Latest Videos

ಸರ್ಕಾರ-ವಿಪಕ್ಷ ನೀಟ್‌ ಪರೀಕ್ಷಾ ಜಟಾಪಟಿ: ಸುಪ್ರೀಂ ತನಿಖೆಗೆ ಖರ್ಗೆ ಪಟ್ಟು

By Kannadaprabha NewsFirst Published Jun 14, 2024, 7:36 AM IST
Highlights

ಪೇಪರ್ ಸೋರಿಕೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಎನ್‌ಟಿಎ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಆಧಾರರಹಿತವಾಗಿದೆ, ಇದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತದೆ. ಜೊತೆಗೆ ಉನ್ನತ ಶಿಕ್ಷಣ ಮಟ್ಟದಲ್ಲಿ ಪರೀಕ್ಷೆ ನಡೆಸುತ್ತದೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
 

ನವದೆಹಲಿ(ಜೂ.14):  ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯಲ್ಲಿ ಪೇಪರ್ ಸೋರಿಕೆ ಆರೋಪವನ್ನು ಗುರುವಾರ ತಳ್ಳಿಹಾಕಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಈ ಆರೋಪಗಳನ್ನು ರುಜುವಾತುಪಡಿಸಲು ಯಾವುದೇ ಪುರಾವೆಗಳಿಲ್ಲ ಮತ್ತು ಯಾವುದೇ ವಿದ್ಯಾರ್ಥಿಗೂ ಅನಾನುಕೂಲತೆ ಆಗದಂತೆ ಸರ್ಕಾರ ನೋಡಿಕೊಳ್ಳುವುದು ಎಂದು ಹೇಳಿದ್ದಾರೆ. ಅಲ್ಲದೆ, ‘ಗ್ರೇಸ್‌ ಅಂಕ ನೀಡಿಕೆಗೆ ಒಂದು ಆಧಾರವಿತ್ತು. ಆದರೆ ಅದರಲ್ಲೂ ವ್ಯತ್ಯಾಸವಾದಲ್ಲಿ ಸರಿಪಡಿಸಲಾಗುವುದು’ ಎಂದಿದ್ದಾರೆ.

ಪೇಪರ್‌ ಸೋರಿಕೆ ಆರೋಪ ಹಾಗೂ ಗ್ರೇಸ್‌ ಅಂಕ ವಿವಾದದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೇಪರ್ ಸೋರಿಕೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಎನ್‌ಟಿಎ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಆಧಾರರಹಿತವಾಗಿದೆ, ಇದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತದೆ. ಜೊತೆಗೆ ಉನ್ನತ ಶಿಕ್ಷಣ ಮಟ್ಟದಲ್ಲಿ ಪರೀಕ್ಷೆ ನಡೆಸುತ್ತದೆ’ ಎಂದರು.

ನೀಟ್‌ ಅಕ್ರಮದಿಂದ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ: ಸುಪ್ರೀಂ ಕೋರ್ಟ್‌

ಇನ್ನು ಗ್ರೇಸ್ ಅಂಕದ ಬಗ್ಗೆ ಮಾತನಾಡಿದ ಅವರು, ‘ಗ್ರೇಸ್‌ ಅಂಕಗಳನ್ನು ಎನ್‌ಟಿಎ ಏನೂ ಮನಬಂದಂತೆ ನೀಡಿಲ್ಲ. ಸುಪ್ರೀಂ ಕೋರ್ಟ್ ಸೂತ್ರವನ್ನು ಆಧರಿಸಿ ಲೆಕ್ಕಾಚಅರ ಮಾಡಿ ಅಂಕ ನೀಡಿದೆ. ಆ ಅಂಕ ನೀಡಿಕೆಗೂ ಒಂದು ಆಧಾರವಿದೆ. ಆದರೆ ಅದರಲ್ಲೂ ಕೆಲವು ವ್ಯತ್ಯಾಸ ಆದಲ್ಲಿ ಅವನ್ನು ಸರಿಪಡಿಸಲಾಗುವುದು ಮತ್ತು ಯಾವುದೇ ವಿದ್ಯಾರ್ಥಿಗೆ ಅನಾನುಕೂಲ ಆಗದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದರು.

ನೀಟ್‌ ಹಗರಣದ ‘ಸುಪ್ರೀಂ ತನಿಖೆ’ಗೆ ಖರ್ಗೆ ಪಟ್ಟು

ನವದೆಹಲಿ:  ನೀಟ್ ಪರೀಕ್ಷೆಯ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಗುರುವಾರ ಪುನರುಚ್ಚರಿಸಿದೆ ಮತ್ತು ಈ ವಿಷಯದ ಬಗ್ಗೆ ದೇಶದಲ್ಲಿನ ಕೋಪವು ಸಂಸತ್ತಿನ ಒಳಗೆಯೂ ಪ್ರತಿಧ್ವನಿಸುತ್ತದೆ ಎಂದು ಹೇಳಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದೆ. ಈಗ ನೀಟ್ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ವಿವಾದವೊಂದನ್ನೇ ಸಮಸ್ಯೆ ಎನ್ನಲಾಗದು. ಅದರಲ್ಲಿ ರಿಗ್ಗಿಂಗ್ ನಡೆದಿದೆ, ಪೇಪರ್ ಲೀಕ್ ಆಗಿದೆ, ಭ್ರಷ್ಟಾಚಾರ ನಡೆದಿದೆ, ಮೋದಿ ಸರ್ಕಾರದ ಕ್ರಮಗಳಿಂದ ನೀಟ್ ಪರೀಕ್ಷೆಗೆ ಹಾಜರಾಗುವ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಕುರಿತು ನಮ್ಮ ಬೇಡಿಕೆಗಳನ್ನು ಕೇಂದ್ರ ಸಕಅರ್ರ ಪದೇ ಪದೇ ನಿರ್ಲಕ್ಷಿಸುತ್ತಿದೆ’ ಎಂದರು,

ವಿದ್ಯಾರ್ಥಿಗಳ ಜೀವನವನ್ನ ಅಪಾಯಕ್ಕೆ ಸಿಲುಕಿಸಲು ಗಾಂಧಿ ಕುಟುಂಬದ ಪ್ರಯತ್ನ: ಬಿಜೆಪಿ ಕಿಡಿ

‘ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮಹಾನಿರ್ದೇಶಕರನ್ನು ವಜಾ ಮಾಡಬೇಕು. ಈಗ ನೀಟ್‌ ನಡೆಸಿರುವ ಆಂತರಿಕ ತನಿಖೆ ವಿಶ್ವಾಸಾರ್ಹವಲ್ಲ. ಸಂಪೂರ್ಣ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಾವು ಒತ್ತಾಯಿಸುತ್ತೇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗೌರವ್‌ ಗೊಗೋಯ್‌ ಜತೆ ಮಾತನಾಡುತ್ತ ಖರ್ಗೆ ನುಡಿದರು.

ಇದೇ ವೇಳೆ, ‘10ನೇ ಕ್ಲಾಸ್‌ ಹುಡುಗರ ಜತೆ ಪರೀಕ್ಷಾ ಪೇ ಚರ್ಚಾ ನಡೆಸುವ ಪ್ರಧಾನಿ ನರೇಂದ್ರ ಮೋದಿ ಈಗ ಏನು ಮಾಡುತ್ತಿದ್ದಾರೆ? ‘ನೀಟ್ ಹಗರಣ’ದತ್ತ ಗಮನ ಹರಿಸುವ ಬದಲು ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ವಿದೇಶ ಪ್ರವಾಸಕ್ಕೆ ತೆರಳುವುದರಲ್ಲಿ ನಿರತರಾಗಿದ್ದಾರೆ’ ಎಂದು ಗೌರವ್‌ ಗೊಗೋಯ್‌ ಟೀಕಿಸಿದರು.

click me!