ಪಿಯು ಪರೀಕ್ಷೆ 2: ನೋಂದಾಯಿಸಿದ ವಿಷಯಕ್ಕೆ ಮಾತ್ರ ಹಾಜರಾದರೆ ಸಾಕು

By Kannadaprabha NewsFirst Published Apr 26, 2024, 9:50 AM IST
Highlights

ದ್ವಿತೀಯ ಪಿಯು ಪರೀಕ್ಷೆ-2 ಪ್ರವೇಶ ಪತ್ರದಲ್ಲಿ ತಾಂತ್ರಿಕ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ನೋಂದಾಯಿಸಿರುವ ವಿಷಯಗಳಿಗಿಂತ ಹೆಚ್ಚಿನ ವಿಷಯಗಳು ನೋಂದಣಿಯಾಗಿವೆ. 
 

ಬೆಂಗಳೂರು (ಏ.26): ದ್ವಿತೀಯ ಪಿಯು ಪರೀಕ್ಷೆ-2 ಪ್ರವೇಶ ಪತ್ರದಲ್ಲಿ ತಾಂತ್ರಿಕ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ನೋಂದಾಯಿಸಿರುವ ವಿಷಯಗಳಿಗಿಂತ ಹೆಚ್ಚಿನ ವಿಷಯಗಳು ನೋಂದಣಿಯಾಗಿವೆ. ಅಂತಹವರು ಆತಂಕ ಪಡಬೇಕಿಲ್ಲ. ನೋಂದಾಯಿತ ವಿಷಯಗಳ ಪರೀಕ್ಷೆಗಳಿಗೆ ಮಾತ್ರ ಹಾಜರಾದರೆ ಸಾಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ನೋಂದಾಯಿಸಿದ್ದಕ್ಕಿಂತ ಹೆಚ್ಚುವರಿ ವಿಷಯಗಳು ಮುದ್ರಣಗೊಂಡಿರುವುದು ಮಂಡಳಿ ಗಮನಕ್ಕೆ ಬಂದಿದೆ. ಆದರೆ, ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ನೋಂದಾಯಿಸಿಲ್ಲದ ವಿಷಯಗಳ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ: ಏ.29ರಿಂದ ಮೇ 6ರವರೆಗೆ ನಡೆಯುವ ದ್ವಿತೀಯ ಪಿಯು ಪರೀಕ್ಷೆ-2 ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆಯ ಎಲ್ಲ ನಿಗಮಗಳ ಬಸ್ಸುಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮಂಡಳಿ ತಿಳಿಸಿದೆ.

ಕರ್ನಾಟಕ Election 2024 Live: ರಾಜ್ಯದ 14 ಜಿಲ್ಲೆಗಳಲ್ಲೂ ಚುರುಕುಗೊಂಡ ಮತದಾನ

ಸಿಇಟಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಆಗ್ರಹ: ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಈ ತಿಂಗಳ 18 ಮತ್ತು 19ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಂಪೂರ್ಣ ಗೊಂದಲಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳಿಗೆ ತಕ್ಷಣ ಮತ್ತೆ ಮರು ಪರೀಕ್ಷೆ ಮಾಡುವಂತೆ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಕೊಡಗು ಜಿಲ್ಲಾ ಸಂಚಾಲಕ ಎನ್.ಎನ್. ಶಂಭುಲಿಂಗಪ್ಪ ಒತ್ತಾಯಿಸಿದ್ದಾರೆ.

ಇಲ್ಲಿನ ವಿವೇಕಾನಂದ ಪಿಯು ಕಾಲೇಜು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಾಲಿನಲ್ಲಿ ರಾಜ್ಯದ 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಲ್ಲಿ ಶೇ.53ರಷ್ಟು ಹೊರಪಠ್ಯದ (ಔಟ್ ಆಫ್ ಸಿಲಬಸ್) ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಹೊರ ಪಠ್ಯದಿಂದ ಹೆಚ್ಚು ಪ್ರಶ್ನೆಗಳನ್ನು ಪರೀಕ್ಷೆಗೆ ನೀಡಲಾಗಿದ್ದು ಇದರಿಂದ ವಿದ್ಯಾರ್ಥಿಗಳು ಸಂಪೂರ್ಣ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಅಂಗವಿಕಲರಿಗೆ ಸಕ್ಷಮ್ ಆ್ಯಪ್ ನೆರವು: ವೀಲ್ಹ್‌ಚೇರ್ ಸೇರಿ ಎಲ್ಲಾ ಸೌಲಭ್ಯ

ಈ ವಿಷಯವನ್ನು ಕರ್ನಾಟಕ ಪರೀಕ್ಷಾ ಮಂಡಳಿ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾಗಿದೆ ಎಂದು ಶಂಭುಲಿಂಗಪ್ಪ ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಪರೀಕ್ಷಾ ಮಂಡಳಿಯ ಹೊಂದಿರುವ ಮಹತ್ವದ ಸವಾಲಾಗಿದ್ದು ತಕ್ಷಣ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಆ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲ ನಿವಾರಣೆಯಾಗಬೇಕು ಪುನಃ ಪರೀಕ್ಷೆ ನಡೆಸುವುದು ಸೂಕ್ತ ಅಥವಾ ಕೃಪಾಂಕ ನೀಡುವುದು ಉತ್ತಮ ಮಾರ್ಗವಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!