ಸರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 7 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದು, ಅದರಲ್ಲಿ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಪ್ರೊ.ಬಿ ಕೆ ರವಿ ಅವರನ್ನು ನೇಮಕ ಮಾಡಲಾಗಿದೆ.
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಮಾ.24): ಸರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 7 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದೆ. ಅದರಲ್ಲಿ ಕೊಪ್ಪಳ ವಿಶ್ವವಿದ್ಯಾಲಯವೂ ಒಂದಾಗಿದೆ. ಈ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಪ್ರೊ.ಬಿ ಕೆ ರವಿ ಅವರು ನೇಮಕವಾಗಿದ್ದು, ನೂತನ ವಿಶ್ವವಿದ್ಯಾಲಯದ ಕುರಿತು ಅವರು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಭರವಸೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಶೈಕ್ಷಣಿಕವಾಗಿ ಮತ್ತು ಉದ್ಯೋಗಶೀಲ ಪ್ರಜೆಗಳನ್ನು ರೂಪಿಸುವುದು ನೂತನ ವಿಶ್ವವಿದ್ಯಾಲಯದ ಕಾರ್ಯವಾಗಲಿದೆ ಎಂದು ನೂತನ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಅವರು ಹೇಳಿದರು.
undefined
ಮಾರ್ಚ 24ರಂದು ತಳಕಲ್ಲನ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಆಶೋತ್ತರಗಳಿಗೆ ಪೂರಕವಾಗಿ ನೂತನ ವಿಶ್ವವಿದ್ಯಾಲಯದ ಪಠ್ಯಕ್ರಮ ರಚಿಸಲು ತಾವು ಬದ್ಧರಿರುವುದಾಗಿ ಅವರು ಹೇಳಿದರು. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ನೀಡುವ ಧ್ಯೇಯ ನಮ್ಮದಾಗಿದೆ ಎಂದ ಅವರು, ಹಂತಹಂತವಾಗಿ ವಿಶ್ವವಿದ್ಯಾಲಯದ ಸೌಲಭ್ಯಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಉತ್ತಮ ಬೋಧನೆ ಮತ್ತು ಸಂಶೋಧನೆ ಕೇಂದ್ರಿಕೃತ ವಿಶ್ವವಿದ್ಯಾಲಯವಾಗಿಸುವ ಗುರಿ ಹೊಂದಲಾಗಿದೆ ಎಂದರು.
ಎನ್.ಇ.ಪಿ ಅನ್ವಯ ಬಹುಶಿಸ್ತೀಯ ಮಾದರಿ ಕೋರ್ಸ್ ಗಳನ್ನು ಆರಂಭಿಸಲು ಕ್ರಮ ವಹಿಸಲಾಗುವುದು. ಎಲ್ಲರ ಸಹಕಾರದೊಂದಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳ ವಿಶ್ವವಿದ್ಯಾಲಯವನ್ನು ಮಾದರಿಯಗಿಸುವುದಾಗಿ ತಮ್ಮ ಕನಸಿನ ಕಾರ್ಯಯೋಜನೆಯನ್ನು ಬಿಚ್ಚಿಟ್ಟರು.
ಜವಾಬ್ದಾರಿ ಹೆಚ್ಚಿದೆ:
ಕೊಪ್ಪಳ ಜಿಲ್ಲೆ ರಚನೆಯಾಗಿ 25 ವರ್ಷ ಪೂರ್ಣಗೊಳಿಸಿ ಬೆಳ್ಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯಾಗಿದ್ದು ಸಂತಷದ ವಿಷಯವಾಗಿದೆ ಎಂದ ಅವರು, ನೂತನ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಪ್ರಥಮ ಕುಲಪತಿಯನ್ನಾಗಿ ಸರ್ಕಾರವು ನೇಮಕ ಮಾಡಿ ನನಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ವಿವಿ ಮೇಲೆ ಜವಾಬ್ದಾರಿಯಿದೆ:
ಐತಿಹಾಸಿಕವಾಗಿ ಕೊಪ್ಪಳ, ವಿಜಯನಗರ ಭಾಗವು ತುಂಬಾ ಪವಿತ್ರವಾಗಿದ್ದು ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಚೇತನಗಳು, ಸ್ವಾಮೀಜಿಗಳು, ಗಣ್ಯರು, ಸಾಧಕರು ಜನಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ದಿಶೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿವಿಯ ಮೇಲೆ ವಿಶೇಷ ಜವಾಬ್ದಾರಿ ಇದೆ ಎಂದು ಅವರು ತಿಳಿಸಿದರು.
ಸಮೀಕ್ಷೆ ನಡೆದಿದೆ:
ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಗೊಳಪಡುವ ಸ್ಥಳಾವಕಾಶದ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿದೆ. ಚುಕ್ಕನಕಲ್ಲು ಗ್ರಾಮದ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪಿಜಿ ಸೆಂಟರ್ ಕಟ್ಟಡದ ಹಾಗೂ ಕೊಪ್ಪಳ ನಗರದ ಮಳೆಮಲ್ಲೇಶ್ವರ ದೇವಸ್ಥಾನದ ಬಳಿಯ ಮಂಜೂರಾಗಿರುವ ಸ್ಥಳ ವೀಕ್ಷಣೆ ಮಾಡಲಾಗಿದೆ ಎಂದರು.
5ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಮುಂದೂಡಲು ನಿರಾಕರಣೆ, ಸುಪ್ರೀಂ ವಿಚಾರಣೆಯಲ್ಲಿ
ಕಾರ್ಯ ಯೋಜನೆ:
ಕೊಪ್ಪಳ ವಿವಿಗೆ ಸಂಬಂಧಪಟ್ಟಂತೆ ಸರ್ಕಾರದ ನಿಯಮಾವಳಿ ಪ್ರಕಾರ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು. ಆಡಳಿತಾತ್ಮಕ ಅಧಿಕಾರಿಗಳ ನೇಮಕ ಹಾಗೂ ಅನುದಾನ ಬಿಡುಗಡೆ ಕುರಿತು ಸರ್ಕಾರದೊಂದಿಗೆ ಶೀಘ್ರವೇ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.
ಸುತ್ತೂರು ಶಾಖಾ ಮಠಕ್ಕೆ ಭೇಟಿಕೊಟ್ಟ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ನೂತನ ಕುಲಪತಿಗಳಿಗೆ ಸನ್ಮಾನ:
ನೂತನ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಕೆ.ರವಿ ಅವರಿಗೆ ಇದೆ ವೇಳೆ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ.ಮನೋಜ್ ಡೊಳ್ಳಿ, ಸಹಾಯಕ ಪ್ರಾಧ್ಯಾಪಕರಾದ ಡಾ ಚಲವಾದಿ ಸೇರಿದಂತೆ ಮತ್ತಿತರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.