Suvarna News Reality Check; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!

By Suvarna NewsFirst Published Jun 2, 2022, 9:16 PM IST
Highlights

ಕೋಟಿ ಕೋಟಿ ಅನುದಾನ ಬಿಡುಗಡೆ ಆದರೂ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗ್ತಿರೋದು ಕಳಪೆ ಬಿಸಿಯೂಟ. ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಬಿಸಿಯೂಟದ ಬಂಡವಾಳ.
 

ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ ( ಜೂನ್.2): ಸರ್ಕಾರಿ ಶಾಲೆಗಳಿಗೆ (Government school) ಬರೋ ಬಡ ಹಾಗೂ ಮದ್ಯಮ ವರ್ಗದ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರ (Food) ಸಿಗಲಿ ಅಂತಾನೇ ಸರ್ಕಾರ ಮದ್ಯಾಹ್ನದ ಬಿಸಿಯೂಟ ಯೋಜನೆಯನ್ನು (Mid Day Meal Scheme) ಜಾರಿಗೆ ತಂದಿದೆ. 2002-2003 ರಲ್ಲೇ ಜಾರಿಗೆ ಬಂದ ಬಿಸಿಯೂಟ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಸಿಯೂಟ ಯೋಜನೆ ಅನುಷ್ಠಾನ ಮಾಡೋ ಅಧಿಕಾರಿಗಳಿಗಂತೂ ತುಂಬಾನೇ ಪ್ರಯೋಜನ ಆಗಿದೆ ಅನ್ನೋದಕ್ಕೆ ಸರ್ಕಾರಿ ಶಾಲೆಗಳಲ್ಲಿ ಕೊಡ್ತಿರೋ ಕಳಪೆ ಬಿಸಿಯೂಟವೇ ಉದಾಹರಣೆ. 

 ಸರ್ಕಾರದ ಬಿಸಿಯೂಟ ಯೋಜನೆ ಹಳ್ಳ ಹಿಡಿಯುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಮಕ್ಕಳಿಗೆ ಒಳ್ಳೆ ಊಟ (Meal) ಸಿಗಲಿ ಅಂತ ಸರ್ಕಾರ ಯೋಜನೆಯನ್ನೇನೋ ಜಾರಿಗೆ ತಂದಿದೆ. ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿ, ನಿಯಮಗಳನ್ನು ರಚಿಸಿದೆ. ಯಾವ ರೀತಿ ಆಹಾರ ಕೊಡಬೇಕು? ಪ್ರತಿನಿತ್ಯ ಯಾವ್ಯಾವ ತರಕಾರಿ, ಕಾಳುಗಳನ್ನು ಬಿಸಿಯೂಟಕ್ಕೆ ಬಳಸಬೇಕು ಅಂತ ನಿಯಮಗಳ ಪಟ್ಟಿಯನ್ನೇ ಮಾಡಿದೆ ಸರ್ಕಾರ. ಆದರೆ ನಿಯಮಗಳು  ಕೇವಲ ಸರ್ಕಾರಿ ಇಲಾಖೆಗಳ ಕಚೇರಿಯಲ್ಲಿ ಕಾಗದದಲ್ಲಿ ಉಳಿದಿವೆ ಹೊರತು ಜಾರಿಯಾಗಿಲ್ಲ.

ಬಿಸಿಯೂಟ ಯೋಜನೆ ಉದ್ದೇಶಗಳೇನು?

  • ಮಕ್ಕಳಿಗೆ ಮದ್ಯಾಹ್ನದ ವೇಳೆ  ಪೋಷಕಾಂಶಯುಕ್ತ  ಬಿಸಿಯೂಟ ನೀಡುವ ಮೂಲಕ ಮಕ್ಕಳ  ಉತ್ತಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಬೇಕು
  • ಸರ್ಕಾರಿ ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸುವುದು
  • ಕೂಲಿ ಕಾರ್ಮಿಕರು ಸೇರಿದಂತೆ ಬಡ ವರ್ಗದ ಜನರ ಮಕ್ಕಳು ಮನೆಗಳಿಗೆ ಹೋಗಿ ಮದ್ಯಾಹ್ನದ ಊಟ ಮಾಡುವುದಕ್ಕಿಂತ ಶಾಲೆಗಳಲ್ಲಿಯೇ ಉತ್ತಮ ಗುಣಮಟ್ಟದ ಆಹಾರ ಸಿಗಲಿ ಎಂಬ ಉದ್ದೇಶ
  • ಇಷ್ಟೆಲ್ಲಾ ಒಳ್ಳೆ ಉದ್ದೇಶಗಳನ್ನಿಟ್ಟುಕೊಂಡು ಬಿಸಿಯೂಟ ಯೋಜನೆ ಜಾರಿಗೆ ತಂದರೂ  ಹಾವೇರಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಅನುಷ್ಠಾನ ಆಗಿಯೇ ಇಲ್ಲ.  2021-22 ನೇ ಸಾಲಿನಲ್ಲಿ ಮಕ್ಕಳ ಬಿಸಿಯೂಟದ ಅಡುಗೆ ತಯಾರಿಕಾ ಖರ್ಚಿಗೆ ಅಂತ 11 ಕೋಟಿ 57 ಲಕ್ಷ  ರೂಪಾಯಿ  ಹಣ ಬಿಡುಗಡೆ ಆಗಿದೆ.

 ಸರಕಾರ ಕೋಟ್ಯಾಂತರ ರೂಪಾಯಿ ಅನುದಾನ ನೀಡಿ ಸರ್ಕಾರಿ ಶಾಲಾ ಮಕ್ಕಳಿಗೆ  ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಆದೇಶ ಹೊರಡಿಸಿರುತ್ತೆ. ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹ ವಿಭಾಗದಿಂದ  ತಾಲೂಕುಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಆಗುತ್ತೆ. ಜಿಲ್ಲಾ ಪಂಚಾಯತಿ ಮುಖ್ಯ‌ಕಾರ್ಯ ನಿರ್ವಾಹಕ ಅಧಿಕಾರಿಯವರ ಒಪ್ಪಿಗೆ ಸಹಿ ಬಳಿಕ ಅನುದಾನ ತಾಲೂಕು ಪಂಚಾಯಿತಿಗಳಿಗೆ ಬಿಡುಗಡೆ ಆಗುತ್ತೆ. 

ತಾಲೂಕು ಪಂಚಾಯತಿ ಕಾರ್ಯ ನಿರ್ವಹಕ ಅಧಿಕಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಂದ  ಶಾಲಾ ಮುಖ್ಯೋಪಾಧ್ಯಾಯರ ಅಕೌಂಟ್ ಗೆ ಅಡುಗೆ ತಯಾರಿಕಾ ವೆಚ್ಚ ಬಿಡುಗಡೆ ಆಗುತ್ತೆ.ಆದರೆ ಉತ್ತಮ ಪೋಷಕಾಂಶ ಭರಿತ ತರಕಾರಿ, ಸೊಪ್ಪು, ಕಾಳು ಬಳಸಿ ಬಿಸಿಯೂಟ ತಯಾರಿಸುವುದೇ ಇಲ್ಲ. ಕೇವಲ ಒಂದಿಷ್ಟು ಬೇಳೆ ಉಪಯೋಗಿಸಿ ತಯಾರಿಸಿದ ಬೇಳೆಸಾರು ಅನ್ನ  ಅಷ್ಟೇ ಮಕ್ಕಳ ಹೊಟ್ಟೆಗೆ ಸೇರ್ತಾ ಇದೆ. ತಿಳಿಯಾದ ಬೇಳೆ ಸಾರು, ಅನ್ನ ತಿನ್ನೋ ಮಕ್ಕಳಿಗೆ ಯಾವ ಪೋಷಕಾಂಶಗಳೂ ಸಿಗಲ್ಲ ಅನ್ನೋದು ಮಕ್ಕಳ ಪೋಷಕರ ಆರೋಪವೂ ಆಗಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಹೇಗಿರಬೇಕು ? ಹೇಗಿದೆ ? ವಾಸ್ತವ ಕೇಳಿದರೆ ಶಾಕ್ ಆಗ್ತೀರಿ !
ಕೋಟಿ ಕೋಟಿ ಅನುದಾನ ಖರ್ಚು ಮಾಡಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತೆ. ಆದರೆ ಸರ್ಕಾರ ನಿಗಧಿ ಪಡಿಸಿರೋ ಮೆನು( ಸೂಚಿತ ಆಹಾರ ಪಟ್ಟಿ) ಪ್ರಕಾರ ಪ್ರತಿನಿತ್ಯ ಬಿಸಿಯೂಟ ನೀಡೋದೇ ಇಲ್ಲ. ವಾರದ 6 ಶಾಲಾ ದಿನಗಳಲ್ಲಿ ಪ್ರತಿ ನಿತ್ಯ ಬಗೆ ಬಗೆಯ ಬಿಸಿಯೂಟ ನೀಡಬೇಕು.

ಬಿಸಿಯೂಟದಲ್ಲಿ ಕಡ್ಡಾಯವಾಗಿ  ಹೆಸರುಕಾಳು, ಅಲಸಂಡೆ, ಕಡಲೆಕಾಳು ಸೇರಿದಂತೆ ವಿವಿಧ ಬಗೆಯ ಸ್ಥಳೀಯವಾಗಿ ಲಭ್ಯವಿರುವ ಕಾಳುಗಳು, ಕ್ಯಾರೆಟ್ , ಸೌತೆಕಾಯಿ, ಸಿಹಿ ಗುಂಬಳಕಾಯಿ, ಬೀನ್ಸ್ ಸೇರಿದಂತೆ ವಿವಿಧ ಬಗೆಯ ತರಕಾರಿ, ಹರಿವೆ, ಕೊತ್ತಂಬರಿ , ಸಬ್ಬಸಿಗೆ ಸೇರಿದಂತೆ ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು ಬಳಕೆ ಕಡ್ಡಾಯ. ಆದರೆ ಸರ್ಕಾರಿ ಶಾಲೆಗಳಲ್ಲಿ ಕೊಡ್ತಿರೋದು ಕೇವಲ ಅನ್ನ- ಸಾಂಬಾರ್ ಮಾತ್ರ. 

ತರಕಾರಿ, ಸಾಂಬಾರು ಪದಾರ್ಥಗಳ ಖರೀದಿಗೆ ಸರ್ಕಾರ ಕೊಡೊ ಅನುದಾನ ಎಲ್ಲಿ ಹೋಗುತ್ತೆ? ಅಡುಗೆ ತಯಾರಿಕಾ ವೆಚ್ಚವಾಗಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ  ಆದರೂ  ಪೋಷಕಾಂಶ ಭರಿತ ಬಿಸಿಯೂಟ ಯಾಕೆ ಕೊಡ್ತಿಲ್ಲ? ಅನ್ನೋ ಪ್ರಶ್ನೆ ಪೋಷಕರದ್ದು. 

ಪ್ರತಿ ಮಕ್ಕಳಿಗೆ ಸರ್ಕಾರ ನೀಡೋ ಹಣ

  • 1 ರಿಂದ 5 ನೇ ತರಗತಿ ಮಕ್ಕಳಿಗೆ- 4 ರೂಪಾಯಿ 97 ಪೈಸೆ
  • 6 ರಿಂದ 10 ನೇ ತರಗತಿ ಮಕ್ಕಳಿಗೆ- 7.45 ಪೈಸೆ

ಪ್ರತಿ ಸರ್ಕಾರಿ ಶಾಲೆ ವಿದ್ಯಾರ್ಥಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಬೇಳೆಯುಕ್ತ ತಿಳಿ ಸಾಂಬಾರ್, ಅನ್ನ ಮಾತ್ರ ನೀಡೋಕೆ ಕಾರಣ ಏನು? ತರಕಾರಿ ಪಲ್ಯ ಹಾಗೂ ಕಾಳು ಪಲ್ಯ ನೀಡಬೇಕು ಅಂತ ಸರ್ಕಾರದ ನಿಯಮಗಳಿದ್ದರೂ ಪಲ್ಯ ಯಾಕೆ ಮಾಡಲ್ಲ? ಹಾಗಾದರೆ ಸರ್ಕಾರ ನೀಡೋ ಅನುದಾನ ಎಲ್ಲಿ ಹೋಗುತ್ತೆ ಅಂತಾರೆ ಪೋಷಕರು.

ಪಾರದರ್ಶಕವಾಗಿ ಬಿಸಿಯೂಟ ಯೋಜನೆ ಲೆಕ್ಕ ಪತ್ರ ಪರಿಶೀಲನೆ ನಡೆಯೋದೆ ಇಲ್ಲ: ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿರೋ ರಿಯಾಲಿಟಿ ಚೆಕ್ ನಲ್ಲಿ ಮತ್ತೊಂದು ಸತ್ಯ ಬಯಲಾಗಿದೆ. ಸರ್ಕಾರ ಪ್ರತಿ ಮಕ್ಕಳಿಗೆ ನೀಡೋ ಅನುದಾನದ ಲೆಕ್ಕ ಕೇಳೋರೇ ಇಲ್ಲ. ಶಾಲಾ ಮುಖ್ಯೋಪಾದ್ಯಾಯರ ಬಳಿ ಖರ್ಚು ವೆಚ್ಚಗಳ ಸರಿಯಾದ‌ ಮಾಹಿತಿ , ದಾಖಲಾತಿಗಳು ಸಿಗೋದೇ ಇಲ್ಲ. ಸ್ಥಳೀಯವಾಗಿ ಲಭ್ಯ ಇರೋ ರೈತರಿಂದ ತರಕಾರಿ ಖರೀದಿ ಮಾಡ್ತೀವಿ. ಅಲ್ಲಿ  ಕಚ್ಚಾ ರಷೀದಿ ಮಾತ್ರ ಸಿಗುತ್ತೆ. ಅಧಿಕೃತ ಬಿಲ್ ಸಿಗಲ್ಲ ಅಂತಾರೆ ಮುಖ್ಯೋಪಾಧ್ಯಾಯರು.

ಇದರ ಮೇಲ್ವಿಚಾರಣೆ ಮಾಡಬೇಕಾದ ಅಕ್ಷರ ದಾಸೋಹ ವಿಭಾಗ ಇದ್ದೂ ಇಲ್ಲದಂತಾಗಿದೆ. ಅಧಿಕಾರಿಗಳ ನಡೆ ಅನುಮಾನ ಹುಟ್ಟಿಸುವಂತಿದೆ ಅಂತಾರೆ ಜನ. ಸದ್ಯ ಬಿಸಿಯೂಟದ ಪ್ರಯೋಜನ ಮಕ್ಕಳಿಗೆ ಇದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ಅಧಿಕಾರಿಗಳಂತೂ ಜೇಬು ತುಂಬಿಸಿಕೊಳ್ತಾರೆ ಅಂತಿದ್ದಾರೆ ಮಕ್ಕಳ ಪೋಷಕರು.

click me!