ಡಿಕೆಶಿ ಶಾಲೆಗೆ ಹುಚ್ಚ ವೆಂಕಟ್‌ ಹೆಸರಲ್ಲಿ ಬಾಂಬ್‌ ‘ಮೇಲ್‌’!

By Kannadaprabha News  |  First Published Jul 19, 2022, 5:59 AM IST

ಡಿಕೆಶಿ ಒಡೆತನದ  ಆರ್‌ಆರ್‌ ನಗರದ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಸ್ಕೂಲ್‌ಗೆ  ವೆಂಕಟ್‌ ಹೆಸರಲ್ಲಿ ಬಾಂಬ್‌ ‘ಮೇಲ್‌’ ಬಂದಿರುವುದು ಎಂದು ತಿಳಿದುಬಂದಿದೆ. ಪೊಲೀಸರ ಪರಿಶೀಲನೆ ವೇಳೆ ಹುಸಿ ಬಾಂಬ್‌ ಎಂದು ಖಚಿತವಾಗಿದೆ.


ಬೆಂಗಳೂರು (ಜು.19): ರಾಜರಾಜೇಶ್ವರಿ ನಗರದ ನ್ಯಾಷನಲ್‌ ‘ಹಿಲ್‌ ವ್ಯೂ ಪಬ್ಲಿಕ್‌ ಶಾಲೆ’ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದ ಹಿನ್ನೆಲೆಯಲ್ಲಿ ಸೋಮವಾರ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ತಪಾಸಣೆ ವೇಳೆ ಇದು ಹುಸಿ ಬಾಂಬ್‌ ಬೆದರಿಕೆ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಪೋಷಕರು ನಿಟ್ಟುಸಿರು ಬಿಟ್ಟರು. ಸೋಮವಾರ ಬೆಳಗ್ಗೆ ಆಡಳಿತ ಮಂಡಳಿ ಶಾಲೆಯ ಇ-ಮೇಲ್‌ ಪರಿಶೀಲನೆ ವೇಳೆ ಶಾಲೆಯಲ್ಲಿ ಬಾಂಬ್‌ ಇರಿಸಿರುವ ಬಗ್ಗೆ ಬಂದಿರುವ ಸಂದೇಶ ನೋಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್‌ ನಿಷ್ಕ್ರೀಯ ದಳ, ಶ್ವಾನ ದಳ ಹಾಗೂ ಸ್ಥಳೀಯ ಪೊಲೀಸರು ತಕ್ಷಣ ಶಾಲೆಗೆ ಬಂದು ಶಾಲೆಯಲ್ಲಿ ಇದ್ದ ಸುಮಾರು ಒಂದೂವರೆ ಸಾವಿರ ಮಕ್ಕಳು ಹಾಗೂ ಶಿಕ್ಷಕರನ್ನು ಕಟ್ಟಡವೊಂದಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ನಂತರ ಶಾಲಾ ಕಟ್ಟಡ, ಪಾರ್ಕಿಂಗ್‌ ಸ್ಥಳ ಸೇರಿದಂತೆ ಶಾಲೆ ಸುತ್ತಮುತ್ತ ಪರಿಶೀಲನೆ ಮಾಡಿದಾಗ ಯಾವುದೇ ಬಾಂಬ್‌ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದು ಖಚಿತವಾಗಿದೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ತಿಳಿಸಿದ್ದಾರೆ. ಯಾವ ಸ್ಥಳ ಹಾಗೂ ಯಾವ ನೆಟ್‌ ವರ್ಕ್ನಿಂದ ಇ-ಮೇಲ್‌ ಬಂದಿದೆ ಎಂಬುದರ ಬಗ್ಗೆ ಪತ್ತೆ ಮಾಡಲು ಸೈಬರ್‌ ಕ್ರೈಂ ಪೊಲೀಸರ ನೆರವು ಕೇಳಿದ್ದಾರೆ.

ಶಾಲೆಯತ್ತ ಪೋಷಕರ ದೌಡು: ಶಾಲೆಗೆ ಬಾಂಬ್‌ ಇರಿಸಿರುವ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು, ನೂರಾರು ಸಂಖ್ಯೆಯಲ್ಲಿ ಶಾಲೆಯತ್ತ ದೌಡಾಯಿಸಿದ್ದರು. ಶಾಲಾ ಆಡಳಿತ ಮಂಡಳಿ ಪೋಷಕರು ವಾಟ್ಸಾಪ್‌ ಗ್ರೂಪ್‌ ಬಾಂಬ್‌ ಬೆದರಿಕೆ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಸುರಕ್ಷಿತವಾಗಿದ್ದು, ಮಧ್ಯಾಹ್ನ 12ರ ಬಳಿಕ ಕರೆದುಕೊಂಡು ಹೋಗಬಹುದು ಎಂದು ತಿಳಿಸಿದ್ದರು. ಹೀಗಾಗಿ ಭಾರೀ ಸಂಖ್ಯೆಯಲ್ಲಿ ಪೋಷಕರು ಶಾಲೆ ಬಳಿ ಜಮಾಯಿಸಿದ್ದರು. ಶಾಲೆಗೆ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ತೆರಳಿದರು.

Tap to resize

Latest Videos

ಹುಚ್ಚ ವೆಂಕಟ್‌ ವಿಚಾರಣೆ: ಹುಚ್ಚ ವೆಂಕಟ್‌ ಹೆಸರಿನ ಇ-ಮೇಲ್‌ ಐಡಿಯಿಂದ ಬಾಂಬ್‌ ಬೆದರಿಕೆ ಕರೆ ಬಂದಿರುವುದರಿಂದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು, ನಟ ಹುಚ್ಚ ವೆಂಕಟ್‌ ಅವರ ವಿಚಾರಣೆಗೆ ಮುಂದಾಗಿದ್ದಾರೆ. ಈ ನಡುವೆ ವಿಡಿಯೋ ಬಿಡುಗಡೆ ಮಾಡಿರುವ ನಟ ಹುಚ್ಚ ವೆಂಕಟ್‌, ‘ನನ್ನ ಹೆಸರನ್ನು ಯಾರೂ ದುರ್ಬಳಕೆ ಮಾಡಬಾರದು. ನನ್ನ ಹೆಸರಿನಲ್ಲಿ ಯಾವುದೇ ಇ-ಮೇಲ್‌ ಕಳಿಸಬಾರದು. ನನಗೂ ಈ ಇ-ಮೇಲ್‌ಗೂ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.

ಪೊಲೀಸರಿಂದ ತನಿಖೆ:

ಶಾಲೆಗೆ ಬಂದಿರುವ ಬಾಂಬ್‌ ಬೆದರಿಕೆ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲಿಂದ ಹಾಗೂ ಯಾರಿಂದ ಈ ಬೆದರಿಕೆ ಇ-ಮೇಲ್‌ ಬಂದಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

-ಆರಗ ಜ್ಞಾನೇಂದ್ರ. ಗೃಹ ಸಚಿವ

ಹುಸಿ ಬಾಂಬ್‌ ಹೆದರಿಕೆ:

ನಾನು ಅಧ್ಯಕ್ಷನಾಗಿರುವ ಆರ್‌.ಆರ್‌.ನಗರ ನ್ಯಾಷನಲ್‌ ಹಿಲ್‌ವ್ಯೂ ಶಿಕ್ಷಣ ಸಂಸ್ಥೆಗೆ ಬಾಂಬ್‌ ಬೆದರಿಕೆ ಬಂದಿದೆ. ಮೇಲ್ನೋಟಕ್ಕೆ ಹುಸಿ ಬಾಂಬ್‌ ಬೆದರಿಕೆಯಂತೆ ಕಾಣುತ್ತಿದ್ದರೂ ಅಪಾಯಕ್ಕೆ ಆಸ್ಪದೆ ನೀಡದೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.

-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ.

ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆ ಹಾಗೂ ಶಾಲೆಯ ಸುತ್ತಮುತ್ತ ತಪಾಸಣೆ ಮಾಡಿದ್ದು, ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. ಮಂಗಳವಾರದಿಂದ ಎಂದಿನಂತೆ ಶಾಲೆ ಶುರುವಾಗಲಿದೆ. ಈ ಬೆದರಿಕೆ ಇ-ಮೇಲ್‌ ಸಂಬಂಧ ತನಿಖೆ ನಡೆಸುತ್ತಿದೆ.

-ಲಕ್ಷ್ಮಣ್‌ ನಿಂಬರಗಿ, ಪಶ್ಚಿಮ ವಿಭಾಗದ ಡಿಸಿಪಿ

click me!