ರಾಜ್ಯಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಟ್ಯೂಷನ್ ಹಾಗೂ ಕೋಚಿಂಗ್ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್‌ಮೆಂಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ವರದಿ; ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.19): ಅಕ್ರಮ ಕೋಚಿಂಗ್ ಸೆಂಟರ್ ಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಸಂಘಟನೆ ಸರ್ಕಾರಕ್ಕೆ ಪತ್ರ ಬರೆದಿದೆ. ಖಾಸಗಿ ಶಾಲೆಗಳಿಗೆ ಒಂದು ಕಾನೂನು, ಟ್ಯೂಷನ್ ಸೆಂಟರ್ ಗಳಿಗೆ ಒಂದು ನೀತಿ ಅನ್ನೋ ಶಿಕ್ಷಣ ಇಲಾಖೆಯ ಮಲತಾಯಿ ಧೋರಣೆಗೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಿಎಂ ಗೆ ಪತ್ರ ಬರೆದು ಒತ್ತಾಯಿಸಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ರಾಜ್ಯದಲ್ಲಿ ಅಕ್ರಮ ಶಾಲೆಗಳಿಗಿಂತ ಟ್ಯೂಷನ್ ಸೆಂಟರ್ ಹಾವಳಿ ಹೆಚ್ಚಾಗಿದೆ. ಶಾಲಾ ಕಾಲೇಜಿನ ಶುಲ್ಕಕ್ಕಿಂತ ಹತ್ತು ಪಟ್ಟು ಟ್ಯೂಷನ್ ಕೇಂದ್ರಗಳು ಶುಲ್ಕವನ್ನ ವಸೂಲಿ ಮಾಡುತ್ತಿವೆ. ಆದ್ರೆ ಇದಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆಯಿಂದ ಸಾಧ್ಯವಾಗಿಲ್ಲ. ಟ್ಯೂಷನ್ ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ಸ್ಥಳಾವಕಾಶ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲ. ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ ಸುಮಾರು 10 ಸಾವಿರಕ್ಕೂ ಹೆಚ್ಚು ಟ್ಯೂಷನ್ ಕೇಂದ್ರಗಳಿದ್ದು, ಯಾವುದಕ್ಕೂ ಅನುಮತಿ ಇಲ್ಲ ಎಂದಿದ್ದಾರೆ. ಆದ್ರೆ ಒಂದು ಶಾಲೆ ನಡೆಸಬೇಕು ಅಂದ್ರೆ ಶಿಕ್ಷಣ ಇಲಾಖೆ ನೂರಾರು ಷರತ್ತುಗಳನ್ನು ಹಾಕಲಾಗುತ್ತೆ. ಆದ್ರೆ ಶಾಲೆಗಳಿಗೆ ಅನ್ವಯಿಸುವ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಮಾನದಂಡ ಕೋಚಿಂಗ್ ಸೆಂಟರ್ ಗಳಿಗೆ ಅನ್ವಯಿಸಲ್ವ ಎಂದು ಸರ್ಕಾರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಶ್ನೆ ಮಾಡಿದ್ದಾರೆ.
ಇತ್ತೀಚಿಗೆ ಶಾಲೆಗಳಿಗಿಂತ ಟ್ಯೂಷನ್ ಸೆಂಟರ್ ಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ಅಕ್ರಮವಾಗಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಕೋಚಿಂಗ್ ಸೆಂಟರ್ ಮೇಲೆ ಕ್ರಮ ಜರಗಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಇದುವರೆಗೂ ಸಾಧ್ಯವಾಗಿಲ್ಲ. ಯಾಕೆಂದರೆ ಸ್ಕೂಲ್ ಫೀಸ್ ಗಿಂತ ಟ್ಯೂಷನ್ ಕೇಂದ್ರಗಳಲ್ಲಿ 10 ಪಟ್ಟು ಶುಲ್ಕ ವನ್ನ ವಸೂಲಿ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಅನುಮತಿ ಪಡೆಯದ ಟ್ಯೂಷನ್ ಸೆಂಟರ್ ಗಳ ಮೆಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಸರ್ಕಾರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವ ನಾಗೇಶ್ ವಜಾ ಕೋರಿ ಮೋದಿಗೆ ಖಾಸಗಿ ಶಾಲೆಗಳ ಪತ್ರ: ರಾಜ್ಯದಲ್ಲಿ ತೀವ್ರ ವಿವಾದಕ್ಕೀಡಾದ ಪಠ್ಯಪುಸ್ತಕ ಪರಿಷ್ಕರಣಾ ವಿಚಾರ ಸೇರಿದಂತೆ ಶಿಕ್ಷಣ ಇಲಾಖೆಯ ಸಾಲು ಸಾಲು ಆಡಳಿತ ವೈಫಲ್ಯಗಳ ಹಿನ್ನೆಲೆಯಲ್ಲಿ ಬಿ.ಸಿ.ನಾಗೇಶ್ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸೂಚಿಸಬೇಕು ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ ಕರ್ನಾಟಕ ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳೆದ ವಾರ ಆಗ್ರಹಿಸಿತ್ತು.
ಈ ಸಂಬಂಧ ನೇರವಾಗಿ ಪ್ರಧಾನಿ ಅವರಿಗೆ ಪತ್ರ ಬರೆದಿರುವ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ‘ರಾಜ್ಯದ ಪ್ರತೀ ಮಗುವಿಗೂ ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಕರ್ನಾಟಕದಲ್ಲಿ ಇದರ ಕನಿಷ್ಠ ಜ್ಞಾನವೂ ಇಲ್ಲದ ಪಕ್ಕಾ ವ್ಯಾಪಾರಿ ಮನೋಭಾವದ ವ್ಯಕ್ತಿ ಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಇದು ಈಡೇರುತ್ತಿಲ್ಲ. ನಾಗೇಶ್ ಅವರು ಇಲಾಖೆಯಲ್ಲಿ ಕೈಗೊಂಡಿರುವ ಇಂತಹ ಹಲವು ತಪ್ಪು ನಿರ್ಧಾರಗಳು ಮಕ್ಕಳು, ಪೋಷಕರು, ಶಿಕ್ಷಕರು ಪರಿತಪಿಸುವಂತಾಗಿದೆ. ಹೀಗಾಗಿ ಅವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿಯರಿಗೆ ಸೂಚಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದರು.