* ಸೆ.15ರೊಳಗೆ ಮೂರು ಬೇಡಿಕೆ ಈಡೇರಿಸಿದ್ದರೆ ಪ್ರತಿಭಟನೆ
* ಶಿಕ್ಷಕರ ಋುಣ ತೀರಿಸಬೇಕಾದ್ದು ಸರ್ಕಾರದ ಕರ್ತವ್ಯ
* ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹ
ಬೆಂಗಳೂರು(ಆ.25): 1995ರ ನಂತರ ಆರಂಭವಾದ ಖಾಸಗಿ ಅನುದಾನ ರಹಿತ ಶಾಲೆಗಳನ್ನು ತಕ್ಷಣವೇ ಅನುದಾನಕ್ಕೆ ಒಳಪಡಿಸಬೇಕು ಎಂಬುದು ಸೇರಿ ತಮ್ಮ ಮೂರು ಬೇಡಿಕೆಗಳನ್ನು ಸೆ.15ರೊಳಗೆ ಈಡೇರಿಸದೆ ಹೋದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ರಾಜ್ಯದ ವಿವಿಧ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲಾ ಕಾಲೇಜುಗಳ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳಿ ಸಂಘ (ರುಪ್ಸಾ) ಕರ್ನಾಟಕ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ ಹಾಗೂ ಇತರೆ ಶಾಲಾ ಸಂಘಟನೆಗಳು ಬೆಂಗಳೂರಿನ ಶಾಸಕರ ಭವನದಲ್ಲಿ ಮಂಗಳವಾರ ಸಭೆ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತೀವ್ರಗೊಳಿಸಿ ಗಡುವು ನೀಡುವುದು. ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವ ನಿರ್ಣಯ ಕೈಗೊಂಡಿವೆ.
ಕಲಬುರಗಿಯಲ್ಲಿ ಸಂವಾದ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿವರಿಸಿದ ಅಶ್ವತ್ಥ ನಾರಾಯಣ
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರುಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಅನೇಕ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳು ಸಾವಿರಾರು ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿವೆ. ಇಂದಲ್ಲ ನಾಳೆ ಸರ್ಕಾರದ ಅನುದಾನ ರೂಪದಲ್ಲಿ ಸಂಬಳ ಬರಲಿದೆ ಎಂದು ಸಾಕಷ್ಟು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಶಿಕ್ಷಕರ ಋುಣ ತೀರಿಸಬೇಕಾದ್ದು ಸರ್ಕಾರದ ಕರ್ತವ್ಯವಾಗಿದೆ. ಹಾಗಾಗಿ 1995ರ ನಂತರ ಆರಂಭವಾದ ಖಾಸಗಿ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಕೂಡಲೇ ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸಬೇಕು. ಈಗಾಗಲೇ ನಿವೃತ್ತರಾದ ಹಾಗೂ 2026ರ ನಂತರ ಮರಣ ಹೊಂದಿದ ನೌಕರರಿಗೆ ತಕ್ಷಣ ಮರಣ ಉಪಾದಾನ ಮತ್ತು ಪಿಂಚಣಿ ಜಾರಿಗೊಳಿಸಬೇಕು. ಸರ್ಕಾರಿ ಶಾಲಾ ಶಿಕ್ಷಕರಿಗೆ ಇರುವ ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆಯನ್ನು ಅನುದಾನಿತ ಹಾಗೂ ಅನುದಾನ ರಹಿತ ಶಾಲಾ, ಕಾಲೇಜು ಸಿಬ್ಬಂದಿಗೆ ವಿಸ್ತರಿಸಬೇಕು. ಸೆ.15ರೊಳಗೆ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಹೋದರೆ ನಂತರ ರಾಜ್ಯಾದ್ಯಂತ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಗಳು ವಿವಿಧ ಹಂತಗಳಲ್ಲಿ ಪ್ರತಿಬಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.