2013-14ನೇ ಸಾಲಿನಲ್ಲಿ 194ರಷ್ಟಿದ್ದ ಮಕ್ಕಳ ಸಂಖ್ಯೆ ಸದ್ಯ 47ಕ್ಕೆ ಕುಸಿತ, ಎಸ್‌ಡಿಎಂಸಿ ಇಲ್ಲದೇ ಅಭಿವೃದ್ಧಿಯೂ ಕ್ಷೀಣ.
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಮಾ.10): ಶಾಲೆ ಶಿಕ್ಷಕರು ದಾಖಲಾತಿ ಹೆಚ್ಚಿಸಲು ಜಾಗೃತಿ ಜಾಥಾ ಮೂಡಿಸದೇ ಇರುವುದು, ಖಾಸಗಿ ಶಾಲೆಗಳ ಪೈಪೋಟಿ, ಒಂಬತ್ತು ವರ್ಷಗಳಿಂದ ಎಸ್‌ಡಿಎಂಸಿ ರಚನೆ ಮಾಡದೇ ಇರುವುದು ಹೀಗೆ ಸಾಲು ಸಾಲು ಸಮಸ್ಯೆಗಳ ಮಧ್ಯೆ ಸಿಕ್ಕಿ ಶತಮಾನೋತ್ಸವದ ಹೊಸ್ತಿಯಲ್ಲಿ ಇರುವ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ಆದರೆ, ಶಿಕ್ಷಣ ಇಲಾಖೆ ಮಾತ್ರ ಶಾಲೆ ಉಳಿವಿಗಾಗಿ ಪ್ರಯತ್ನ ಮಾಡದಿರುವುದು ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
undefined
ಹೌದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ದಾಖಲೆ ಕುಸಿತ ಕಂಡಿದೆ. ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಶೈಕ್ಷಣಿಕ ವರ್ಷಾರಂಭದಲ್ಲಿ ದಾಖಲಾತಿ ಜಾಗೃತಿಗಾಗಿ ಡಂಗೂರ ಸಾರುವುದು, ಮನೆಮನೆಗೆ ಜಾಥಾ ತೆರಳುವುದನ್ನು ಮಾಡಿಲ್ಲ. ತೇರದಾಳ, ರಬಕವಿ, ರಾಂಪೂರ, ಸಮೀರವಾಡಿ, ಹಳಿಂಗಳಿ ಸೇರಿದಂತೆ ನೆರೆಯ ಬೆಳಗಾವಿ ಜಿಲ್ಲೆಯ ಮುಗಳಖೋಡ ಹಾಗೂ ಹಾರೂಗೇರಿಯ ಖಾಸಗಿ ಶಾಲೆಗಳು ಮನೆ ಬಾಗಿಲಿಗೆ ಹತ್ತಾರು ಬಸ್‌ಗಳನ್ನು ಕಳುಹಿಸಿ ಈ ಎಲ್ಲ ಅವ್ಯವಸ್ಥೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಮಾತ್ರ ಮಕ್ಕಳ ಸಂಖ್ಯೆ ಹೆಚ್ಚಿಸಲು ಯಾವುದೇ ಪ್ರಯತ್ನ ಮಾಡದಿರುವುದು ಜನತೆಯ ಹುಬ್ಬೇರಿಸುವಂತೆ ಮಾಡಿದೆ. 7 ವರ್ಗಗಳನ್ನು ಹೊಂದಿರುವ ಈ ಶಾಲೆಯು ಮಕ್ಕಳ ಹಾಜರಾತಿ ನಿರೀಕ್ಷಿತವಾಗಿದ್ದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಬೇಕಿತ್ತು. 2013-14ರಲ್ಲಿ 194ರಷ್ಟಿದ್ದ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದು ಈ ವರ್ಷ ಕೇವಲ 47ಕ್ಕೆ ನಿಂತಿದೆ. ಹೀಗೆ ಮುಂದುವರೆದರೆ ಶತಮಾನೋತ್ಸ(2024)ವದ ಹೊತ್ತಿಗೆ ಶಾಲೆ ಇರುತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಹೈಕೋರ್ಟ್ ಮಹತ್ವದ ತೀರ್ಪು, 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು!
9 ವರ್ಷದಿಂದ ಎಸ್‌ಡಿಎಂಸಿ ಇಲ್ಲ:
ಶಾಲೆಗೆ ಬೆನ್ನೆಲುಬಾಗಿ ನಿಂತು ಅದರದ್ದೆ ಆಡಳಿತ ನೋಡಿಕೊಳ್ಳಲು ಎಸ್ಡಿಎಂಸಿ ರಚನೆಗೆ ಸಹಾಯ ಮಾಡಬೇಕಿದ್ದ ಗ್ರಾಪಂ ಕಳೆದ ಒಂಬತ್ತು ವರ್ಷಗಳಿಂದ ಸರ್ಕಾರಿ ಶಾಲೆಯು ಹಂತಹಂತವಾಗಿ ದಯನೀಯ ಸ್ಥಿತಿಗೆ ಜಾರುತ್ತಿರುವುದನ್ನು ಕಂಡರೂ ಎಸ್ಡಿಎಂಸಿ ಸಮಿತಿ ರಚಿಸದೇ ಕುಂಭಕರ್ಣ ನಿದ್ರೆಯಲ್ಲಿರುವುದರಿಂದ ಇಲ್ಲಿ ಓದುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬರುತ್ತಿದೆ. ಶಾಲೆಗೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾಗಲು ಗ್ರಾಪಂ ಅಸಡ್ಡೆಯೇ ಕಾರಣ ಎಂಬುದು ಗ್ರಾಮಸ್ಥರ ಆರೋಪ. ಕಳೆದ ಒಂಬತ್ತು ವರ್ಷಗಳಿಂದ ಎಸ್ಡಿಎಂಸಿ ಅಸ್ತಿತ್ವದಲ್ಲಿಲ್ಲ. ಅಲ್ಲಿಂದ ಮಕ್ಕಳ ಸಂಖ್ಯೆ ಕೂಡಾ ಕಡಿಮೆಯಾಗುತ್ತಿರುವುದು ಗಮನಾರ್ಹವಾದ ಅಂಶವಾದರೂ ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ನೀಡಬೇಕಿದ್ದ ಶಿಕ್ಷಣ ಇಲಾಖೆ ಈ ಕುರಿತು ಕಿಂಚಿತ್ತೂ ಗಮನಿಸಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ಪತ್ರಕ್ಕೆ ಕಿಮ್ಮತ್ತಿಲ್ಲ:
ಈ ಶಾಲೆಯಲ್ಲಿ ಇಬ್ಬರೂ ಕಾಯಂ ಹಾಗೂ ಓರ್ವ ಅತಿಥಿ ಶಿಕ್ಷಕರಿದ್ದಾರೆ. ಇರುವ 9 ಕೊಠಡಿಗಳಲ್ಲಿ ಎರಡು ಕೊಠಡಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯ, ಅಂಗನವಾಡಿ ತಲಾ ಒಂದೊಂದು ಕೊಠಡಿ ಬಳಸಿಕೊಂಡಿದ್ದಾರೆ. ಉಳಿದವುಗಳಲ್ಲಿ ಮಕ್ಕಳ ಪಾಠ ಪ್ರವಚನ ಸಾಗಬೇಕು. ನಿಯಮಾವಳಿಯಂತೆ ಎಸ್‌ಡಿಎಂಸಿ ರಚನೆಗೆ ಸ್ಥಳೀಯ ಗ್ರಾಪಂಗೆ ಶಾಲಾ ಮುಖ್ಯಗುರುಗಳು ನಾಲ್ಕಾರು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಹಳೆಯ ವಿದ್ಯಾರ್ಥಿಗಳು ಈಗಿರುವ ಪಿಡಿಒ ಅವರಿಗೆ ಎಸ್ಡಿಎಂಸಿ ರಚಿಸಲು ಮನವಿ ಸಲ್ಲಿಸಿದರೂ ಅವರು ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಂಡಿಲ್ಲ.
ಸದ್ಯ ಕೋಮಾದಲ್ಲಿರುವ ಶಾಲೆಯ ಉಳಿಸಲು ಎಸ್ಡಿಎಂಸಿ ರಚನೆ ಮಾಡಿ ಮಕ್ಕಳ ಸಂಖ್ಯೆ ಹೆಚ್ಚಳವಾಗುವ ಕುರಿತಾಗಿ ಗಮನ ಹರಿಸಬೇಕಾಗಿದ್ದ ಗ್ರಾಪಂ ತನ್ನ ‘ಅಮೃತ ಗ್ರಾಮ ಯೋಜನೆ’ಯಡಿಯಲ್ಲಿ ಆರು ಲಕ್ಷ ರು. ಅನುದಾನ ಬಳಸಿ ಶಾಲಾ ಆವರಣದ ಗೋಡೆಯನ್ನು ಎತ್ತರಿಸುವ ಕೆಲಸ ಮಾಡುತ್ತಿದೆ. ಮಕ್ಕಳಿಲ್ಲದ ಶಾಲೆ ಸಿಂಗರಿಸುತ್ತಿರುವ ಗ್ರಾಮ ಪಂಚಾಯ್ತಿ ನಡೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ ಎಂದು ಗ್ರಾಮಸ್ಥರು ಗೇಲಿ ಮಾಡುವಂತಾಗಿರುವುದಂತೂ ಅಕ್ಷರಶಃ ಸತ್ಯ.
ಬಳ್ಳಾರಿ: ಪರೀಕ್ಷೆ ಬರೆಯಲು ಕೇಂದ್ರಕ್ಕೆ ಬಂದು ವಾಪಸ್ ಹೋದ 39 ವಿದ್ಯಾರ್ಥಿಗಳು
ಸಸಾಲಟ್ಟಿ ಸರ್ಕಾರಿ ಶಾಲೆಗೆ ಕಳೆದ ಒಂಬತ್ತು ವರ್ಷಗಳಿಂದ ಎಸ್ಡಿಎಂಸಿ ಇಲ್ಲವೆಂಬ ಮಾಹಿತಿ ಇದೀಗ ತಿಳಿದಿದ್ದು, ಇದರ ಕುರಿತಾಗಿ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಶೀಘ್ರ ಎಸ್ಡಿಎಂಸಿ ರಚನೆ ಮಾಡಲಾಗುವುದ ಅಂತ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಬಸನ್ನವರ ಹೇಳಿದ್ದಾರೆ.
ಎಸ್ಡಿಎಂಸಿ ರಚನೆಯ ಕುರಿತಾಗಿ ಚರ್ಚೆ ನಡೆದಿಲ್ಲ. ಮುಂದಿನ ಸಭೆಯಲ್ಲಿ ಎಲ್ಲ ಸದಸ್ಯರಿಗೆ ತಿಳಿಸಿ ರಚನೆಯ ಕ್ರಮ ತೆಗೆದುಕೊಳ್ಳಲಾಗುವುದು ಅಂತ ನಿರ್ವಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವ ಶಿವಲಿಂಗ ತಿಳಿಸಿದ್ದಾರೆ.