆಳಕಾಗಿಸಿದರು. ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ವಿಧವೆಯರ ಮರುವಿವಾಹ ಮಾಡಿಸುವಂತ ಒಂದು ಕ್ರಾಂತಿಕಾರಿ ನಿಲುವು ತಳೆದಿದ್ದು ಬಹುದೊಡ್ಡ ಸಾಧನೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಜೊತೆಗೆ ವಿಧವೆಯರಿಗೆ ಹಾಗೂ ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಸ್ತ್ರೀಯರಿಗಾಗಿ ಪುನರ್ವಸತಿ ಕೇಂದ್ರಗಳನ್ನೂ ಅವರು ಸ್ಥಾಪಿಸಿದರು. ವಿವಾಹ ಬಾಹಿರವಾಗಿ ಹುಟ್ಟಿದ ಮಕ್ಕಳಿಗಾಗಿ ಹಾಗೂ ಅವರ ಆರೈಕೆಗಾಗಿ ನೂತನ ಶಿಶು ಕೇಂದ್ರಗಳನ್ನು ತೆರೆದರು.

ಈ ರೀತಿಯ ನೂರಾರು ಸಮಾಜಮುಖಿ ಕಾರ್ಯಗಳ ಮೂಲಕ ಸರ್ವ ಸ್ತರ ಹಾಗೂ ಸಮಾಜದ ಕಣ್ಮಣಿಯಾದರು. ಒಟ್ಟಿನಲ್ಲಿ ಮಹಿಳೆಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಸದುದ್ದೇಶದಿಂದ ತಮಗೆ ಎದುರಾದ ಕಷ್ಟ-ನಷ್ಟಗಳನ್ನು ಲೆಕ್ಕಿಸದೆ ಸ್ತ್ರೀಯರ ಸಬಲೀಕರಣಕ್ಕಾಗಿ ಹಾಗೂ ಅವರ ಶಿಕ್ಷಣಕ್ಕಾಗಿ ಹಗಲು-ರಾತ್ರಿ ಎನ್ನದೇ ಶ್ರಮಿಸಿ ಸಮಾಜದ ಮುಂದೆ ಮಹಾಮಾತೆ ಎನಿಸಿಕೊಂಡರು. ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿ ಅದರಲ್ಲಿ ಗೆದ್ದ ಸಾವಿತ್ರಿಬಾಯಿ ಫುಲೆ ಅವರ ಎಲ್ಲಾ ಸಾಧನೆಗಳನ್ನು ಗುರುತಿಸಿದ ಅಂದಿನ ಬ್ರಿಟಿಷ್‌ ಸರ್ಕಾರ ಅವರನ್ನು ‘ಭಾರತದ ಮೊದಲ ಮಹಿಳಾ ಶಿಕ್ಷಕಿ’ ಎಂದು ಕರೆದು ಗೌರವಿಸಿತು. ಇಂದು ಅಪ್ರತಿಮ ಸಾಧಕಿಯ ಜನ್ಮದಿನಾಚರಣೆ. ಈ ಸಂದರ್ಭದಲ್ಲಿ ಅವರ ಹೋರಾಟ, ಸಾಧನೆಗಳನ್ನು ಹೆಮ್ಮೆಯಿಂದ ನೆನೆದು, ಭಕ್ತಿಯಿಂದ ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.

- ಮಾರುತೀಶ್‌ ಅಗ್ರಾರ, ತುಮಕೂರು

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ