Mandya: ಕೇಂದ್ರೀಯ ಶಾಲೆಗೆ ಕಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ

By Govindaraj SFirst Published Sep 15, 2022, 12:11 PM IST
Highlights

ಕೇಂದ್ರೀಯ ವಿದ್ಯಾಲಯಕ್ಕೆ ಕಾಯಂ ಶಿಕ್ಷಕರನ್ನು ನೇಮಕ ಮಾಡುವುದಕ್ಕೆ ಶೀಘ್ರ ಕ್ರಮ ವಹಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಮಂಡ್ಯ (ಸೆ.15): ಕೇಂದ್ರೀಯ ವಿದ್ಯಾಲಯಕ್ಕೆ ಕಾಯಂ ಶಿಕ್ಷಕರನ್ನು ನೇಮಕ ಮಾಡುವುದಕ್ಕೆ ಶೀಘ್ರ ಕ್ರಮ ವಹಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಂಡ್ಯ ಕೇಂದ್ರೀಯ ವಿದ್ಯಾಲಯವೊಂದರಲ್ಲೇ ಮಾತ್ರವಲ್ಲ. ರಾಜ್ಯದ ಎಲ್ಲ ಕೇಂದ್ರೀಯ ವಿದ್ಯಾಲಯಗಳಲ್ಲೂ ಕಾಯಂ ಶಿಕ್ಷಕರ ಕೊರತೆ ಇದೆ. ಸದ್ಯದಲ್ಲೇ ಕೇಂದ್ರ ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಕನಿಷ್ಠ 4 ರಿಂದ 5 ಕಾಯಂ ಶಿಕ್ಷಕರನ್ನು ತುರ್ತಾಗಿ ವರ್ಗಾಯಿಸುವಂತೆ ಮನವಿ ಮಾಡುತ್ತೇನೆ ಎಂದರು. ಕೇಂದ್ರೀಯ ವಿದ್ಯಾಲಯಕ್ಕೆ ಉತ್ತರ ಭಾರತದಿಂದ ಹೆಚ್ಚಿನ ಶಿಕ್ಷಕರು ನೇಮಕಗೊಂಡಿದ್ದಾರೆ. 

ಕೊರೋನಾ ಹಿನ್ನೆಲೆಯಲ್ಲಿ ಆಯಾ ರಾಜ್ಯಕ್ಕೆ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಬೇರೆಯವರನ್ನು ಇಲ್ಲಿಗೆ ವರ್ಗಾವಣೆ ಮಾಡಿದರೂ ಮೂಲ ಸೌಲಭ್ಯಗಳಿಲ್ಲದ ಕಾರಣ ವರ್ಗಾವಣೆಗೊಂಡ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ನೂತನ ಕಟ್ಟಡ ನಿರ್ಮಾಣವಾದರೆ ಸುಸಜ್ಜಿತ ಕ್ವಾಟ್ರಸ್‌ ನಿರ್ಮಾಣವಾಗುತ್ತದೆ. ಆಗ ಕಾಯಂ ಶಿಕ್ಷಕರ ಕೊರತೆಯಾಗುವುದಿಲ್ಲ ಎಂದರು. ಈಗಾಗಲೇ ಕೇಂದ್ರೀಯ ವಿದ್ಯಾಲಯ ನೂತನ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಭವ್ಯ ಕಟ್ಟಡ ನಿರ್ಮಾಣವಾಗಲಿದೆ. ಅದರ ಬಗ್ಗೆ ಯಾರಿಗೂ ಆತಂಕ ಬೇಡ ಎಂದರು. ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳ ಅರಿವಿದೆ. ನೂತನ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅದನ್ನು ಮಾಡೇ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ: ಸುಮಲತಾ ವಿರುದ್ಧ ಅನ್ನದಾನಿ ಕಿಡಿ

ಮೈಷುಗರ್‌ ಪ್ರೌಢಶಾಲೆಗೆ ಸ್ಥಳಾಂತರ: ಜಿಲ್ಲೆಯಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ 25 ಕೋಟಿ ರು. ಅನುದಾನ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ಮೈಷುಗರ್‌ ಪ್ರೌಢಶಾಲೆಗೆ ಸ್ಥಳಾಂತರಿಸುವ ಸಂಬಂಧ ಹಾಗೂ ಶಾಲೆಯ ಪ್ರಗತಿ ಕುರಿತು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಹಾಗೂ ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ ಅವರಿಂದ ಮಾಹಿತಿ ಪಡೆದರು. ವಿಧಾನ ಪರಿಷತ್‌ ಸದಸ್ಯ ದಿನೇಶ್‌ಗೂಳಿಗೌಡ ಅವರಿಂದ 3 ಲಕ್ಷ ರು., ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರಿಂದ 2.50 ಲಕ್ಷ ರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಂದ 5 ಲಕ್ಷ ಸೇರಿ ಒಟ್ಟು 10 ಲಕ್ಷ ರು. ಅನುದಾನ ಬಂದಿದೆ. ಮೈಷುಗರ್‌ ಪ್ರೌಢಶಾಲೆ ದುರಸ್ತಿ ಕಾರ್ಯಕ್ಕೆ 5 ಲಕ್ಷ ರು. ಕೊರತೆ ಇರುವುದಾಗಿ ಎಂಜಿನಿಯರ್‌ ತಿಳಿಸಿದ್ದಾರೆ ಎಂದರು.

ಸಂಸದರ ನಿಧಿಯಿಂದ 5 ಲಕ್ಷ ರು: ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ಮೈಷುಗರ್‌ ಪ್ರೌಢಶಾಲೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದ ನಂತರ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಪ್ರೌಢಶಾಲೆಯಲ್ಲಿ ಶೌಚಾಲಯ ಹಾಗೂ ಶಾಲೆಯ ಕೊಠಡಿಗಳಲ್ಲಿ ಮೂಲ ಸೌಕರ್ಯ ಮತ್ತು ಪೀಠೋಪಕರಣಗಳ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು. ಉಳಿಗೆ 5 ಲಕ್ಷ ರು.ಅನುದಾನವನ್ನು ಎಂಪಿ ನಿಧಿ ಬಳಸಿಕೊಂಡು ತ್ವರಿತವಾಗಿ ಕಾಮಗಾರಿ ಪೂರೈಸಲು ಸೂಚಿಸುವಂತೆ ಜಿಲ್ಲಾಧಿಕಾರಿ ಅಶ್ವತಿ ಅವರಿಗೆ ಸೂಚಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ಕೇಂದ್ರೀಯ ವಿದ್ಯಾಲಯದಲ್ಲಿ ಪಿಯಸಿವರೆಗೆ ಮಕ್ಕಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಆದರೆ, ಇಲ್ಲಿ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಶಿಕ್ಷಣ ಕಲಿಸಿಕೊಡಲಾಗುತ್ತಿದೆ ಎಂದರು. ಇದಕ್ಕೆ ಪ್ರಾಂಶುಪಾಲ ಸುಧೀರ್‌ ಶರ್ಮಾ ಪ್ರತಿಕ್ರಿಯಿಸಿ ಕೊಠಡಿಗಳ ಸಮಸ್ಯೆಯಿಂದಾಗಿ ಪಿಯು ತರಗತಿಗಳನ್ನು ಮಾಡಲು ಸಾಧ್ಯವಾಗಿಲ್ಲ. ನೂತನ ಕಟ್ಟಡ ನಿರ್ಮಾಣವಾದ ಮೇಲೆ ಪಿಯು ತರಗತಿಗಳನ್ನು ಪ್ರಾರಂಭ ಮಾಡಲಾಗುವುದು ಎಂದರು.

ಕನ್ನಡ ಬೋಧನೆಗೆ ಗುತ್ತಿಗೆ ಶಿಕ್ಷಕರ ನೇಮಕ: ಸ್ಥಳೀಯ ಪ್ರಾದೇಶಿಕ ಭಾಷೆಯನ್ನು ಒಂದು ವಿಷಯವಾಗಿ ಮಾಡಲು ಅವಕಾಶವಿದೆ. ಆದರೂ ಮಂಡ್ಯ ಕೇಂದ್ರೀಯ ವಿದ್ಯಾಲಯ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಂಡ್ಯದಂತಹ ಜಿಲ್ಲೆಯಲ್ಲಿ ಕನ್ನಡ ಭಾಷೆ ಕಲಿಸುತ್ತಿಲ್ಲ ಎಂದರೆ ಏನರ್ಥ ಎಂದು ಪೋಷಕರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರಾಂಶುಪಾಲರು ಪ್ರತಿಕ್ರಿಯಿಸಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧಾರ ಮೇಲೆ ಕನ್ನಡ ಶಿಕ್ಷಕರನ್ನು ತೆಗೆದುಕೊಳ್ಳಲಾಗಿದೆ. ಇಂದಿನಿಂದಲೇ ಮಕ್ಕಳಿಗೆ ಕನ್ನಡ ಪಾಠ-ಪ್ರವಚನಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ: ಜೆಡಿಎಸ್‌ ಶಾಸಕರಿಗೆ ಸಂಸದೆ ಸುಮಲತಾ ಬಹಿರಂಗ ಆಹ್ವಾನ

ಗುತ್ತಿಗೆ ಆಧಾರದಲ್ಲಿ 20 ಜನ ಶಿಕ್ಷಕರು: ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ 23 ಜನ ಶಿಕ್ಷಕರ ಅವಶ್ಯಕತೆ ಇದ್ದು, ಈ ಪೈಕಿ ಕೇವಲ 3 ಜನ ಶಿಕ್ಷಕರು ಶಾಶ್ವತ ಹುದ್ದೆಯವರಾಗಿದ್ದು ಉಳಿದ 20 ಜನ ಶಿಕ್ಷಕರು ಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮನಗಂಡು ಕೂಡಲೇ ಈ ಕುರಿತು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರದ ಮೂಲಕ ಗಮನಕ್ಕೆ ತರುತ್ತೇನೆ ಹಾಗೂ ಈ ಬಾರಿಯ ಸಂಸತ್‌ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು. ಕೇಂದ್ರೀಯ ವಿದ್ಯಾಲಯ ಪೋಷಕರ ಸಂಘದ ಪದಾಧಿಕಾರಿಗಳಾದ ಬಿ.ಜೆ.ಸೋಮಶೇಖರ್‌, ರೂಪಲಕ್ಷ್ಮೇ ನಂದಿನಿ, ಭಾಷ್ಕಾರ್‌, ಮದನ್‌ ಗೌಡ ಹಾಗೂ ಶ್ವೇತಾ ಸೇರಿದಂತೆ ಮತ್ತಿತರರಿದ್ದರು.

click me!