Latest Videos

ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಶುಲ್ಕ ಶೇ.10ರಷ್ಟು ದುಬಾರಿ: ಎಷ್ಟು ಹೆಚ್ಚಳ?

By Kannadaprabha NewsFirst Published Jun 15, 2024, 6:06 AM IST
Highlights

ರಾಜ್ಯದ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಮತ್ತು ಕಾಮೆಡ್‌-ಕೆ ಕೋಟಾದ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಸೀಟುಗಳ ಶುಲ್ಕವನ್ನು 2024-25ನೇ ಸಾಲಿನಲ್ಲಿ ಶೇ.10ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. 

ಬೆಂಗಳೂರು (ಜೂ.15): ರಾಜ್ಯದ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಮತ್ತು ಕಾಮೆಡ್‌-ಕೆ ಕೋಟಾದ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಸೀಟುಗಳ ಶುಲ್ಕವನ್ನು 2024-25ನೇ ಸಾಲಿನಲ್ಲಿ ಶೇ.10ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಶೇ. 45ರಷ್ಟಿದ್ದು, ಕಾಮೆಡ್- ಕೆ ಕೋಟಾದ ಶೇ.30ರಷ್ಟು ಸೀಟುಗಳಿವೆ. ಉಳಿದದ್ದು ಆಡಳಿತ ಮಂಡಳಿ ಹಾಗೂ ಎನ್‌ಆರ್‌ಐ ಕೋಟಾ ಸೀಟುಗಳಾಗಿವೆ. ಈ ಪೈಕಿ ಸರ್ಕಾರಿ ಕೋಟಾದ ಸೀಟುಗಳು ಹಾಗೂ ಕಾಮೆಡ್ ಕೆ ಸೀಟುಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.

ಇದರಿಂದಾಗಿ ಸರ್ಕಾರಿ ಕೋಟಾದ ಸೀಟುಗಳ (ಟೈಪ್ 1 ಹಾಗೂ ಟೈಪ್ 2 ಎಂಬ ಎರಡು ಬಗೆಯ ಶುಲ್ಕವಿದೆ) ಪ್ರಸ್ತುತ ಶುಲ್ಕ 69,214 ರು. ಮತ್ತು 76,905 ರು. ನಿಂದ 76,135 ರು. ಮತ್ತು 84,595 ರು.ಗಳಿಗೆ ಹೆಚ್ಚಳವಾಗಲಿದೆ. ಅದೇ ರೀತಿ ಪ್ರಸ್ತುತ 1.69 ಲಕ್ಷ ರು. ಮತ್ತು 2.37 ಲಕ್ಷ ರು. (ಟೈಪ್‌ 1 ಮತ್ತು ಟೈಪ್‌ 2) ಇರುವ ಕಾಮೆಡ್‌-ಕೆ ಕೋಟಾ ಸೀಟುಗಳ ಶುಲ್ಕವು ಸುಮಾರು 1.86 ಲಕ್ಷ ರು. ಮತ್ತು 2.64 ಲಕ್ಷ ರು.ಗಳಿಗೆ ಹೆಚ್ಚಳವಾಗಲಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬೀಳಲಿದೆ. 

ಬಿಎಸ್‌ವೈ ಕುಟುಂಬ ನಾಶಕ್ಕೆ ಕಾಂಗ್ರೆಸ್‌ ಕುತಂತ್ರ: ಎಚ್‌.ಡಿ.ಕುಮಾರಸ್ವಾಮಿ

ಕಳೆದ ವರ್ಷದಂತೆ ಈ ವರ್ಷವೂ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕುಪೇಕಾ) ಮತ್ತು ಕರ್ನಾಟಕ ವೃತ್ತಿಪರ ಕಾಲೇಜುಗಳ ಫೌಂಡೇಷನ್ (ಕೆಪಿಸಿಎಫ್) ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆ ಇತ್ಯರ್ಥ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಅವರು ಶುಕ್ರವಾರ ರಾಜ್ಯ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ವಿವಿಧ ಸಂಘಟನೆಗಳೊಂದಿಗೆ ನಗರದಲ್ಲಿ ನಡೆಸಿದ ಸಭೆಯಲ್ಲಿ ಅಂತಿಮವಾಗಿ ಶೇ.10ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ. 

ಈ ಮಧ್ಯೆ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸೀಟುಗಳ ಶುಲ್ಕವನ್ನೂ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಕಳೆದ ಕೆಲ ವರ್ಷಗಳನ್ನು ಗಮನಿಸಿದಾಗ ಶೇ.3ರಿಂದ 5ರಷ್ಟು ಶುಲ್ಕ ಹೆಚ್ಚಳವಾಗಿದೆ. ಇದನ್ನು ಆಧರಿಸಿ ಈ ವರ್ಷ ಎಷ್ಟು ಶುಲ್ಕ ಹೆಚ್ಚಿಸಬೇಕೆಂದು ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ.

ಸಭೆಯಲ್ಲಿ ಈ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಕುಮಾರ್, ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ಯಾಮ್, ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಶಫಿ ಅಹಮದ್, ಎಂ.ಎಸ್.ರಾಮಯ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಂ.ಆರ್.ಜಯರಾಂ ಇತರರು ಭಾಗವಹಿಸಿದ್ದರು.

ಯಡಿಯೂರಪ್ಪ ಬಂಧಿಸಲು ಹೊರಟಿದ್ದ ಸಿಐಡಿಗೆ ಹಿನ್ನಡೆ!

ವೈದ್ಯಕೀಯ ಸೀಟು ಶುಲ್ಕ ಹೆಚ್ಚಳಕ್ಕೆ ಶೀಘ್ರ ಸಭೆ: ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕೂಡ ಸರ್ಕಾರಿ ಮತ್ತು ಆಡಳಿತ ಮಂಡಳಿ ಕೋಟಾ ಸೀಟುಗಳ ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ಈ ಸಂಬಂಧ ನಿರ್ಧಾರ ಕೈಗೊಳ್ಳಲು ಶೀಘ್ರ ಸಂಬಂಧಿಸಿದ ಸಂಘಟನೆಗಳೊಂದಿಗೆ ಸಭೆ ನಡೆಯಲಿದೆ. ಶುಕ್ರವಾರದ ಸಭೆಯಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಸಂಬಂಧ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿನ ಶೀಟುಗಳ ಶುಲ್ಕ ಹೆಚ್ಚಳದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

click me!