ಶಿಕ್ಷಣ ಸಚಿವ ನಾಗೇಶ್‌ ಮೇಲೆ ಭ್ರಷ್ಟಾಚಾರ ಆರೋಪ ಮಾಡಿಲ್ಲ: ಕ್ಯಾಮ್ಸ್‌

By Kannadaprabha NewsFirst Published Sep 9, 2022, 2:00 AM IST
Highlights

ಕೆಳಹಂತದ ಅಧಿಕಾರಿಗಳಿಂದ ಭ್ರಷ್ಟಾಚಾರ, ಶಿಕ್ಷಣ ಆಯುಕ್ತರಿಗೆ 16 ಪುಟಗಳ ದಾಖಲೆ ಸಲ್ಲಿಕೆ

ಬೆಂಗಳೂರು(ಸೆ.09):  ಶಿಕ್ಷಣ ಇಲಾಖೆ ವಿರುದ್ಧದ 40 ರಿಂದ 50 ಪರ್ಸೆಟ್‌ ಕಮಿಷನ್‌ ಆರೋಪ ಮತ್ತು ಶಿಕ್ಷಣ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆಪಾದನೆ ಸತ್ಯಕ್ಕೆ ದೂರ ಹಾಗೂ ನಿರಾಧಾರ. ನಾವು ಆ ರೀತಿ ಆರೋಪಿಸಿದ್ದಾಗಿ ತಪ್ಪಾಗಿ ವರದಿ ಆಗಿತ್ತು. ಆದರೆ, ಡಿಡಿಪಿಐ, ಬಿಇಒ ಹಾಗೂ ಇತರೆ ಕೆಳಹಂತದ ಅಧಿಕಾರಿಗಳ ಮಟ್ಟದಲ್ಲಿ ಖಾಸಗಿ ಶಾಲೆಗಳಿಗೆ ತೀವ್ರ ಕಿರುಕುಳ, ದಬ್ಬಾಳಿಕೆ ಮತ್ತು ಭ್ರಷ್ಟಚಾರ ನಡೆಯುತ್ತಿರುವುದು ನಿಜ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್‌ ಇಲಾಖೆಗೆ ಮಾಹಿತಿ ನೀಡಿದೆ.

ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಕ್ಯಾಮ್ಸ್‌ ಪದಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್‌ ಅವರು ಪತ್ರ ಬರೆದು ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಗುರುವಾರ ಆಹ್ವಾನ ನೀಡಿದ್ದರು. ಅದರಂತೆ ಆಯುಕ್ತರ ಕಚೇರಿಗೆ ತೆರಳಿದ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅವರು ಇಲಾಖೆಯಲ್ಲಿ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬ್ಲಾಕ್‌ ಮತ್ತು ಕ್ಲಸ್ಟರ್‌ ಸಂಪನ್ಮೂಲ ಅಧಿಕಾರಿಗಳ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ 16 ಪುಟಗಳ ಮಾಹಿತಿ ಹಾಗೂ ಒಂದಷ್ಟು ಆಡಿಯೊ ಕ್ಲಿಪಿಂಗ್ಸ್‌ಗಳನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ರುಪ್ಸಾ, ಕ್ಯಾಮ್ಸ್‌ ಮೇಲೆ ಮಾನನಷ್ಟ ಕೇಸ್‌: ಶಿಕ್ಷಣಾಧಿಕಾರಿಗಳ ಎಚ್ಚರಿಕೆ

ಬಳಿಕ ಮಾಧ್ಯಮ ಹೇಳಿಕೆ ನೀಡಿರುವ ಶಶಿಕುಮಾರ್‌ ಅವರು, ‘ಕಮಿಷನ್‌ ಆರೋಪ, ಸಚಿವರ ವಿರುದ್ಧದ ಆರೋಪವನ್ನು ನಾವೂ ಕೂಡ ಖಂಡಿಸುತ್ತೇವೆ. ನಮ್ಮ ಸಂಘಟನೆಯಿಂದ ಅವರ ವಿರುದ್ಧ ಎಲ್ಲೂ ಆರೋಪ ಮಾಡಿಲ್ಲ. ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಸುದ್ದಿ ಪ್ರಸಾರ ಮಾಡಲಾಗಿದೆ. ಇದಕ್ಕೆ ಆಯುಕ್ತರಿಗೆ ಸ್ಪಷ್ಟನೆ ನೀಡಿದ್ದೇವೆ. ಆದರೆ, ಕೆಳ ಹಂತದ ಅಧಿಕಾರಿಗಳ ಮಟ್ಟದಲ್ಲಿ ಹೊಸ ಶಾಲೆಗಳಿಗೆ ಅನುಮತಿ, ಪ್ರತಿ ವರ್ಷ ಮಾನ್ಯತೆ ನವೀಕರಣ, ಆರ್‌ಟಿಇ ಶುಲ್ಕ ಮರುಪಾವತಿ, ಶಾಲಾ ಕಟ್ಟಡ ಮತ್ತು ಅಗ್ನಿ ಸುರಕ್ಷತೆ ಸೇರಿದಂತೆ ಅನೇಕ ವಿಚಾರಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆಯುತ್ತಿದೆ’

ಈ ಬಗ್ಗೆ ನಮ್ಮ ಬಳಿ ಇದ್ದ ಒಂದಷ್ಟುದಾಖಲೆಗಳನ್ನು ಸಲ್ಲಿಸಿ ಆಯುಕ್ತರಿಗೆ ವಿವರಣೆಗಳನ್ನು ನೀಡಿದ್ದೇವೆ. ಜೊತೆಗೆ 8 ವರ್ಷಗಳ ಹಿಂದೆ ನಿಗದಿಪಡಿಸಿರುವ ಆರ್‌ಟಿಇ ಶುಲ್ಕ ಈಗ ಅವೈಜ್ಞಾನಿಕ ಅದನ್ನು ಹೆಚ್ಚಿಸಬೇಕು, ಖಾಸಗಿ ಶಾಲಾ ಶುಲ್ಕ ನಿಗದಿಯಲ್ಲಿನ ಲೋಪಗಳನ್ನು ಸರಿಪಡಿಸಬೇಕು, ಎನ್‌ಸಿಇಆರ್‌ಟಿ ಸಲಹೆಯಂತೆ ಪಠ್ಯಪುಸ್ತಕ ಪರಿಷ್ಕರಿಸಬೇಕು, ಕಟ್ಟಡ ಹಾಗೂ ಅಗ್ನಿ ಸುರಕ್ಷತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿ ವರದಿ ಪಡೆದು ಪ್ರತ್ಯೇಕ ಆದೇಶಗಳನ್ನು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಇನ್ನಾದರೂ ಇಲಾಖೆಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಎಚ್ಚೆತ್ತ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಆಗ್ರಹಿಸಿದ್ದೇವೆ.

ರಾಜ್ಯದಲ್ಲಿ 60,000 ಮಕ್ಕಳು ಕಲಿಕೆಯಿಂದ ದೂರ..!

ನಮ್ಮ ಮ​ನ​ವಿಗೆ ಆಯುಕ್ತರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿಮೆ ಮಾಡುವುದರ ಜತೆಗೆ, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿರುವ ಕೆಲವು ನಿಯಮಗಳನ್ನು ಸರಳೀಕರಿಸಲಾ​ಗು​ವು​ದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಕಳೆದ ಅಧಿವೇಶನದ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ನೀಡಿದಂತಹ ಭರವಸೆಗಳಿಗೆ ಪೂರಕವಾಗಿ ಸಭೆ ಕರೆದು ನಮ್ಮ ಸಲಹೆಗಳ ಆಧಾರದಲ್ಲಿ ಸರ್ಕಾರದ ಹಂತದಲ್ಲಿ ತೀರ್ಮಾನ, ಆದೇಶಗಳನ್ನು ಮಾಡಿದಲ್ಲಿ ಸಮಸ್ಯೆಗಳು ಭಾಗಶಃ ಸರಿ ಹೋಗಬಹುದು. ಇಲ್ಲವಾದಲ್ಲಿ ಕೆಳ ಹಂತದ ಅಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ, ದಬ್ಬಾಳಿಕೆ, ಭ್ರಷ್ಟಾಚಾರ ನಿಲ್ಲುವುದಿಲ್ಲ ಅಂತ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ತಿಳಿಸಿದ್ದಾರೆ.  
 

click me!