ಶಾಲಾ ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್: ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

By Suvarna News  |  First Published Dec 4, 2022, 5:07 PM IST

*ಶಾಲಾ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಒದಗಿಸುವಂತೆ ಆಗ್ರಹಿಸಿ ಪಿಐಎಲ್
*ಸ್ಯಾನಿಟರಿ ಪ್ಯಾಡ್ ಇಲ್ಲದೇ ಶಾಲೆಯನ್ನು ತೊರೆಯುತ್ತಿರುವ ಬಡ ಹೆಣ್ಣು ಮಕ್ಕಳು
*ಕೇಂದ್ರ, ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್


ಶಾಲಾ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ (Supreme Court) ನೋಟಿಸ್ ಜಾರಿ ಮಾಡಿದೆ. ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ (Government Schools) 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವಂತೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಮನವಿಯನ್ನ ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ನೈರ್ಮಲ್ಯದ ಬಗ್ಗೆ ಪ್ರಮುಖ ಸಮಸ್ಯೆಯನ್ನು ಎತ್ತಿ ಹಿಡಿಯಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ವಕೀಲ ವಿರೀಂದರ್ ಕುಮಾರ್ ಶರ್ಮಾ ಎಂಬುವವರು ಸಲ್ಲಿಸಿದ್ದ ಅರ್ಜಿಯಲ್ಲಿ, ಬಡ ಕುಟುಂಬದ ಹಿನ್ನೆಲೆಯುಳ್ಳ 11 ರಿಂದ 18 ವರ್ಷದೊಳಗಿನ ಹದಿಹರೆಯದ ಹೆಣ್ಮಕ್ಕಳು ಹಲವು ಸಮಸ್ಯೆಗಳಿಂದಾಗಿ  ಶಿಕ್ಷಣ ಪಡೆಯಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದು ಸಂವಿಧಾನದ ಆರ್ಟಿಕಲ್ 21Aರ ಅಡಿ ಹಾಗೂ 2009ರ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದರು. 

Amazon Academy: ಮುಂದಿನ ವರ್ಷ ಆಗಸ್ಟ್‌ನಿಂದ ಅಮೆಜಾನ್ ಅಕಾಡೆಮಿ ಸ್ಥಗಿತ

Tap to resize

Latest Videos

18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ತಮ್ಮ ಪೋಷಕರಿಂದ, ಮುಟ್ಟಿನ ಮತ್ತು ಮುಟ್ಟಿನ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಯಾವುದೇ ಶಿಕ್ಷಣ ಸಿಕ್ಕಿರುವುದಿಲ್ಲ. ಈ ವಂಚಿತ ಆರ್ಥಿಕ ಸ್ಥಿತಿ ಮತ್ತು ಅನಕ್ಷರತೆಯು ಅನೈರ್ಮಲ್ಯ ಮತ್ತು ಅನಾರೋಗ್ಯಕರ ಅಭ್ಯಾಸಗಳ ಹರಡುವಿಕೆಗೆ ಕಾರಣವಾಗುತ್ತದೆ. ಇದು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಜೊತೆಗೆ ಹಠಮಾರಿತನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ಈ ಬಾಲಕಿಯರು, ಶಾಲೆಗಳಿಂದ ಹೊರಗುಳಿಯುತ್ತಾರೆ’  ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ. 

ಈ ಅರ್ಜಿಯ ಜೊತೆಗೆ ಮಧ್ಯಪ್ರದೇಶ ಮೂಲದ ವೈದ್ಯೆ ಜಯ ಠಾಕೂರ್ ಹೇಳಿರುವಂತೆ "ಪ್ರಪಂಚದಾದ್ಯಂತ, ಮೂರು ಹುಡುಗಿಯರಲ್ಲಿ ಒಬ್ಬರು ಅಸಮರ್ಪಕ ನೈರ್ಮಲ್ಯವನ್ನು ಎದುರಿಸುತ್ತಾರೆ. ಅನೇಕರು ತಮ್ಮ ಅವಧಿಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಿತಿಗಳನ್ನು ಎದುರಿಸುತ್ತಾರೆ’ ಎಂಬ ಹೇಳಿಕೆಯನ್ನ ಉಲ್ಲೇಖಿಸಿದ್ದಾರೆ.  ಋತುಚಕ್ರದ ಸಮಯದಲ್ಲಿ ಮಹಿಳೆಯರು ಮತ್ತು ಹುಡುಗಿಯರಿಗೆ ಸುರಕ್ಷಿತ ನೈರ್ಮಲ್ಯದ ಪ್ರವೇಶವು ಅತ್ಯಂತ ಮುಖ್ಯವಾಗಿದೆ ಅಂತ ಅರ್ಜಿಯಲ್ಲಿ ವಾದಿಸಲಾಗಿದೆ.  ಸರಿಯಾದ ಮುಟ್ಟಿನ ನೈರ್ಮಲ್ಯ ನಿರ್ವಹಣಾ ಸೌಲಭ್ಯಗಳ ಕೊರತೆಯಿಂದಾಗಿ ವಾರ್ಷಿಕವಾಗಿ ಸುಮಾರು 23 ಮಿಲಿಯನ್ ಹುಡುಗಿಯರು ಶಾಲೆಯನ್ನು ಬಿಡುತ್ತಾರೆ ಎಂಬ ವರದಿಯನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 

Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!

ಈ ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ಶಾಲೆಗಳಲ್ಲಿ ಓದುತ್ತಿರುವ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಅಗತ್ಯವಿದೆ. ಈ ಬಗ್ಗೆ ಮೊದಲಿನಿಂದಲೂ ಚರ್ಚೆಯಾಗುತ್ತಲೇ ಇದೆ. ಆದರೆ, ಅದಕ್ಕೊಂದು ನಿರ್ದಿಷ್ಟವಾದ ಕಾರ್ಯಕ್ರಮವನ್ನು ರೂಪಿಸುವ ಕೆಲಸಗಳನ್ನು ಯಾವ ಸರ್ಕಾರವೂ ಮಾಡುತ್ತಿಲ್ಲ. ಈಗು ಸುಪ್ರೀಂ ಕೋರ್ಟ್ 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ಕುರಿತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸುಪ್ರೀಂ ಕೋರ್ಟ್‌ ನೋಟಿಸ್ ಸರ್ಕಾರಗಳು ನಾನಾ ವಿಧದ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು. ಆದರೆ, ಈ ದಿಸೆಯಲ್ಲಿ ಯೋಚನಾಲಹರಿ ಶುರುವಾಗಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಹಲವು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. 

click me!