* ಮೂರು ದಿನಗಳಿಂದ ಜಿಟಿಜಿಟಿ ಮಳೆ
* ರೊಚ್ಚಿಗೆದ್ದ ಮಕ್ಕಳ ಪೋಷಕರು
* ಎಷ್ಟೇ ಮನವಿ ಮಾಡಿದರೂ ಸರ್ಕಾರಿ ಶಾಲೆ ಕೊಠಡಿಗಳ ಮರು ನಿರ್ಮಾಣ ಮಾಡದ ಅಧಿಕಾರಿಗಳು
ಹಾವೇರಿ(ಜು.08): ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಲಾ ಮಕ್ಕಳು ಮಳೆಗಾಲದಲ್ಲಿ ಪರದಾಡುವಂತಾಗಿದೆ. ಮೂರು ದಿನಗಳಿಂದ ಜಿಟಿಜಿಟಿ ಮಳೆ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಕಟ್ಟಡ ಸೋರುತ್ತಿದೆ. ಮಳೆ ನೀರು ಒಡೆದ ಹಂಚುಗಳಿಂದ ತೊಟ್ಟಿಕ್ಕೋದು ನೋಡಿ ನೋಡಿ ಮಕ್ಕಳ ಪೋಷಕರೂ ರೊಚ್ಚಿಗೆದ್ದಿದ್ದಾರೆ. ತಮ್ಮ ಮಕ್ಕಳ ಗೋಳು ನೋಡಲಾಗದೇ ಸ್ವತಃ ತಾವೇ ಶಾಲೆಯ ಮೇಲ್ಚಾವಣಿ ಏರಿ ಹಂಚು ಹಾಕಿದ್ದಾರೆ.
ರಾಣೆಬೆನ್ನೂರು ತಾಲೂಕು ನೂಕಾಪುರ ಗ್ರಾಮದ ಸರ್ಕಾರಿ ಶಾಲೆ ಮಳೆಯಿಂದ ಸೋರ್ತಾ ಇದೆ.ಒಡೆದ ಹಂಚುಗಳು, ಬಿರುಕು ಬಿಟ್ಟ ಗೋಡೆಗಳ ನಡುವೆ ಮಕ್ಕಳು ಭಯದಲ್ಲೇ ಪಾಠ ಕೇಳುತ್ತಿವೆ.ಕಳೆದ ವರ್ಷ ಮಳೆಯಿಂದ ಸಂಪೂರ್ಣ ಶಿಥಿಲಗೊಂಡಿರೋ ಶಾಲಾ ಕಟ್ಟಡ ಇದುವರೆಗೂ ರಿಪೇರಿ ಆಗಿಲ್ಲ.ಈ ಬಾರಿ ನಿರಂತರ ಮಳೆಗೆ ಶಾಲೆಯ ಮೇಲ್ಚಾವಣಿ ಸೋರುತ್ತಿದೆ.
HAVERI: ಪಲ್ಟಿಯಾದ ಬಸ್: ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ಪ್ರಯಾಣಿಕರು
ಈ ಬಗ್ಗೆ ಶಾಸಕ ಅರುಣ್ ಕುಮಾರ್ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ. ಶಾಲೆಯ ಕೊಠಡಿಗಳನ್ನು ಮರು ನಿರ್ಮಾಣ ಮಾಡಿ ಕೊಡ್ತೀನಿ ಅಂದಿದ್ದ ರಾಣೆಬೆನ್ನೂರಿನ ಶಾಸಕರು ತಿರುಗಿ ಈ ಕಡೆ ನೋಡಿಲ್ಲ.ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ ಅಂತಾರೆ ಜನ ಪ್ರತಿನಿಧಿಗಳು. ಆದರೆ ಸರ್ಕಾರಿ ಶಾಲೆ ನೋಡಿದರೆ ಇಂಥ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸಬೇಕಾ ಅಂತ ಜನ ಯೋಚನೆ ಮಾಡೋ ಹಾಗಾಗಿದೆ. 1968 ರಲ್ಲಿ ನಿರ್ಮಣವಾಗಿರೋ ಸರ್ಕಾರಿ ಶಾಲೆ ಶಿಥಿಲಾವಸ್ಥೆ ತಲುಪಿದೆ. ಎಷ್ಟೇ ಮನವಿ ಮಾಡಿದರೂ ಸರ್ಕಾರಿ ಶಾಲೆ ಕೊಠಡಿಗಳ ಮರು ನಿರ್ಮಾಣ ಮಾಡದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.