ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.9ರಿಂದ ಆರಂಭವಾಗುತ್ತಿದ್ದು, ಈ ಪರೀಕ್ಷೆಗೆ ಹಿಜಾಬ್ ಸೇರಿದಂತೆ ಯಾವುದೇ ಧರ್ಮಾಧಾರಿತ ಉಡುಪು ಧರಿಸಿ ಬಂದರೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.9ರಿಂದ ಆರಂಭವಾಗುತ್ತಿದ್ದು, ಈ ಪರೀಕ್ಷೆಗೆ ಹಿಜಾಬ್ ಸೇರಿದಂತೆ ಯಾವುದೇ ಧರ್ಮಾಧಾರಿತ ಉಡುಪು ಧರಿಸಿ ಬಂದರೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ (Hijab) ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಹಿಜಾಬ್ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಹಾಗಾಗಿ ಈ ವಿಚಾರದಲ್ಲಿ ಕಳೆದ ಸಾಲಿನ ಪರೀಕ್ಷೆ ವೇಳೆ ಯಾವ ನಿಯಮ ಅನುಸರಿಸಲಾಗಿತ್ತೋ ಅದೇ ಮುಂದುವರೆಯಲಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರಬಹುದು. ಅಥವಾ ಇನ್ನಿತರೆ ಸಾಮಾನ್ಯ ಉಡುಪು ಧರಿಸಿ ಬರಬಹುದು. ಹಿಜಾಬ್ ಹಾಗೂ ಇನ್ನಿತರೆ ಯಾವುದೇ ಧರ್ಮಾಧಾರಿತ ಉಡುಪುಗಳು ಸಮವಸ್ತ್ರಕ್ಕೆ ಸಂಬಂಧಿಸಿದವಲ್ಲ. ಹಾಗಾಗಿ ಅವುಗಳನ್ನು ಧರಿಸಿ ಬಂದರೆ ಪ್ರವೇಶ ನೀಡಲಾಗುವುದಿಲ್ಲ ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ಹೋಳಿ ಹಬ್ಬದ ನಂತರ ಹಿಜಾಬ್ ಪ್ರಕರಣ ವಿಚಾರಣೆ!
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಪರೀಕ್ಷಾ ಕೊಠಡಿ ಪ್ರವೇಶಿಸಲು ಅವಕಾಶ ನೀಡಲಾಗುವುದು. ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಈ ಎರಡೂ ಪರೀಕ್ಷೆಗಳನ್ನು ಬೇರೆ ಶಾಲೆ, ಕಾಲೇಜುಗಳಲ್ಲಿ ಬರೆಯುವುದರಿಂದ ಅವರು ಅಲ್ಲಿನ ಪರಿಸರದೊಂದಿಗೆ ಮುಕ್ತವಾಗಿ ಹೊಂದಿಕೊಂಡು ಒತ್ತಡವಿಲ್ಲದೆ ಆರಾಮಾಗಿ ಪರೀಕ್ಷೆ ಬರೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಇದೇ ವೇಳೆ ಸಚಿವರು ಹೇಳಿದರು.
ಗ್ರೇಸ್ ಅಂಕ:
ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮ ಪಡಿಸುವ ದೃಷ್ಟಿಯಿಂದ ಈ ಬಾರಿಯ ಪರೀಕ್ಷೆಗಳಲ್ಲಿ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ. ಜತೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರತಿ ವರ್ಷ ಅನುಸರಿಸುತ್ತಿದ್ದ ಗ್ರೇಸ್ ಅಂಕಗಳನ್ನು ಮುಂದುವರಿಸಲು ಕೂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಫಲಿತಾಂಶ 219 ಅಂಕ ಬಂದಿದ್ದು ಮೂರು ವಿಷಯಗಳಲ್ಲಿ ಪಾಸಾಗಲು ಗಡಿ ರೇಖೆಯಲ್ಲಿದ್ದರೆ ಅಂತಹ ಮಕ್ಕಳಿಗೆ ಗ್ರೇಸ್ ಅಂಕ ನೀಡಿ ಪಾಸು ಮಾಡಲಾಗುತ್ತದೆ. ಇದು ಪಿಯುಸಿ ಮಾತ್ರವಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಅನ್ವಯಿಸುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನವದೆಹಲಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಉಡುಪಿ ಸರ್ಕಾರಿ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿನಿಯರ ಕೋರಿಕೆಯನ್ನು ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿಕೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಸಮರ ನಡೆಯುತ್ತಿದೆ. ಈ ನಡುವೆ, ಐದು ದಿನಗಳಲ್ಲಿ ಪರೀಕ್ಷೆ ನಡೆಯಲಿದ್ದು, ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆಗ ಪ್ರತ್ಯೇಕ ಪೀಠ ರಚಿಸುವುದಾಗಿ ಕೋರ್ಟ್ ಹೇಳಿದೆ.
ಹಣ, ಖ್ಯಾತಿ, ಹೆಸರು ಬಿಟ್ಟು ಹಿಜಾಬ್ ಆಯ್ಕೆಯ ಕಾರಣ ಬಿಚ್ಚಿಟ್ಟು ಕಣ್ಣೀರಾಕಿದ ನಟಿ ಸನಾ ಖಾನ್