
ಬೆಂಗಳೂರು/ಚಿಕ್ಕೋಡಿ: ಕೇಂದ್ರ ಲೋಕಸೇವಾ ಆಯೋಗ (UPSC) ಪ್ರಕಟಿಸಿದ ನಾಗರಿಕ ಸೇವೆಗಳ ಪರೀಕ್ಷೆ (CSE) ಫಲಿತಾಂಶದಲ್ಲಿ ಉತ್ತರ ಕರ್ನಾಟಕದ ಯುವಕ ಕಿರಣ್ ಕಮತೆ ರಾಜ್ಯದ ಗಮನ ಸೆಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ನಿವಾಸಿಯಾದ ಕಿರಣ್ ಕಮತೆ ದೇಶದ ಮಟ್ಟದಲ್ಲಿ 53ನೇ ರ್ಯಾಂಕ್ ಪಡೆದು ರಾಜ್ಯದ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಯುವಕನಾದ ಕಿರಣ್ ಅವರ ಈ ಸಾಧನೆ ಉತ್ತರ ಕರ್ನಾಟಕದ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ.
ಸದ್ಯ ಬೆಂಗಳೂರಿನಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಕಮತೆ, ಸರ್ಕಾರಿ ಸೇವೆಯಲ್ಲಿದ್ದರೂ ಸಹ UPSC ಪರೀಕ್ಷೆಗೆ ನಿರಂತರವಾಗಿ ಸಿದ್ಧತೆ ನಡೆಸಿ ಈ ಸಾಧನೆ ಮಾಡಿದ್ದಾರೆ. ಹಲವು ವರ್ಷಗಳ ಶ್ರಮ, ಪರಿಶ್ರಮ ಮತ್ತು ದೃಢ ಸಂಕಲ್ಪದ ಫಲವಾಗಿ ಅವರು ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.
ಫಲಿತಾಂಶ ಪ್ರಕಟವಾದ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮಾತನಾಡಿದ ಕಿರಣ್ ಕಮತೆ, ತಮ್ಮ ಸಾಧನೆಗೆ ತಂದೆ–ತಾಯಿ ನೀಡಿದ ಮಾರ್ಗದರ್ಶನವೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. “ನನ್ನ ಈ ಸಾಧನೆಯ ಹಿಂದೆ ನನ್ನ ತಂದೆ–ತಾಯಿಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ದೊಡ್ಡ ಪಾತ್ರ ವಹಿಸಿದೆ. ಅವರ ಆಶೀರ್ವಾದವೇ ನನಗೆ ಸದಾ ಶಕ್ತಿ ನೀಡಿದೆ” ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ತಮ್ಮ ಪತ್ನಿ ಲೋಚನಾ ನೀಡಿದ ಬೆಂಬಲವೂ ಯಶಸ್ಸಿಗೆ ಪ್ರಮುಖ ಕಾರಣ ಎಂದು ಕಿರಣ್ ಹೇಳಿದರು. ನನ್ನ ಪತ್ನಿ ಲೋಚನಾ ಸದಾ ಬೆನ್ನೆಲುಬಾಗಿ ನಿಂತು ನನ್ನನ್ನು ಪ್ರೋತ್ಸಾಹಿಸಿದರು. ಕೆಲಸ ಮತ್ತು ಓದು ಎರಡನ್ನೂ ಸಮತೋಲನದಲ್ಲಿ ನಡೆಸಲು ಅವರು ತುಂಬಾ ಸಹಕಾರ ನೀಡಿದರು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿರಣ್ ಕಮತೆ ಅವರ ಪತ್ನಿ ಲೋಚನಾ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. “ನನ್ನ ಪತಿ ತುಂಬಾ ಪರಿಶ್ರಮಿ. ಅವರು ದಿನರಾತ್ರಿ ಶ್ರಮಪಟ್ಟು UPSC ಪರೀಕ್ಷೆಗೆ ತಯಾರಿ ನಡೆಸಿದರು. ತಮ್ಮ ಕೆಲಸದ ಜೊತೆಗೆ ಓದಿಗೂ ಮತ್ತು ಕುಟುಂಬಕ್ಕೂ ಸಮಾನವಾಗಿ ಸಮಯ ನೀಡುತ್ತಿದ್ದರು. ಇದು ಅವರಿಗೆ ಕೊನೆಯ ಅವಕಾಶವಾಗಿದ್ದರಿಂದ ಅವರು ಇನ್ನಷ್ಟು ಶ್ರಮಪಟ್ಟರು. ಈಗ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನಮಗೆ ಅಪಾರ ಸಂತೋಷ ತಂದಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಿಂದ ಬಂದ ಯುವಕನಾಗಿ UPSCನಲ್ಲಿ ಸಾಧನೆ ಮಾಡಿದ ಕಿರಣ್, ಉತ್ತರ ಕರ್ನಾಟಕದ ಯುವಕರಿಗೂ ದೊಡ್ಡ ಸಂದೇಶ ನೀಡಿದ್ದಾರೆ. “ಉತ್ತರ ಕರ್ನಾಟಕದ ಯುವಕರಲ್ಲಿ ಅಪಾರ ಪ್ರತಿಭೆ ಇದೆ. ಯಾರೇ ಆಗಿರಲಿ ಪರಿಶ್ರಮ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಗುರಿ ಸ್ಪಷ್ಟವಾಗಿದ್ದರೆ ಯಾವುದೇ ಅಡೆತಡೆಗಳನ್ನು ಮೀರಿ ಸಾಧನೆ ಮಾಡಬಹುದು” ಎಂದು ಅಭಿಪ್ರಾಯಪಟ್ಟರು.
ಕಿರಣ್ ಕಮತೆ ಅವರ ಸಾಧನೆಯ ಸುದ್ದಿ ತಿಳಿದ ತಕ್ಷಣವೇ ಸ್ವಗ್ರಾಮ ಹತ್ತರವಾಟದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರು, ಸ್ನೇಹಿತರು ಹಾಗೂ ಸಂಬಂಧಿಕರು ಕಿರಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಅವರ ಸಾಧನೆಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
ಒಟ್ಟಾರೆ, ಸರ್ಕಾರಿ ಸೇವೆಯಲ್ಲಿದ್ದರೂ ಸಹ ನಿರಂತರ ಪರಿಶ್ರಮ ಮತ್ತು ಸಂಕಲ್ಪದಿಂದ UPSC ಪರೀಕ್ಷೆಯಲ್ಲಿ ದೇಶದ ಮಟ್ಟದಲ್ಲಿ 53ನೇ ರ್ಯಾಂಕ್ ಗಳಿಸಿರುವ ಕಿರಣ್ ಕಮತೆ ಅವರ ಸಾಧನೆ ಗ್ರಾಮೀಣ ಯುವಕರಿಗೆ ದೊಡ್ಡ ಪ್ರೇರಣೆಯಾಗಿ ಪರಿಣಮಿಸಿದೆ.