ಬೆಂಗಳೂರು (ಅ.18): 1 ರಿಂದ 5 ನೇ ತರಗತಿಗೆ ಶಾಲೆ (School) ಪ್ರಾರಂಭದ ವಿಚಾರವಾಗಿ ಇಂದು ಮಧ್ಯಾಹ್ನದೊಳಗೆ ತಾಂತ್ರಿಕ ಸಲಹಾ ಸಮಿತಿ ಅಂತಿಮ ವರದಿ ಬರಲಿದೆ ಎಂದು ಸಚಿವ ಬಿಸಿ ನಾಗೇಶ್ (BC Nagesh) ಹೇಳಿದ್ದಾರೆ.
ತಜ್ಞರ ಸಲಹೆ (Experts) ಪಡೆದೇ ಶಾಲೆ ಆರಂಭ ಮಾಡಿ ಎಂದು ಸಿಎಂ ಹೇಳಿದ್ದಾರೆ. ಅ. 21ಕ್ಕೆ ಶಾಲೆ ಓಪನ್ ಆಗುವುದು ನಿಶ್ಚಿತ. ಒಂದೇ ಹಂತದಲ್ಲಿ ಶಾಲೆ ಓಪನ್ ಮಾಡಲಾಗುತ್ತದೆ. ಆರಂಭದಲ್ಲಿ ಮಧ್ಯಾಹ್ನದ ವರೆಗೆ ಶಾಲೆ ಓಪನ್ ಮಾಡಲಾಗುತ್ತದೆ ಎಂದು ಇಂದು ಬೆಂಗಳೂರಿನಲ್ಲಿ (Bengaluru) ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್
ಹಂತ ಹಂತವಾಗಿ ಸ್ಥಿತಿ ನೋಡಿಕೊಂಡು ಪೂರ್ಣಾವಧಿ ಶಾಲೆ ತೆರೆಯಲಾಗುತ್ತದೆ. ವರದಿ ಬಂದ ನಂತರ ಸಿಎಂ ಅಭಿಪ್ರಾಯ ಪಡೆದು ನಿರ್ಧಾರ ಮಾಡಲಾಗುತ್ತದೆ. ಅದರೆ ಶಾಲೆ ತೆರೆಯುವುದು ಮಾತ್ರ ನಿಶ್ಚಿತ ಎಂದರು.
ಮಕ್ಕಳಿಗೆ ಲಸಿಕೆ : ಮಕ್ಕಳಿಗೆ ಲಸಿಕೆ (Vaccine) ಸಿಗುತ್ತಿರುವುದು ಸಿಹಿ ಸುದ್ದಿಯಾಗಿದೆ. ಮಕ್ಕಳಿಗೆ ಲಸಿಕೆ ಬಂದರೆ ಬೇಗನೇ ಕೊಟ್ಟು ಮುಗಿಸುತ್ತೇವೆ. ಶಾಲೆಯಲ್ಲೇ ಕೊರೋನಾ (covid) ಲಸಿಕೆ ಕೊಡುವ ಚಿಂತನೆ ಇದೆ ಎಂದರು.
ಏಕೋಪಾಧ್ಯಾಯ ಶಾಲೆಯ ಬಗ್ಗೆ ಗಮನ ಹರಿಸುತ್ತೇವೆ. ಏಕೋಪಾದ್ಯಾಯ ಶಾಲೆಗಲ್ಲಿ ಮಕ್ಕಳ ಕೊರತೆಯೂ ಇದೆ. ಮಕ್ಕಳ ಸಂಖ್ಯೆ ಹೆಚ್ಚಳ ಮಾಡಬೇಕು. ಬಳಿಕ ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.
ಕೊರೋನಾ(Coronavirus) ಲಗ್ಗೆ ಇಟ್ಟಾಗಿನಿಂದಲೂ ಹೆತ್ತವರಿಗೆ ಮಕ್ಕಳ ಕಾಳಜಿ ಬಹಳಷ್ಟು ಕಾಡಿತ್ತು. ಅಲ್ಲದೇ ಕೊರೋನಾ ನಿಯಂತ್ರಿಸಲು ಲಸಿಕೆ(Vaccine) ಬಂದಿದ್ದರೂ, ಮಕ್ಕಳಿಗೆ ಲಸಿಕೆ ತಯಾರಾಗದ ವಿಚಾರ ಮತ್ತಷ್ಟು ತಲೆಕೆಡಿಸಿಕೊಳ್ಳುವಂತೆ ಮಾಡಿತ್ತು. ಆದರೀಗ ಈ ಎಲ್ಲಾ ಚಿಂತೆ ಕೊನೆಯಾಗುವ ಸಮಯ ಸನ್ನಿಹಿತವಾಗಿದೆ.
ಹೌದು 2 - 18 ವರ್ಷ ವಯೋಮಾನದ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ನೀಡಲು ಡಿಸಿಜಿಐ(Drugs Standard Control Organisation) ಮಂಗಳವಾರ ಒಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿದೆ. ಈ ಮೂಲಕ ಕೋವ್ಯಾಕ್ಸಿನ್ ಮುಖ್ಯವಾಗಿ ಮಕ್ಕಳಿಗೆ ನೀಡಬಹುದಾದ ದೇಶದ ಮೊದಲ ಕೋವಿಡ್ ಲಸಿಕೆಯಾಗಲಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತು ಮತ್ತು ಈ ತಿಂಗಳ ಆರಂಭದಲ್ಲಿ ಈ ದತ್ತಾಂಶವನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಸಲ್ಲಿಸಿತ್ತು.
ಈ ದತ್ತಾಂಶಗಳ ಆಧಾರದ ಮೇಲೆ ವಿವರವಾಗಿ ಚರ್ಚೆ ನಡೆದ ಬಳಿಕ 2 ರಿಂದ 18 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ. ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ನೀಡಲಾಗುವುದು. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ 20 ದಿನಗಳ ಅಂತರವಿರಬೇಕು ಎನ್ನಲಾಗಿದೆ.
ಡಿಸಿಜಿಐ ಅಧಿಕೃತ ಮಾಹಿತಿಯ ನಿರೀಕ್ಷೆ
ಅತ್ತ ತಜ್ಞರ ಸಮಿತಿಯ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 2-18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದೆ ಎನ್ನಲಾಗಿದೆಯಾದರೂ ಈ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಈ ಕುರಿತಂತೆ ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.
ಇನ್ನು ಅತ್ತ ಇತರ ಕಂಪನಿಗಳು ಕೂಡಾ ಮಕ್ಕಳಿಗೆ ನೀಡುವ ಲಸಿಕೆ ಕುರಿತು ವೈದ್ಯಕೀಯ ಸಂಶೋಧನೆಯ ಪ್ರಯೋಗದಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.