ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ಯ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನವದೆಹಲಿ (ಜೂ.14): ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ಯ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಪೇಪರ್ ಸೋರಿಕೆ ಹಾಗೂ ಗ್ರೇಸ್ ಅಂಕದ ವಿವಾದದ ಬೆನ್ನಲ್ಲೇ ಸರ್ಕಾರದ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಈ ವಿದ್ಯಾರ್ಥಿಗಳಿಗೆ ಕೇಂದ್ರ 2 ಆಯ್ಕೆ ನೀಡಿದೆ. ಈ ಎಲ್ಲ 1563 ವಿದ್ಯಾರ್ಥಿಗಳು ಬೇಕಿದ್ದರೆ ಜೂ.23ರಂದು ನಡೆಯಲಿರುವ ಮರುಪರೀಕ್ಷೆಗೆ ಕುಳಿತುಕೊಳ್ಳಬೇಕು ಅಥವಾ ಮರುಪರೀಕ್ಷೆ ಬೇಡ ಎಂದರೆ ಗ್ರೇಸ್ ಅಂಕಗಳನ್ನು ಕೈಬಿಟ್ಟು ಕೇವಲ ತಾವು ಪರೀಕ್ಷೆಯಲ್ಲಿ ಪಡೆದಿದ್ದ ಮೂಲ ಅಂಕ ಮಾತ್ರ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದೆ.
ನೀಟ್ ವಿವಾದದ ಬಗ್ಗೆ ಪರಿಶೀಲನೆ ನಡೆಸಲು ರಚಿತವಾಗಿರುವ ಸಮಿತಿ ಶಿಫಾರಸು ಆಧರಿಸಿ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ. ಗುರುವಾರ ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾ। ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲದ ನ್ಯಾಯಪೀಠವು, ‘ಅರ್ಜಿದಾರರು ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ಶಿಫಾರಸಿನ ಮೇರೆಗೆ 1,563 ಅಭ್ಯರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳನ್ನು ರದ್ದುಗೊಳಿಸುವ ನಿರ್ಧಾರವು ‘ಸಾಕಷ್ಟು ಸಮಂಜಸ’ವಾಗಿದೆ’ ಎಂದು ಬಣ್ಣಿಸಿತು.
undefined
ನಾನು ಸಂಸತ್ತಲ್ಲಿ ‘ನೀಟ್ ವಿದ್ಯಾರ್ಥಿಗಳ’ ದನಿ ಆಗುವೆ: ರಾಹುಲ್ ಗಾಂಧಿ
ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ನಿರ್ಧಾರದ ಮಾಹಿತಿ ನೀಡಿದ ಕೇಂದ್ರ ಮತ್ತು ಎನ್‌ಟಿಎ ಪರ ವಕೀಲ ಕನು ಅಗರ್‌ವಾಲ್, ‘ಪರೀಕ್ಷೆಯಲ್ಲಿ ಆದ ವ್ಯತ್ಯಾಸ ಪರಿಶೀಲಿಸಲು ರಚಿಸಲಾದ ಸಮಿತಿಯು ವಿದ್ಯಾರ್ಥಿಗಳ ಭಯ ನಿವಾರಿಸಲು ಜೂ.12 ರಂದು 1563 ವಿದ್ಯಾರ್ಥಿಗಳ ಗ್ರೇಸ್ ಅಂಕ ರದ್ದತಿಗೆ ನಿರ್ಧರಿಸಿದೆ. ಈ ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂ.23ರಂದು ನಡೆಸಬೇಕು. ಮರುಪರೀಕ್ಷೆ ಒಲ್ಲದ ಅಭ್ಯರ್ಥಿಗಳು ಗ್ರೇಸ್ ಅಂಕ ಕೈಬಿಟ್ಟು ಬಾಕಿ ಅಂಕ ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ಅಧಿಸೂಚನೆಯನ್ನು ಎನ್‌ಟಿಎ ಹೊರಡಿಸಲಿದೆ’ ಎಂದರು.
‘ಪರೀಕ್ಷೆಯನ್ನು ತೆಗೆದುಕೊಳ್ಳುವಾಗ ಸಮಯದ ನಷ್ಟದ ಆಧಾರದ ಮೇಲೆ ಗ್ರೇಸ್ ಅಂಕಗಳನ್ನು ನೀಡುವುದು ‘ವಿಕೃತ ಪರಿಸ್ಥಿತಿ’ ಉಂಟುಮಾಡಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ. ಏಕೆಂದರೆ ಪ್ರಯತ್ನ ಪಡದೇ ಪಡೆದುಕೊಂಡ ಅಂಕವು ಅವಾಗಿವೆ. ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ, ಈ ಫಲಾನುಭವಿ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸಲು ಶಿಫಾರಸು ಮಾಡುವುದು ಸೂಕ್ತ ಎಂದು ಸಮಿತಿಯು ತೀರ್ಮಾನಿಸಿದೆ. ಇದಕ್ಕೆ ಸರ್ಕಾರ ಒಪ್ಪಿದ್ದು ಎಲ್ಲ 1563 ವಿದ್ಯಾರ್ಥಿಗಳ ಗ್ರೇಸ್ ಅಂಕ ರದ್ದುಗೊಳಿಸಿದೆ’ ಎಂದು ಹೇಳಿದರು.
ಏನಿದು ವಿವಾದ?: ನೀಟ್-ಯುಜಿ 2024, ಮೇ 5ರಂದು ನಡೆದಿತ್ತು ಮತ್ತು ಫಲಿತಾಂಶಗಳನ್ನು ಜೂನ್ 4ರಂದು ಘೋಷಿಸಲಾಗಿತ್ತು. ಜೂನ್ 14ರಂದು ಫಲಿತಾಂಶ ಘೋಷಣೆ ನಿರೀಕ್ಷೆ ಇದ್ದರೂ 10 ದಿನ ಮುಂಚಿತವಾಗೇ, ಅದೂ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಿ ನಾನಾ ಸಂದೇಹಗಳಿಗೆ ನಾಂದಿ ಹಾಡಿತ್ತು. ಇದೇ ವೇಳೆ, ಹಿಂದೆಂದೂ ಕಂಡು ಕೇಳರಿಯದ ರೀತಿ 67 ವಿದ್ಯಾರ್ಥಿಗಳಿಗೆ 720ಕ್ಕೆ 720 ಅಂಕ ಬಂದಿತ್ತು. ನೀಟ್‌ನಲ್ಲಿ ಪ್ರತಿ ಪ್ರಶ್ನೆ 4 ಅಂಕದ್ದಾದರೂ ಕೆಲವು ವಿದ್ಯಾರ್ಥಿಗಳಿಗೆ 718-719 ಅಂಕ ಬಂದಿರುವುದು ಸಂದೇಹಗಳಿಗೆ ಇಂಬು ನೀಡಿತ್ತು. ಇನ್ನು ಉತ್ತರ ಭಾರತದ 6 ಆಯ್ದ ಕೇಂದ್ರಗಳ 1500 ವಿದ್ಯಾರ್ಥಿಗಳಿಗೆ ‘ಪ್ರಶ್ನೆಪತ್ರಿಕೆ ನೀಡಿಕೆಯಲ್ಲಿ ವಿಳಂಬವಾಗಿದೆ’ ಎಂಬ ಕಾರಣ ನೀಡಿ 45 ಗ್ರೇಸ್ ಅಂಕ ನೀಡಲಾಗಿತ್ತು.
ಈ ಬಾರಿಯ ನೀಟ್ ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣ: ಸಚಿವ ಬೋಸರಾಜು
‘ಇದು ಅಕ್ರಮ. ಇದರಿಂದ ಇಡೀ ರ್‍ಯಾಂಕಿಂಗ್ ವ್ಯವಸ್ಥೆಯೇ ಬುಡಮೇಲಾಗಿದೆ’ ಎಂದು ಪರೀಕ್ಷಾರ್ಥಿಗಳು, ಕಾಂಗ್ರೆಸ್ ಪಕ್ಷ ಹಾಗೂ ಆಪ್ ಆಕ್ರೋಶ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯ ತನಿಖೆಗೆ ಆಗ್ರಹಿಸಿದ್ದವು. ಕೆಲವರು ನೀಟ್ ಪರೀಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪಾಸಾದ ವಿದ್ಯಾರ್ಥಿಗಳ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತ್ತು. ಆದರೆ ಗ್ರೇಸ್ ಅಂಕ ವಿವಾದದ ಬಗ್ಗೆ ತಜ್ಞರ ಸಮಿತಿ ಮೂಲಕ ತನಿಖೆ ನಡೆಸಿ ತನಗೆ ವರದಿ ಸಲ್ಲಿಸಬೇಕು ಎಂದು ಎನ್‌ಟಿಎ ಮತ್ತು ಸರ್ಕಾರಕ್ಕೆ ಸೂಚಿಸಿತ್ತು. ನೀಟ್ ಪರೀಕ್ಷೆಯನ್ನು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಎನ್‌ಟಿಎ ನಡೆಸುತ್ತದೆ.