* ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕಿಚ್ಚು
* ವಿಚಾರಣೆಯನ್ನು ಮತ್ತೆ ಮುಂದೂಡಿದ ಕರ್ನಾಟಕ ಹೈಕೋರ್ಟ್
* ಈ ಹಿಂದೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಫೆಬ್ರವರಿ 15ಕ್ಕೆ ಮುಂದೂಡಿತ್ತು.
ಬೆಂಗಳೂರು, (ಫೆ.15): ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab Row) ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court ) ಪೂರ್ಣ ಪೀಠ ಮತ್ತೆ ಮುಂದೂಡಿದೆ.
ನಾಳೆ ಅಂದ್ರೆ ಫೆ.16 ಮಧ್ಯಾಹ್ನ 2.30ಕ್ಕೆ ಮುಂದೂಡಿದೆ. ಇಂದು(ಮಂಗಳವಾರ) ವಿದ್ಯಾರ್ಥಿಗಳ ಪರ ವಕೀಲ ದೇವದತ್ ಕಾಮತ್ ಅವರು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ಸುದೀರ್ಘವಾಗಿ ತಮ್ಮ ವಾದ ಮಂಡಿಸಿದರು.
Shivamogga: ಎಕ್ಸಾಂಗೆ ಕೂರಿಸದಿದ್ರೂ ಪರ್ವಾಗಿಲ್ಲ, ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರ ಪಟ್ಟು
ದೇಶ-ವಿದೇಶಗಳ ಕೋರ್ಟ್‌ಗಳ ತೀರ್ಪುಗಳನ್ನ ಉಲ್ಲೇಖಿಸಿ ವಾದವನ್ನು ಮುಗಿಸಿದರು. ಬಳಿಕ ವಿದ್ಯಾರ್ಥಿಗಳ ಪರ ಮತ್ತೋರ್ವ ವಕೀಲ ವಾದ ಶುರು ಮಾಡಿದರು. ಸಮಯವಾದ ಕಾರಣ ವಿಚಾರಣೆನ್ನು ನಾಳೆಗೆ(ಬುಧವಾರ) ಮುಂದೂಡಲಾಗಿದೆ ಎಂದು ಸಿಜೆ ತಿಳಿಸಿದರು.
ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು ಅಥವಾ ಬೇರಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿತ್ತು. ಬಳಿಕ ಮುಂದಿನ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತ್ತು. ನಂತರ ಫೆ.15ಕ್ಕೆ ಮುಂದೂಡಲಾಗಿತ್ತು. ಇದೀಗ ಮೂರನೇ ಬಾರಿಗೆ ಕೋರ್ಟ್ ಮುಂದೂಡಿದೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಅಂತ ಆರೋಪಿಸಿ ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಪ್ರಾರಂಭದಲ್ಲಿ ಹೈಕೋರ್ಟ್‌ನ ಏಕಸದ್ಯಸ ಪೀಠ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಮುಖ್ಯ ನ್ಯಾಯಾಮೂರ್ತಿಗಳಿಗೆ ವಿಚಾರಣೆಯನ್ನು ವರ್ಗಾವಣೆ ಮಾಡಿದ್ದರು.
ಹಿಜಾಬ್ (Hijab), ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ ಶಾಲೆ (School) ಸೋಮವಾರದಿಂದ ಮತ್ತೆ ಆರಂಭವಾಗಿದ್ದು, ಬಿಗಿ ಭದ್ರತೆಯಲ್ಲಿ 9 ಮತ್ತು 10 ನೇ ತರಗತಿ ಪ್ರಾರಂಭವಾಗಿದೆ. ಆದ್ರೆ, ಕೆಲವೆಡೆ ಹಿಜಾಬ್ ವಿವಾದ ನಡೆಯುತ್ತಲೇ ಇದೆ. ಕೋರ್ಟ್ ಅನುಮತಿ ಇಲ್ಲದಿದ್ದರೂ ಸಹ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡೇ ಶಾಲೆಗಳಿಗೆ ಬರುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಹಿಜಾಬ್ ತೆಗೆಯುವುದಿಲ್ಲ ಎಂದು ಶಾಲೆಯಿಂದ ವಾಪಸ್ ಮನೆಗೆ ಹೋಗಿದ್ದಾರೆ.
ಹೈಕೋರ್ಟ್ ಆದೇಶ ಪಾಲಿಸಿ ಮಾದರಿಯಾದ್ರು
ಹಿಜಾಬ್ ಗದ್ದಲ ರಾಜ್ಯದ ಹಲವೆಡೆ ಮಂಗಳವಾರವೂ ಮುಂದುವರಿದೆ. ಹಿಜಾಬ್ ಧರಿಸಿಯೇ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗಳಿಗೆ ಬಂದಿದ್ದರು. ಇವರ ಜತೆ ಪಾಲಕರೂ ಆಗಮಿಸಿ, ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಶಾಲಾ ಆಡಳಿತ ಮಂಡಳಿಯವರ ಜತೆ ವಾಗ್ವಾದಕ್ಕಿಳಿದ ದೃಶ್ಯ ಕೆಲವೆಡೆ ಕಂಡು ಬಂತು.
ಕೆಲವರು ಹಿಜಾಬ್ ತೆಗೆಸಲ್ಲ ಎಂದು ಮಕ್ಕಳನ್ನು ವಾಪಸ್ ಮನೆಗೆ ಕರೆದೊಯ್ದಿದ್ದಾರೆ. ಇನ್ನು ಕೆಲವೆಡೆ ಮುಸ್ಲಿಂ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ಮೂಲಕ ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ ಇತರರಿಗೆ ಮಾದರಿಯಾದರು.
ಬುಧವಾರದಿಂದ ಕಾಲೇಜುಗಳ ಪ್ರಾರಂಭ
ಹಿಜಾಬ್ ಹಾಗೂ ಕೇಸರಿ ಶಾಲು ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಪಿಯು ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಇದೀಗ ಹೈಕೋರ್ಟ್ ಮಧ್ಯಂತರ ಆದೇಶದ ಅನುಗುಣವಾಗಿ ನಾಳೆಯಿಂದ(ಫೆ.16) ಕಾಲೇಜುಗಳನ್ನ ಪ್ರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಯಾವುದೇ ಧರ್ಮದ ಉಡುಗೆಗಳನ್ನ ಹಾಕದೇ ಕಾಲೇಜು ಸಮವಸ್ತ್ರದಲ್ಲೇ ಕಾಲೇಜಿಗೆ ಬರಲು ಸರ್ಕಾರ ಖಡಕ್ ಸೂಚನೆ ಕೊಟ್ಟಿದೆ.