ಈ ವರ್ಷ ಪಿಯುಸಿ ಪ್ರಶ್ನೆಪತ್ರಿಕೆ ಹೊಸ ಮಾದರಿ..!

By Kannadaprabha News  |  First Published Jan 12, 2023, 5:00 AM IST

ಫಲಿತಾಂಶ ಉತ್ತಮಗೊಳಿಸಲು ಮಹತ್ವದ ಬದಲಾವಣೆ, ಸರಳ ಪ್ರಶ್ನೆ ಹೆಚ್ಚಳ, ಕಠಿಣ ಪ್ರಶ್ನೆಗಳ ಪ್ರಮಾಣ ಕಡಿತ, ಹೊಸ ಪರೀಕ್ಷಾ ಮಂಡಳಿಯಿಂದ ಮೊದಲ ವರ್ಷವೇ ಸುಧಾರಣೆ, ಪ್ರಥಮ, ದ್ವಿತೀಯ ಪಿಯುಸಿ ಎರಡಕ್ಕೂ ಅನ್ವಯ. 


ಲಿಂಗರಾಜು ಕೋರಾ

ಬೆಂಗಳೂರು(ಜ.12): ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಪ್ರಸಕ್ತ ಸಾಲಿನಿಂದಲೇ ಮಹತ್ವದ ಬದಲಾವಣೆ ಮಾಡಿದೆ. ಪ್ರಮುಖವಾಗಿ ಎಲ್ಲಾ ವಿಷಯಗಳಲ್ಲೂ 1 ಅಂಕದ ಪ್ರಶ್ನೆಗಳನ್ನು 20ಕ್ಕೆ ಹೆಚ್ಚಿಸಿ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಉಳಿದಂತೆ 2, 3, 4, 5 ಮತ್ತು 6 ಅಂಕಗಳ ಪ್ರಶ್ನೆಗಳ ಸಂಖ್ಯೆಯನ್ನು ವಿಷಯವಾರು ಕೊಂಚ ಹೆಚ್ಚು ಕಡಿಮೆ ಮಾಡಲಾಗಿದೆ. ಒಟ್ಟಿನಲ್ಲಿ ಪ್ರಶ್ನೆ ಜೊತೆಯಲ್ಲೇ ಬಹು ಆಯ್ಕೆ ಉತ್ತರವನ್ನು ನೀಡಿ ಸರಿಯಾದ ಉತ್ತರ ಆರಿಸಿ ಬರೆಯುವುದು, ಬಿಟ್ಟಸ್ಥಳ ಭರ್ತಿ ಮಾಡುವುದು, ಹೊಂದಿಸಿ ಬರೆಯುವುದು ಹೀಗೆ ಮಕ್ಕಳಿಗೆ ಉತ್ತಮವಾಗಿ ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗಳ ಮಾದರಿಯನ್ನು ಹೆಚ್ಚಳ ಮಾಡಲಾಗಿದೆ.

Tap to resize

Latest Videos

ಸುಲಭ ಪ್ರಶ್ನೆ ಶೇ.40ಕ್ಕೆ ಹೆಚ್ಚಳ:

ಮಾಹಿತಿ ಪ್ರಕಾರ, 1 ಅಂಕದ ಪ್ರಶ್ನೆ ಸೇರಿ ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುವ ಪ್ರಶ್ನೆಗಳ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಲಾಗಿದೆ. ಮಧ್ಯಮ ಕ್ರಮಾಂಕದ ಅರ್ಥಾತ್‌ ಸುಲಭವೂ ಅಲ್ಲದ ಕಷ್ಟವೂ ಅಲ್ಲದ ಪ್ರಶ್ನೆಗಳ ಪ್ರಮಾಣವನ್ನು ಶೇ.40ಕ್ಕೆ ಮತ್ತು ಕಷ್ಟದ ಪ್ರಶ್ನೆಗಳ ಪ್ರಮಾಣವನ್ನು ಶೇ.20ಕ್ಕೆ ಇಳಿಸಲಾಗಿದೆ.

ಸಿಎ ಪರೀಕ್ಷೆ: ಮಂಗಳೂರಿನ ರಮ್ಯಶ್ರೀ ದೇಶಕ್ಕೇ ನಂ.2..!

ಇನ್ನು ಒಟ್ಟಾರೆ ಪ್ರಶ್ನೆಗಳಲ್ಲಿ ಶೇ.35ರಷ್ಟುಜ್ಞಾನಾಧಾರಿತ (ನಾಲೆಡ್ಜ್‌), ಶೇ.30ರಷ್ಟುತಿಳುವಳಿಕೆ ಸಾಮರ್ಥ್ಯದ, ಶೇ.25ರಷ್ಟುಅನ್ವಯಿಸುವಿಕೆ (ಅಪ್ಲಿಕೇಷನ್‌) ಮತ್ತು ಶೇ.10ರಷ್ಟುಕೌಶಲ್ಯಾಧಾರಿತ ಪ್ರಶ್ನೆಗಳನ್ನು ಒಳಗೊಂಡಿರುವಂತೆ ಪ್ರಶ್ನೆ ಪತ್ರಿಕೆ ಮಾದರಿಯನ್ನು ಸಿದ್ಧಪಡಿಸಲಾಗಿದೆ.

ಈಗಾಗಲೇ ದ್ವಿತೀಯ ಪಿಯುಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಥಮ ಪಿಯು ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿಗಳು ಕೂಡ ಅಂತಿಮಗೊಂಡಿದ್ದು ಮಂಡಳಿಯ ಅಧ್ಯಕ್ಷರಾದ ನಳಿನಿ ಅತುಲ್‌ ಅವರ ಸಹಿಯಷ್ಟೇ ಬಾಕಿ ಇದೆ. ಇನ್ನು ಒಂದೆರಡು ದಿನಗಳಲ್ಲಿ ಅವುಗಳನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೇ.61.88 ಫಲಿತಾಂಶವೇ ದಾಖಲೆ:

ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮ ಪಡಿಸಲು ಸರ್ಕಾರ ಸಾಕಷ್ಟುಪ್ರಯತ್ನ ನಡೆಸಿದರೂ ಈವರೆಗೆ ಒಮ್ಮೆಯೂ ಫಲಿತಾಂಶದ ಪ್ರಮಾಣ ಶೇ.62 ದಾಟಿಲ್ಲ. 2021-22ನೇ ಸಾಲಿನಲ್ಲಿ ಶೇ.61.88ರಷ್ಟುವಿದ್ಯಾರ್ಥಿಗಳು ಉತ್ತೀರ್ಣವಾಗಿರುವುದೇ ಇದುವರೆಗೆ ಬಂದ ಅತ್ಯುತ್ತಮ ಫಲಿತಾಂಶ. ಹಾಗಾಗಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯ ಕೆಲವು ಅಂಶಗಳನ್ನೂ ಸೇರಿಸಿಕೊಂಡು ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಮಾದರಿಯನ್ನೇ ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಸಾಲಿನವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯೇ ನಡೆಸುತ್ತಿತ್ತು. ಆದರೆ, ಇತ್ತೀಚೆಗಷ್ಟೆಸರ್ಕಾರ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿ (ಕೆಎಸ್‌ಇಎಬಿ) ಎಂಬ ಹೊಸ ಮಂಡಳಿ ರಚಿಸಿ ಸಂಪೂರ್ಣ ಪರೀಕ್ಷಾ ಜವಾಬ್ದಾರಿಯನ್ನು ವಹಿಸಿದೆ. ಈ ಮಂಡಳಿಯು ತನ್ನ ಕಾರ್ಯ ಚಟುವಟಿಕೆ ಆರಂಭಿಸಿದ ಮೊದಲ ವರ್ಷವೇ ಪಿಯು ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಬದಲಾವಣೆ ಮಾಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡಕ್ಕೂ ಪರೀಕ್ಷೆಗೆ ಒಂದೇ ಮಾದರಿಯನ್ನು ಅಳವಡಿಸಲಾಗುತ್ತಿದೆ.

ಥಿಯರಿ-ಪ್ರಾಕ್ಟಿಕಲ್‌ ಅಂಕ ಬದಲಾವಣೆ ಇಲ್ಲ

ಪ್ರಥಮ ಹಾಗೂ ದ್ವಿತೀಯ ಪಿಯು ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಬದಲಾವಣೆ ಮಾಡಿದರೂ ಲಿಖಿತ ಪರೀಕ್ಷೆ (ಥಿಯರಿ) ಮತ್ತು ಪ್ರಾಯೋಗಿಕ ಪರೀಕ್ಷೆಗಳ ಒಟ್ಟಾರೆ ಅಂಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿಜ್ಞಾನ ವಿಭಾಗದ ವಿಷಯಗಳಿಗೆ ಮಾತ್ರ ಪ್ರಾಯೋಗಿಕ ಪರೀಕ್ಷೆಗಳು ಇರುತ್ತವೆ. ಈ ವಿಷಯಗಳಿಗೆ ಶೇ.70ರಷ್ಟುಅಂಕಗಳಿಗೆ ಲಿಖಿತ ಪರೀಕ್ಷೆ, 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಉಳಿದೆಲ್ಲಾ ವಿಷಯಗಳಿಗೆ ತಲಾ 100 ಅಂಕಗಳಿಗೇ ಪರೀಕ್ಷೆ ನಡೆಯಲಿದೆ.

ಕಾಲೇಜು ಶಿಕ್ಷಣ ಡಿಜಿಟಲೀಕರಣ: ರಾಜ್ಯದ ವಿವಿಗಳು ಅಮೇರಿಕಾದ ಪೆನ್ಸಿಲ್ವೇನಿಯಾ ವಿವಿಯೊಂದಿಗೆ ಒಪ್ಪಂದ

ಬದಲಾವಣೆ ಏಕೆ?

ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಿಸಲು ಸರ್ಕಾರ ಸಾಕಷ್ಟುಪ್ರಯತ್ನ ನಡೆಸಿದೆ. ಆದರೂ ಫಲಿತಾಂಶ ಏರುತ್ತಿಲ್ಲ. ಶೇ.62ರ ಗಡಿಯನ್ನೇ ಈವರೆಗೂ ದಾಟಿಲ್ಲ. ಆದ ಕಾರಣ ಪ್ರಶ್ನೆಪತ್ರಿಕೆಯ ಮಾದರಿಯಲ್ಲೇ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಏನೇನು ಬದಲಾವಣೆ?

- 1 ಅಂಕದ್ದೂ ಸೇರಿ ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ ಪ್ರಮಾಣ 40%ಕ್ಕೆ ಏರಿಕೆ
- ಸುಲಭವೂ ಅಲ್ಲದ ಕಷ್ಟವೂ ಅಲ್ಲದ ಪ್ರಶ್ನೆ 40%ಕ್ಕೆ ಇಳಿಕೆ. ಕಷ್ಟದ ಪ್ರಶ್ನೆ 20%ಕ್ಕೆ ಕಡಿತ
- 1 ಅಂಕದ ಪ್ರಶ್ನೆಗಳ ಸಂಖ್ಯೆ 20ಕ್ಕೆ ಹೆಚ್ಚಳ. ಬಹುಆಯ್ಕೆ ಮಾದರಿ ಪ್ರಶ್ನೆಗಳಿಗೆ ಆದ್ಯತೆ
- 2, 3, 4, 5, 6 ಅಂಕಗಳ ಪ್ರಶ್ನೆಗಳ ಸಂಖ್ಯೆಗಳಲ್ಲಿ ಕೊಂಚ ಪ್ರಮಾಣದಲ್ಲಿ ಬದಲಾವಣೆ
- ಬಿಟ್ಟಸ್ಥಳ ಭರ್ತಿ, ಹೊಂದಿಸಿ ಬರೆಯುವಂತಹ ಪ್ರಶ್ನೆಗಳೂ ವಿದ್ಯಾರ್ಥಿಗಳಿಗೆ ಲಭ್ಯ

ವೆಬ್‌ಸೈಟ್‌ನಲ್ಲಿ ಲಭ್ಯ

ಫಲಿತಾಂಶ ಸುಧಾರಣೆ ದೃಷ್ಟಿಯಿಂದ ಪಿಯು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಅಂತಿಮಗೊಳಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಕೆಲವೇ ದಿನಗಳಲ್ಲಿ ಪ್ರಥಮ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯನ್ನೂ ಪ್ರಕಟಿಸಲಾಗುವುದು ಅಂತ ಕೆಎಸ್‌ಇಎಬಿ ನಿರ್ದೇಶಕ (ಪರೀಕ್ಷೆ) ಗೋಪಾಲಕೃಷ್ಣ ಎಚ್‌.ಎನ್‌. ತಿಳಿಸಿದ್ದಾರೆ. 

click me!