ಕಾರವಾರ: ಮಕ್ಕಳ ಕೈಯಲ್ಲಿದ್ದ ರಾಖಿ ಬಿಚ್ಚಿಸಿದ ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಭಟನೆ

By Girish Goudar  |  First Published Aug 18, 2022, 2:00 PM IST

ರಾಖಿ ಕಟ್ಟಿದ್ದ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿದ ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಪೋಷಕರು, ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು 


ಉತ್ತರಕನ್ನಡ(ಆ.18):  ಇತ್ತೀಚೆಗಷ್ಟೇ ಮಂಗಳೂರಲ್ಲಿ ಖಾಸಗಿ ಶಾಲೆಯೊಂದು ಮಕ್ಕಳ ಕೈಯಲ್ಲಿದ್ದ ರಾಖಿ ಕಿತ್ತೆಸೆದು ಭಾರೀ ಸುದ್ದಿಯಾಗಿದ್ದ ಘಟನೆ ಮಾಸುವ ಮುನ್ನವೇ ಅಂಥಹದ್ದೇ ಮತ್ತೊಂದು ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ಹೌದು, ರಾಖಿ ಕಟ್ಟಿದ್ದ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿ ಖಾಸಗಿ ಶಾಲೆಯೊಂದು ದರ್ಪ ತೋರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಕರಗಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಕರಗಿನ ಕೊಪ್ಪದ ಲೊಯೋಲಾ ಶಿಕ್ಷಣ ಸಂಸ್ಥೆಯಲ್ಲಿ ಘಟನೆ ನಡೆದಿದೆ. 

ರಾಖಿ ಕಟ್ಟಿದ್ದ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿದ ಶಾಲೆಯ ವಿರುದ್ಧ ವಿದ್ಯಾರ್ಥಿಗಳ ಪೋಷಕರು, ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕರಗಿನ ಕೊಪ್ಪದ ಲೊಯೋಲಾ ಶಿಕ್ಷಣ ಸಂಸ್ಥೆಯಲ್ಲಿ ಸಿಬ್ಬಂದಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ರಾಖಿ ಬಿಚ್ಚಿಸಿದ್ದರು. ನಿನ್ನೆ ಶಾಲೆಯ ಆವರಣದಲ್ಲಿ ಬೆಳಗ್ಗೆ ಪ್ರಾರ್ಥನೆ ನಡೆದ ಸಂದರ್ಭದಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಿಂದ ರಾಖಿ ತೆಗೆಯುವಂತೆ ಸೂಚನೆ ನೀಡಲಾಗಿದೆ ಅಂತ ಹೇಳಲಾಗುತ್ತಿದೆ. 

Latest Videos

undefined

ಮಂಗಳೂರು: ಮಕ್ಕಳ ರಾಖಿ ಕಿತ್ತೆಸೆದಿದ್ದಕ್ಕೆ ಕಿಡಿ, ಪೋಷಕರಿಂದ ಶಿಕ್ಷಕರಿಗೆ ತರಾಟೆ..!

ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಪೋಷಕರು ಹಾಗೂ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಸೇರಿಕೊಂಡು ಲೊಯೋಲಾ ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 

ಸ್ಥಳಕ್ಕೆ ಪೊಲೀಸರು ಹಾಗೂ ಬಿಇಒ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನ ನಡೆಸಿದ್ದಾರೆ. ಈ ಮಧ್ಯೆ ಲೊಯೋಲಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರ ಜತೆ ಮಾತಿನ ಚಕಮಕಿ ನಡೆದಿದೆ. ಶಾಲಾ ಆಡಳಿತ ಮಂಡಳಿಯವರು ಸರ್ಕಾರದ ನಿಯಮದಂತೆ ನಡೆದುಕೊಳ್ಳಬೇಕು ಎಂದು ಬಿಇಒ ಸೂಚನೆ ನೀಡಿದ್ದಾರೆ. ಕೊನೆಗೆ ಲೋಯೊಲಾ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಕ್ಷಮೆ ಕೇಳಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ಕ್ಷಮೆ ಕೇಳಿದ ನಂತರ ಹಿಂದೂಪರ ಸಂಘಟನೆಗಳು, ಪೋಷಕರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. 
 

click me!