* ನಿಗದಿತ ಸಮವಸ್ತ್ರ ಮಾತ್ರ ಧರಿಸಲು ಸೂಚನೆ
* ಈ ಸಲ ಸಮಯಕ್ಕೆ ಸರಿಯಾಗಿ ಕಾಲೇಜುಗಳು ಆರಂಭ
* ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣ
ಬೆಂಗಳೂರು(ಜೂ.09): ಪ್ರಸಕ್ತ 2022-23ನೇ ಸಾಲಿನ ಪದವಿಪೂರ್ವ ಕಾಲೇಜುಗಳು ಗುರುವಾರದಿಂದ (ಜೂ.9) ಆರಂಭವಾಗಲಿದ್ದು, ಕಾಲೇಜುಗಳು ಆಡಳಿತ ಮಂಡಳಿಗಳು ಶೈಕ್ಷಣಿಕ ಚಟುವಟಿಕೆ ನಡೆಸಲು ಸಜ್ಜಾಗಿವೆ.
ಅನುದಾನಿತ, ಅನುದಾನರಹಿತ, ಸರ್ಕಾರಿ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ಸಾಲಿನ ತರಗತಿಗಳು ಈಗಾಗಲೇ ನಿಗದಿಪಡಿಸಿರುವಂತೆ ನಡೆಯಲಿವೆ. ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳು ಆಯಾ ಕಾಲೇಜು ಆಡಳಿತ ಮಂಡಳಿಗಳು ನಿಗದಿಪಡಿಸಿರುವ ಸಮವಸ್ತ್ರ ಮಾತ್ರ ಧರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಭಾರಿ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣ ಆಗಿರುವುದರಿಂದ ಪ್ರವೇಶಾತಿಗೆ ಅನಾನುಕೂಲ ಆಗದಂತೆ ವ್ಯವಸ್ಥೆ ಮಾಡಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಅಗತ್ಯವಿದ್ದು ಈ ಬಗ್ಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕಾಲೇಜುಗಳಲ್ಲಿ ಮೂಲಸೌಕರ್ಯ ಮತ್ತಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಯು ಸಂಬಂಧಪಟ್ಟ ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಕೊರೋನಾದಿಂದಾಗಿ ಕಳೆದ ಎರಡು ವರ್ಷ ಪಿಯು ಕಾಲೇಜಿನಲ್ಲಿ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಲ ಸಮಯಕ್ಕೆ ಸರಿಯಾಗಿ ಕಾಲೇಜುಗಳು ಆರಂಭವಾಗುತ್ತಿದೆ.