ಶಿಕ್ಷಣ ಸಚಿವರೇ ಇತ್ತ ನೋಡಿ: 153 ಮಕ್ಕಳಿರುವ ಶಾಲೆಗೆ ಒಬ್ಬನೇ ಶಿಕ್ಷಕ..!

By Kannadaprabha News  |  First Published Sep 1, 2023, 11:21 PM IST

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಹಲವಾರು ಕಡೆ ಶಾಲೆಯ ಶಿಕ್ಷಕರು ದಾನಿಗಳನ್ನು ಎದುರು ನೋಡುತ್ತಿದ್ದರೆ, ಇಲ್ಲಿ ಸ್ವತಃ ಗ್ರಾಮಸ್ಥರೇ ಶಾಲೆಯ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಿದ್ದರೂ ಶಿಕ್ಷಣಾಧಿಕಾರಿಗಳೇ ಆಸಕ್ತಿ ತೋರಿಸದಿರುವ ಪ್ರಕರಣ ಬೆಳಕಿಗೆ ಬಂದಿದೆ. 


ಮಂಡ್ಯ ಮಂಜುನಾಥ

ಮಂಡ್ಯ (ಸೆ.01): ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಹಲವಾರು ಕಡೆ ಶಾಲೆಯ ಶಿಕ್ಷಕರು ದಾನಿಗಳನ್ನು ಎದುರು ನೋಡುತ್ತಿದ್ದರೆ, ಇಲ್ಲಿ ಸ್ವತಃ ಗ್ರಾಮಸ್ಥರೇ ಶಾಲೆಯ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಿದ್ದರೂ ಶಿಕ್ಷಣಾಧಿಕಾರಿಗಳೇ ಆಸಕ್ತಿ ತೋರಿಸದಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿತ್ಯ ಸಚಿವ ಕೆ.ವಿ.ಶಂಕರಗೌಡರ ತವರು ಕೀಲಾರ ಗ್ರಾಮ. ಈ ಊರಿನಲ್ಲಿ 120 ವರ್ಷಗಳ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಒಂದರಿಂದ ಎಂಟನೇ ತರಗತಿಯವರೆಗೆ 155 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲ, ಕ್ರೀಡಾ ಶಿಕ್ಷಕರಿಲ್ಲ. ಒಬ್ಬರೇ ಸಹ ಶಿಕ್ಷಕರಿದ್ದಾರೆ. ಒಟ್ಟು ಐದು ಮಂದಿ ಸಹ ಶಿಕ್ಷಕರಿದ್ದರೂ ಎರಡು ತಿಂಗಳ ಹಿಂದೆ ನಡೆದ ಕೌನ್ಸಿಲಿಂಗ್‌ನಲ್ಲಿ ನಾಲ್ವರು ಸಹ ಶಿಕ್ಷಕರು ಶಾಲೆಯಿಂದ ವರ್ಗಾವಣೆಗೊಂಡಿದ್ದಾರೆ. ಆ ಜಾಗಕ್ಕೆ ಇದುವರೆಗೂ ಶಿಕ್ಷಣಾಕಾರಿಗಳು ಯಾರನ್ನೂ ನೇಮಿಸದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತಕ್ಕೆ ಪ್ರಮುಖ ಕಾರಣರಾಗಿದ್ದಾರೆ.

Tap to resize

Latest Videos

ಅತಿಥಿ ಶಿಕ್ಷಕರಿಗೆ ತರಬೇತಿ ಇಲ್ಲ: ಶಾಲೆಯಲ್ಲಿದ್ದ ಸಹ ಶಿಕ್ಷಕರು ವರ್ಗಾವಣೆಗೊಂಡ ನಂತರದಲ್ಲಿ ಅವರ ಜಾಗಕ್ಕೆ ನಾಲ್ವರು ಅತಿಥಿ ಶಿಕ್ಷಕರನ್ನು ಕೊಟ್ಟಿದ್ದಾರೆ. ಆದರೆ, ಅವರಿಗೆ ಯಾವುದೇ ತರಬೇತಿಯನ್ನು ನೀಡಿಲ್ಲ. ಮಕ್ಕಳಿಗೆ ಪಾಠ ಮಾಡುವುದನ್ನು ಹೊರತುಪಡಿಸಿದರೆ ಬೇರೇನೂ ಗೊತ್ತಿಲ್ಲ. ವಾರ್ಷಿಕ ವೇಳಾಪಟ್ಟಿಯಂತೆ ಪ್ರತಿ ತಿಂಗಳು ಇಷ್ಟು ಪಾಠ ಮುಗಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಮಾಸಿಕ ಪರೀಕ್ಷೆ ನಡೆಸಬೇಕು. ಮಕ್ಕಳ ಕಲಿಕಾ ಗುಣಮಟ್ಟವನ್ನು ಅವಲೋಕನ ಮಾಡುವಂತಹ ಯಾವುದೇ ಪ್ರಕ್ರಿಯೆಗಳೂ ಶಾಲೆಯಲ್ಲಿ ನಡೆಯುತ್ತಿಲ್ಲ. ಕ್ರೀಡಾ ಶಿಕ್ಷಕರಿಲ್ಲದ ಕಾರಣ ಮಕ್ಕಳಿಗೆ ಕ್ರೀಡಾ ತರಬೇತಿಯೂ ಇಲ್ಲದಂತಾಗಿದೆ. ವಿಶಾಲವಾದ ಮೈದಾನವಿದ್ದರೂ ಮಕ್ಕಳಿಗೆ ಪ್ರಯೋಜನ ಇಲ್ಲದಂತಾಗಿದೆ. ಮುಖ್ಯ ಶಿಕ್ಷಕರಿಲ್ಲದೆ ಶಾಲೆಯ ಶೈಕ್ಷಣಿಕ ಬೆಳವಣಿಗೆ ಹಿನ್ನಡೆ ಉಂಟಾಗಿದೆ.

ಮತ್ತೆ ಕಾಂಗ್ರೆಸ್‌ ಕದ ತಟ್ಟಿದರೆ ಮರ್ಯಾದೆಗೇಡು: ಸಿ.ಟಿ.ರವಿ

ಶೌಚಾಲಯ, ಕಂಪ್ಯೂಟರ್ ಕೊಡುಗೆ: ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಶೌಚಾಲಯ, ಕುಡಿಯುವ ನೀರು, ದಾನಿಗಳಿಂದ 12 ಕಂಪ್ಯೂಟರ್‌ಗಳನ್ನು ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಕಂಪ್ಯೂಟರ್ ಶಿಕ್ಷಕರನ್ನೂ ನೇಮಿಸಿ ಅವರೇ ವೇತನ ಪಾವತಿಸಲು ನಿರ್ಧರಿಸಿದ್ದಾರೆ. 120 ವರ್ಷಗಳ ಇತಿಹಾಸವಿರುವ ಶಾಲೆಯನ್ನು ಉಳಿಸಿಕೊಂಡು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಬೇಕೆಂಬ ಬದ್ಧತೆ, ಇಚ್ಛಾಶಕ್ತಿ ಎಸ್‌ಡಿಎಂಸಿ ಸದಸ್ಯರದ್ದಾಗಿದೆ. ಗ್ರಾಮಸ್ಥರೂ ಇವರಿಗೆ ಸಾಥ್ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ ನೂರಾರು ಮಕ್ಕಳು ಓದುತ್ತಿರುವ ಶಾಲೆಗೆ ಶಿಕ್ಷಕರನ್ನು ಒದಗಿಸಲಾಗದಷ್ಟು ಅಸಹಾಯಕತೆಯನ್ನು ಶಿಕ್ಷಣಾಧಿಕಾರಿಗಳು ಪ್ರದರ್ಶಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಶಿಕ್ಷಣಾಧಿಕಾರಿಗಳು ಕಚೇರಿ ಕೆಲಸಕ್ಕಷ್ಟೇ ಸೀಮಿತ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿಗಳು, ಬಿಪಿಓ ಇನ್ನಿತರೆ ಅಧಿಕಾರಿಗಳು ಕೇವಲ ಕಚೇರಿ ಕೆಲಸಕ್ಕಷ್ಟೇ ಸೀಮಿತರಾಗಿದ್ದಾರೆಯೇ ವಿನಃ ತಿಂಗಳಿಗೋ, ಎರಡು ತಿಂಗಳಿಗೊಮ್ಮೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಕಾರ್ಯವೈಖರಿ, ಮಕ್ಕಳ ಕಲಿಕಾ ಗುಣಮಟ್ಟ, ಶಾಲೆಗೆ ಅಗತ್ಯವಾಗಿ ಬೇಕಿರುವ ಸೌಲಭ್ಯಗಳು, ಕಲಿಕಾ ಮಟ್ಟ ವೃದ್ಧಿಸಲು ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಅವಲೋಕನ ಮಾಡುತ್ತಿಲ್ಲ. ಹೀಗಾದರೆ ಸರ್ಕಾರಿ ಶಾಲೆಗಳು ಉಳಿಯುವುದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಶಾಲೆಯ ಮಕ್ಕಳ ಅವಶ್ಯಕತೆಗಳಿಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳನ್ನು ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಒದಗಿಸಿಕೊಡುತ್ತಿದ್ದರೂ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಶಿಕ್ಷಣಾಧಿಕಾರಿಗಳು ನಿರಾಸಕ್ತಿ ತೋರಿರುವುದು ಅಷ್ಟೋ ಇಷ್ಟೋ ಉಸಿರಾಡುತ್ತಿರುವ ಸರ್ಕಾರಿ ಶಾಲೆಗಳೂ ಬಾಗಿಲು ಮುಚ್ಚುವುದಕ್ಕೆ ಪ್ರೇರಣೆ ನೀಡಿದಂತಾಗಿದೆ.

ಗ್ರಾಮಸ್ಥರ ಸಹಕಾರದಿಂದ ಮಕ್ಕಳ ಮನೆ: ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಮಕ್ಕಳ ಮನೆಯನ್ನು ಶಾಲೆಯಲ್ಲಿ ಆರಂಭಿಸಿದ್ದಾರೆ. ಒಟ್ಟು 43 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮಕ್ಕಳ ಮನೆಯಲ್ಲಿರುವ ಶಿಕ್ಷಕರಿಗೆ ಅವರೇ ವೇತನವನ್ನೂ ನೀಡುತ್ತಿದ್ದಾರೆ. ಶಾಲೆಯಲ್ಲಿನ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿದರೆ ಇದೇ ಮಕ್ಕಳು ಒಂದನೇ ತರಗತಿಗೆ ಸೇರುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಜೀವ ತುಂಬಬಹುದಾಗಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶಾಲೆ ಅವನತಿಯ ಹಾದಿ ಹಿಡಿದಿದೆ.

ವರ್ಷದಿಂದ ಭೇಟಿ ನೀಡದ ಕ್ಷೇತ್ರ ಶಿಕ್ಷಣಾಧಿಕಾರಿ: ಕೀಲಾರದ ಶತಮಾನೋತ್ಸವ ಶಾಲೆಗೆ ಕಳೆದೊಂದು ವರ್ಷದಿಂದ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ, ಬಿಆರ್‌ಸಿ, ಬಿಪಿಓ ಸೇರಿದಂತೆ ಯಾರೊಬ್ಬರೂ ಶಾಲೆಯ ಕಡೆ ತಿರುಗಿನೋಡಿಲ್ಲ. 2022ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸೌಭಾಗ್ಯಮ್ಮ ಬಂದು ಹೋಗಿರುವುದನ್ನು ಬಿಟ್ಟರೆ, ಆನಂತರ ಬಂದಿರುವ ಉತ್ತರ ವಲಯ ಶಿಕ್ಷಣಾಧಿಕಾರಿ ಸರೋಜಮ್ಮ ಶಾಲೆ ಕಡೆ ಮುಖಮಾಡಿಲ್ಲ. ಶಾಲೆಯ ಪರಿಸ್ಥಿತಿ ಕುರಿತಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಶಿಕ್ಷಕರನ್ನು ನೇಮಿಸಿಕೊಡುವಂತೆ ಮನವಿ ಮಾಡಿದ್ದರೂ ಅದಕ್ಕೆ ಪೂರಕವಾಗಿ ಯಾರೊಬ್ಬರೂ ಸ್ಪಂದಿಸಿಲ್ಲವೆಂದು ಎಸ್‌ಡಿಎಂಸಿ ಸದಸ್ಯರು ಆರೋಪಿಸಿದ್ದಾರೆ.

ಕೀಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4 ಮಂದಿ ಅತಿಥಿ ಶಿಕ್ಷಕರನ್ನು ಕೊಟ್ಟಿದ್ದೇವೆ. ಅಲ್ಲಿದ್ದ 5 ಮಂದಿ ಸಹ ಶಿಕ್ಷಕರಲ್ಲಿ 4 ಜನರು ವರ್ಗಾವಣೆಯಾಗಿದ್ದಾರೆ. ಮತ್ತೆ ಕೌನ್ಸಿಲಿಂಗ್ ಮೂಲಕವೇ ಶಿಕ್ಷಕರು ಅಲ್ಲಿಗೆ ಬರಬೇಕಿದೆ. ನಿಯೋಜನೆ ಮೇಲೆ ಶಿಕ್ಷಕರನ್ನು ಕೊಡಲಾಗುತ್ತಿಲ್ಲ. ಬೇರೆಡೆಯಿಂದ ಇನ್ನೆರಡು ದಿನದಲ್ಲಿ ಇಬ್ಬರು ಶಿಕ್ಷಕರು ಅಲ್ಲಿಗೆ ಬರುವ ಸಾಧ್ಯತೆಗಳಿವೆ. ಮುಖ್ಯ ಶಿಕ್ಷಕರ ನೇಮಕಕ್ಕೂ ಕ್ರಮ ವಹಿಸುತ್ತೇವೆ.
- ಸರೋಜಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ

ಇಬ್ಬರು ಶಿಕ್ಷಕರು ಬರುತ್ತಾರೆ ಎಂದು ಎರಡು ತಿಂಗಳಿನಿಂದ ಸುಳ್ಳು ಹೇಳುತ್ತಿದ್ದಾರೆ. ನಿಯೋಜನೆ ಮೇಲೆ ಶಿಕ್ಷಕರನ್ನು ನೇಮಿಸಲು ಬರೋಲ್ಲ ಅಂತಾರೆ. ಬೇರೆ ಕಡೆಗೆ ನಿಯೋಜನೆ ಮೇಲೆ ನೇಮಿಸಿದ್ದಾರೆ. ಅಧಿಕಾರಿಗಳಿಗೆ ಸರ್ಕಾರಿ ಶಾಲೆ ಉಳಿಸಬೇಕೆಂಬ ಬಗ್ಗೆ ಕಾಳಜಿಯೇ ಇಲ್ಲ. ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ ಅವರು ಶಾಲೆಗೆ ಭೇಟಿ ಕೊಟ್ಟಿಲ್ಲ. ನಾವೇ ಹೋಗಿ ಭೇಟಿ ಮಾಡಿದರೂ ಮನವಿಗೆ ಸ್ಪಂದಿಸಿಲ್ಲ.
- ಕೆ.ಎಸ್.ರಮೇಶ್, ಅಧ್ಯಕ್ಷರು, ಎಸ್‌ಡಿಎಂಸಿ

ಕಾ​ವೇರಿ ನೀ​ರಿನ ವಿ​ಚಾ​ರ​ದಲ್ಲಿ ರಾ​ಜ​ಕೀಯ ತೀಟೆ ಮಾ​ಡ​ಬೇ​ಡಿ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

ಕೀಲಾರ ಸರ್ಕಾರಿ ಶಾಲೆಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ಬಿಇಒಗೆ ಸೂಚನೆ ಕೊಡುತ್ತೇನೆ. ಶಿಕ್ಷಕರ ನೇಮಕ ವಿಚಾರವಾಗಿ ಕ್ರಮ ವಹಿಸುವಂತೆ, ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯದಂತೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತೇನೆ. ಸರ್ಕಾರಿ ಶಾಲೆಗಳನ್ನು ಉಳಿಸುವುದೂ ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ಪೂರಕವಾಗಿ ಏನೆಲ್ಲಾ ಕ್ರಮ ವಹಿಸಬೇಕೋ ಈಗಿನಿಂದಲೇ ಚಾಲನೆ ಕೊಡುತ್ತೇನೆ.
- ಶಿವರಾಮೇಗೌಡ, ಡಿಡಿಪಿಐ

click me!