
ಬೆಂಗಳೂರು, (ಫೆ.15): ಹಿಜಾಬ್ (Hijab Row)ಮತ್ತು ಕೇಸರಿ ವಿವಾದದ ಬಳಿಕ ಸೋಮವಾರದಿಂದ ಶಾಂತಿಯುತವಾಗಿ ಹೈಸ್ಕೂಲ್ ತರಗತಿಗಳು ಪುನರಾರಂಭಗೊಂಡಿದ್ದು, ಇದೀಗ ಬುಧವಾರದಿಂದ(ಫೆ.15) ಪಿಯು, ಡಿಗ್ರಿ, ವಿಶ್ವವಿದ್ಯಾಲಯ ಮತ್ತು ಡಿಪ್ಲೋಮಾ ಕಾಲೇಜುಗಳನ್ನು (College) ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಹಿಜಾಬ್ ವಿವಾದದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ (Dr CN Ashwath Narayan), ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿರುವ ಕಡೆ ವಿದ್ಯಾರ್ಥಿಗಳು ಅದನ್ನೇ ಪಾಲಿಸಬೇಕು. ಪದವಿ ಕಾಲೇಜುಗಳಲ್ಲಿ ಸಮವಸ್ತ್ರವನ್ನೇನೂ ವಿಧಿಸಿಲ್ಲ. ಅಲ್ಲಿಗೆ ಹೋಗುವವರು ತಮ್ಮ ಇಷ್ಟದ ಉಡುಪನ್ನು ಹಾಕಿಕೊಂಡು ಹೋಗಬಹುದು. ನಮ್ಮ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯವಿದೆ. ಆದರೆ, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಅದಕ್ಕೆಲ್ಲ ನಾವು ಅವಕಾಶ ಮಾಡಿಕೊಡುವುದಿಲ್ಲ,'' ಎಂದು ಸ್ಪಷ್ಟಪಡಿಸಿದರು.
Hijab Row ಕೋರ್ಟ್‌ನಲ್ಲಿ ಮಂಗಳವಾರ ಹಿಜಾಬ್ ವಾದ-ಪ್ರತಿವಾದ ಹೇಗಿತ್ತು? ಇಲ್ಲಿವೆ ಮುಖ್ಯಾಂಶಗಳು
ಹಿಜಾಬ್ ವಿವಾದದ ಬಗ್ಗೆ ರಾಜ್ಯ ಹೈಕೋರ್ಟ್ ಈಗಾಗಲೇ ತನ್ನ ಮಧ್ಯಂತರ ನಿರ್ದೇಶನವನ್ನು ನೀಡಿದೆ. ಅದನ್ನು ಜಾರಿಗೊಳಿಸುವುದಷ್ಟೇ ಸರಕಾರದ ಹೊಣೆ. ಹಾಗೆಯೇ ವಿದ್ಯಾರ್ಥಿಗಳೂ ಸಹ ಶಿಕ್ಷಣದ ಕಡೆ ಗಮನ ಹರಿಸಬೇಕೇ ವಿನಃ ವಸ್ತ್ರದ ಬಗ್ಗೆಯಲ್ಲ. ಸಮವಸ್ತ್ರ ನೀತಿ 1995ರಿಂದಲೂ ಇದೆ. ಇದನ್ನೇನೂ ನಾವು ಮಾಡಿಲ್ಲ. ನಮ್ಮ ಸಮಾಜಕ್ಕೆ ಇದನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿ ಇದೆ. ಇದೇ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ,'' ಎಂದು ಅವರು ತಿಳಿಸಿದರು.
ಈ ಕುರಿತು ಕೂ ಸಹ ಮಾಡಿರುವ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, "ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು, ಡಿಪ್ಲೋಮಾ ಕಾಲೇಜುಗಳು ಫೆಬ್ರವರಿ 16ರಿಂದ ಪುನರಾರಂಭಗೊಳ್ಳಲಿವೆ''
ಈ ಕುರಿತಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ದಿನಾಂಕ 15-02-2022ರಲ್ಲಿ ಸೂಚಿಸಿದಂತೆ ದಿನಾಂಕ 11-02-2022ರ ಸುತ್ತೋಲೆಯನ್ನು ಮಾರ್ಪಡಿಸಿ, ದಿನಾಂಕ 16-02-2022ರಿಂದ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳ ಆರಂಭಿಸುವುದಾಗಿ ತಿಳಿಸಿದೆ. ಉಚ್ಛ ನ್ಯಾಯಾಲಯದ ಆದೇಶ ಪಾಲಿಸುವ ಜತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ತರಗತಿಗಳನ್ನು ನಡೆಸಲಾಗುವುದು ಎಂದರು.
ಈ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವಂತಹ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನು ದಿನಾಂಕ 16-02-2022 (ಬುಧವಾರ)ರಿಂದ ಪುನರ್ ಪ್ರಾರಂಭಿಸಲು ಸೂಚಿಸಿದೆ.
ಅದೇ ರೀತಿ ಉನ್ನತ ಶಿಕ್ಷಣ ಇಲಾಖೆಯೂ ಸುತ್ತೋಲೆ ಹೊರಡಿಸಿದ್ದು, ದಿನಾಂಕ 11-02-2022ರ ಸುತ್ತೋಲೆಯನ್ನು ಮಾರ್ಪಡಿಸಿ, ದಿನಾಂಕ 16-02-2022ರ ರಜೆಯನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿ, ಆ ದಿನದಿಂದಲೇ ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾಲಯಗಳು, ಅನುದಾನಿತ ಮತ್ತು ಅನುದಾನ ರಹಿತ ಪದವಿ ಕಾಲೇಜುಗಳನ್ನು ಪುನರಾರಂಭಿಸಲು ತಿಳಿಸಿದೆ.
ಪರೀಕ್ಷೆ ಬರೆಯದೆ ವಾಪಸ್ ಹೋದ ವಿದ್ಯಾರ್ಥಿಗಳು
ಹಿಜಾಬ್ ಗದ್ದಲ ರಾಜ್ಯದ ಹಲವೆಡೆ ಮಂಗಳವಾರವೂ ಮುಂದುವರಿದೆ. ಹಿಜಾಬ್ ಧರಿಸಿಯೇ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗಳಿಗೆ ಬಂದಿದ್ದರು. ಇವರ ಜತೆ ಪಾಲಕರೂ ಆಗಮಿಸಿ, ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಶಾಲಾ ಆಡಳಿತ ಮಂಡಳಿಯವರ ಜತೆ ವಾಗ್ವಾದಕ್ಕಿಳಿದ ದೃಶ್ಯ ಕೆಲವೆಡೆ ಕಂಡು ಬಂತು.
ಕೆಲವರು ಹಿಜಾಬ್ ತೆಗೆಸಲ್ಲ ಎಂದು ಮಕ್ಕಳನ್ನು ವಾಪಸ್ ಮನೆಗೆ ಕರೆದೊಯ್ದಿದ್ದಾರೆ. ಇನ್ನು ಕೆಲವೆಡೆ ಮುಸ್ಲಿಂ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ಮೂಲಕ ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ ಇತರರಿಗೆ ಮಾದರಿಯಾದರು.
ಕೋರ್ಟ್‌ನಲ್ಲಿ ಹಿಜಾಬ್
ಹಿಜಾಬ್ ಧರಿಸಿ ತರಗತಿ ಹಾಜರಾಗಲು ಉಂಟಾಗಿರುವ ಅಡ್ಡಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ಕೈಗೊಂಡಿದ್ದು, ಬುಧವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.