‘ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕಕ್ಕೆ ಬಡ್ಡಿ ಸೇರಿಸಿ ವಾಪಸ್‌ ಕೊಡಿ’ : ಹೈಕೋರ್ಟ್

By Kannadaprabha NewsFirst Published Nov 16, 2022, 10:02 AM IST
Highlights
  • ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕಕ್ಕೆ ಬಡ್ಡಿ ಸೇರಿಸಿ ವಾಪಸ್‌ ಕೊಡಿ’
  • ಶೇ.6 ಬಡ್ಡಿ ನೀಡಿರಾಜರಾಜೇಶ್ವರಿ ನಗರ ವೈದ್ಯಕೀಯ ಕಾಲೇಜಿಗೆ ಹೈಕೋರ್ಟ್ ಆದೇಶ
  • ಸರ್ಕಾರಕ್ಕೆ ನಿರ್ದೇಶನ
  • ಕಾಲೇಜುಗಳಿಗೆ ಹೆಚ್ಚು ಶುಲ್ಕ ಸಂಗ್ರಹ ಬೇಡ
  •  ವಿದ್ಯಾರ್ಥಿಗಳ ಹಿತ ಕಾಯುವ ಆಸಕ್ತಿ ಇದ್ದರೆ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಿ

ಬೆಂಗಳೂರು (ನ.16) : ಕಳೆದ 2017-2021 ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಪಡೆದಿರುವ ಹೆಚ್ಚುವರಿ ಶುಲ್ಕವನ್ನು ಶೇ.6ರಷ್ಟುಬಡ್ಡಿ ದರದಲ್ಲಿ ವಾಪಸ್‌ ನೀಡುವಂತೆ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಆದೇಶಿಸಿರುವ ಹೈಕೋರ್ಚ್‌, ಖಾಸಗಿ ಕಾಲೇಜುಗಳಿಗೆ ಅಧಿಕ ಶುಲ್ಕ ಸಂಗ್ರಹಿಸದಂತೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಜಿ.ಹರೀಶ್‌ ಸೇರಿದಂತೆ 29 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಮೈಸೂರು ರಸ್ತೆ ಸ್ಯಾಟಲೈಟ್‌ ಬಳಿ ಸ್ಕೈವಾಕ್‌ ಅಳವಡಿಸಿ: ಹೈಕೋರ್ಟ್‌

ಖಾಸಗಿ ವೈದ್ಯಕೀಯ ಕಾಲೇಜುಗಳು ಉನ್ನತ ಶಿಕ್ಷಣದಲ್ಲಿ ಶಾಸನಬದ್ಧ ಅಧಿಕಾರಿಗಳು ನಿಗದಿಪಡಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯಬೇಕು. ಆದರೆ, ಖಾಸಗಿ ಕಾಲೇಜುಗಳು ತನ್ನದೇ ಆದ ಶುಲ್ಕ ನಿಗದಿ ಪಡಿಸಿ ಸಂಗ್ರಹಿಸುತ್ತಿರುವುದು ಸಾಮಾನ್ಯವಾಗಿದೆ. ಆದ್ದರಿಂದ ನಿಜಕ್ಕೂ ವಿದ್ಯಾರ್ಥಿಗಳ ಹಿತಕಾಯುವ ಉದ್ದೇಶ ಸರ್ಕಾರಕ್ಕೆ ಇದ್ದರೆ, ಅಧಿಕ ಶುಲ್ಕ ಸಂಗ್ರಹಿಸದಂತೆ ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಕೂಡಲೇ ನಿರ್ದೇಶಿಸಬೇಕು ಎಂದು ಸೂಚಿಸಿದೆ.

ವಿದ್ಯಾರ್ಥಿಗಳಿಂದಲೇ ಹೆಚ್ಚು ಶುಲ್ಕ: ಕಾಲೇಜು

ಅರ್ಜಿದಾರ ವಿದ್ಯಾರ್ಥಿಗಳು 2017-18ರಲ್ಲಿ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಹೆಚ್ಚುವರಿ ಶುಲ್ಕ ಪಡೆದಿರುವುದನ್ನು ಪ್ರಶ್ನಿಸಿ ಹೈಕೋರ್ಚ್‌ ಮೆಟ್ಟಿಲೇರಿದ್ದ ಅವರು, ಸರ್ಕಾರವೇ ನೇಮಿಸಿರುವ ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ (ಎಒಸಿ) ನಿಗದಿಪಡಿಸಿದಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯಲಾಗಿದೆ. ಹಾಗಾಗಿ 2017ನೇ ಸಾಲಿನಿಂದ ಪಡೆದಿರುವ ಅಧಿಕ ಶುಲ್ಕವನ್ನು ಮರುಪಾವತಿಸಲು ಕಾಲೇಜಿಗೆ ನಿದೇಶಿಸುವಂತೆ ಕೋರಿದ್ದರು. ಆದರೆ ಕಾಲೇಜಿನ ಆಡಳಿತ ಮಂಡಳಿ ಪರ ವಕೀಲರು, ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಹೆಚ್ಚುವರಿ ಶುಲ್ಕವನ್ನು ಪಾವತಿಸಿದ್ದಾರೆ ಎಂದು ಸಮಜಾಯಿಷಿ ನೀಡಿದ್ದರು.

ಅದನ್ನು ಒಪ್ಪದ ನ್ಯಾಯಪೀಠ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ಮಾಡುವ ಉದ್ದೇಶವಿಲ್ಲ ಎಂದಾದರೆ ಶುಲ್ಕ ವಸೂಲಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಧಿಕ ಶುಲ್ಕ ಸ್ವೀಕರಿಸಬಾರದು. ವಿದ್ಯಾರ್ಥಿಗಳ ಪರವಾಗಿದ್ದರೆ ಅಧಿಕ ಶುಲ್ಕ ಪಾವತಿಸದಂತೆ ಸಂಸ್ಥೆಯೇ ತಿಳಿಸಬಹುದಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

Namma Metro: ಮೆಟ್ರೋಗಾಗಿ ಕತ್ತರಿಸಿದ ಮರಕ್ಕೆ ಪ್ರತಿಯಾಗಿ ನೆಟ್ಟಸಸಿಗಳು ಎಷ್ಟು?

‘ಶಿಕ್ಷಣ ನೀಡುವುದು ಮಾರುಕಟ್ಟೆಆಗಿದೆ’

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದನ್ನು ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳಲಾಗಿದೆ. ಹಣ ಮಾಡುವುದಕ್ಕಾಗಿ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಅವುಗಳನ್ನು ಹಾಗೆಯೇ ಬಿಡುವಂತಿಲ್ಲ. ಕೂಡಲೇ ಕಡಿವಾಣ ಹಾಕಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಗುರುವಿನಂತೆ ವಿದ್ಯಾರ್ಥಿಗಳನ್ನು ಪೋಷಿಸಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ನ್ಯಾಯಪೀಠ ಕಠಿಣವಾಗಿ ನುಡಿದಿದೆ.

click me!