
ಬೆಂಗಳೂರು: ಪ್ರತಿಷ್ಠಿತ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶವನ್ನು ಲೋಕಸೇವಾ ಆಯೋಗ (UPSC) ಪ್ರಕಟಿಸಿದ್ದು, ದೇಶದಾದ್ಯಂತ ಒಟ್ಟು 958 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಾರಿ 20ಕ್ಕೂ ಹೆಚ್ಚು ಕನ್ನಡಿಗರು ಯಶಸ್ಸು ಸಾಧಿಸಿರುವುದು ಗಮನಾರ್ಹವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಒಟ್ಟು 22 ಮಂದಿ ಕನ್ನಡಿಗರು ಈ ವರ್ಷದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯದ ಗೌರವ ಹೆಚ್ಚಿಸಿದ್ದಾರೆ. ಜೊತೆಗೆ ಇಬ್ಬರು ಕನ್ನಡಿಗರು 100ರ ಒಳಗೆ ರ್ಯಾಂಕ್ ಪಡೆದಿದ್ದಾರೆ.
ಈ ಪೈಕಿ ಬೆಳಗಾವಿ ಜಿಲ್ಲೆಯ ಯುವಕ ಕಿರಣ್ ಕಮಾಟೆ 53ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ. ಮತ್ತೊಬ್ಬ ಅಭ್ಯರ್ಥಿ ಸಂದೀಪ್ ಬಾದಾದ್ 82ನೇ ರ್ಯಾಂಕ್ ಪಡೆದು ಎರಡನೇ ಸ್ಥಾನ ಪಡೆದು ಯಶಸ್ಸು ಸಾಧಿಸಿದ್ದಾರೆ. ಇವರೊಂದಿಗೆ ಇನ್ನೂ ಹಲವು ಅಭ್ಯರ್ಥಿಗಳು UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿವಿಧ ಕೇಂದ್ರ ಸೇವೆಗಳ ಹುದ್ದೆಗಳಿಗೆ ಆಯ್ಕೆಯಾಗುವ ಅವಕಾಶ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಯುವಕಕಿರಣ್ ಕಾಮಟೆ ಅವರ ಸಾಧನೆ ವಿಶೇಷವಾಗಿ ಗಮನ ಸೆಳೆದಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಕಿರಣ್ ಹಲವು ವರ್ಷಗಳಿಂದ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಪ್ರಸ್ತುತ ಅವರು ಪಿಡಬ್ಲ್ಯೂಡಿ (Public Works Department) ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆಯಲ್ಲಿದ್ದುಕೊಂಡೆ ಅವರು UPSC ಪರೀಕ್ಷೆಗೆ ಶ್ರಮಪಟ್ಟು ಸಿದ್ಧತೆ ನಡೆಸಿದ್ದು, ಇದೀಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮಹತ್ವದ ಸಾಧನೆ ಮಾಡಿದ್ದಾರೆ.
ಕಿರಣ್ ಕಾಮಟೆ ಅವರ ಯಶಸ್ಸಿನ ಸುದ್ದಿ ತಿಳಿದ ತಕ್ಷಣವೇ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಕುಟುಂಬದವರು, ಸ್ನೇಹಿತರು ಹಾಗೂ ಗ್ರಾಮಸ್ಥರು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಅವರ ಸಾಧನೆಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಾರೆ, ಈ ವರ್ಷದ UPSC ಫಲಿತಾಂಶದಲ್ಲಿ 20ಕ್ಕೂ ಹೆಚ್ಚು ಕನ್ನಡಿಗರು ಸಾಧನೆ ಮಾಡಿರುವುದು ರಾಜ್ಯದ ಯುವಜನತೆಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅವರು ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ವ್ಯಕ್ತವಾಗುತ್ತಿದೆ.