ನಾಳೆಯಿಂದ ವಸತಿ ಶಾಲೆ ಆರಂಭಕ್ಕೂ ಸರ್ಕಾರ ಅಸ್ತು!

By Kannadaprabha NewsFirst Published Aug 22, 2021, 11:18 AM IST
Highlights

* 9ರಿಂದ 12ನೇ ಕ್ಲಾಸ್‌ವರೆಗೆ ಭೌತಿಕ ತರಗತಿ ಆರಂಭ

* 5 ತಿಂಗಳ ಬಳಿಕ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು

* ನಾಳೆಯಿಂದ ವಸತಿ ಶಾಲೆ ಆರಂಭಕ್ಕೂ ಸರ್ಕಾರ ಅಸ್ತು

ಬೆಂಗಳೂರು(ಆ.22): ವಸತಿ ಶಾಲೆಗಳೂ ಸೇರಿದಂತೆ ರಾಜ್ಯದ ಎಲ್ಲಾ ಮಾದರಿಯ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸೋಮವಾರದಿಂದ (ಆ.23) 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಪುನಾರಂಭಗೊಳ್ಳಲಿವೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಡಿ ಬರುವ 6300ಕ್ಕೂ ಹೆಚ್ಚು ಸರ್ಕಾರಿ, 4100ಕ್ಕೂ ಹೆಚ್ಚು ಅನುದಾನಿತ, 7900ಕ್ಕೂ ಹೆಚ್ಚು ಅನುದಾನರಹಿತ ಖಾಸಗಿ ಪ್ರೌಢ ಶಾಲೆಗಳಲ್ಲಿ ಮೊದಲ ಹಂತದಲ್ಲಿ 9 ಮತ್ತು 10ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಪುನಾರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದೇ ರೀತಿ 1229 ಸರ್ಕಾರಿ, 797 ಅನುದಾನಿತ, 3147 ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 5400ಕ್ಕೂ ಹೆಚ್ಚು ಪಿಯು ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಶುರು ಮಾಡಲು ಕ್ರಮ ವಹಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜುಗಳಲ್ಲಿ ಸರ್ಕಾರದ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ (ಎಸ್‌ಒಪಿ) ಅನುಸಾರ ಕೊಠಡಿ, ಆವರಣ, ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸಿಂಗ್‌ ಮಾಡಲಾಗಿದೆ. ಬಹುತೇಕ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲೂ ಎಸ್‌ಒಪಿ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಭೌತಿಕ ತರಗತಿ ಆರಂಭಿಸಲು ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ತಿಳಿಸಿದರು.

ವಸತಿ ಶಾಲೆಗಳು ಆರಂಭ:

ಶಿಕ್ಷಣ ಇಲಾಖೆ ಮಾತ್ರವಲ್ಲದೆ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಸರ್ಕಾರಿ ವಸತಿ ಶಾಲೆಗಳು, ಖಾಸಗಿ ವಸತಿ ಶಾಲೆಗಳು ಕೂಡ ಸೋಮವಾರದಿಂದ ಆರಂಭಗೊಳ್ಳಲಿವೆ. ಈ ಸಂಬಂಧ ಸ್ವತಃ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರೇ ಖಚಿತ ಮಾಹಿತಿ ನೀಡಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು ನಮ್ಮ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ 385 ಮೊರಾರ್ಜಿ ದೇಸಾಯಿ ವಸತಿ ಶಾಲೆ, 157 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, 126 ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ ಸೇರಿದಂತೆ ಬೇರೆ ಬೇರೆ ಮಾದರಿಯ ಎಲ್ಲಾ 826 ವಸತಿ ಶಾಲೆಗಳೂ ಸೋಮವಾರದಿಂದ ಆರಂಭಗೊಳ್ಳಲಿವೆ. ಇದಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲಾ ವಸತಿ ಶಾಲೆಗಳಲ್ಲೂ ಹಾಸ್ಟೆಲ್‌ಗಳನ್ನು ಈಗಾಗಲೇ ಆರಂಭಿಸಿದ್ದೇವೆ. ಸರ್ಕಾರ ಸೂಚಿಸಿರುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ಹಾಸ್ಟೆಲ್‌ ಮತ್ತು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಸತಿ ಶಾಲೆಗೆ ಬರುವ ಮಕ್ಕಳಿಗೂ ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ. ಗಡಿ ಭಾಗಗಳಿಂದ ಬರುವ ಮಕ್ಕಳು ನೆಗೆಟಿವ್‌ ವರದಿ ತರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಪಾಲಿಸಿ ಖಾಸಗಿ ವಸತಿ ಶಾಲೆಗಳ ಆರಂಭಕ್ಕೂ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಕೋವಿಡ್‌ ಮೊದಲ ಅಲೆ ಕ್ಷೀಣಿಸಿದ ಬಳಿಕ ಕಳೆದ ಜನವರಿಯಿಂದ 8ರಿಂದ 12ನೇ ತರಗತಿ ಮಕ್ಕಳಿಗೆ ಸರ್ಕಾರ ಭೌತಿಕ ತರಗತಿ ಆರಂಭಿಸಿತ್ತು. ಬಳಿಕ ಎರಡನೇ ಅಲೆ ಶುರುವಾಗಿದ್ದರಿಂದ ಮಾ.23ರಿಂದ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಿತ್ತು. ಈಗ ಐದು ತಿಂಗಳ ಬಳಿಕ ಶಾಲೆಗಳ ಪುನಾರಂಭಕ್ಕೆ ಅವಕಾಶ ದೊರೆತಿದೆ.

ಆತಂಕವಿಲ್ಲದೆ ಶಾಲೆಗೆ ಹೋಗಿ

ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಹೋಗಿಲ್ಲ. ನಿಧಾನವಾಗಿಯಾದರೂ ಸರಿ, ಮಕ್ಕಳು ಶಾಲೆಗೆ ಬರಬೇಕು ಎಂಬ ಉದ್ದೇಶದಿಂದ ಶಾಲಾ-ಕಾಲೇಜನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಮಕ್ಕಳು ಯಾವುದೇ ಆತಂಕವಿಲ್ಲದೆ ಶಾಲೆಗೆ ಹಾಜರಾಗಬೇಕು.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!