ಬಿಇ 1ನೇ ವರ್ಷ ಇನ್ನು ಲ್ಯಾಬ್‌ ಪರೀಕ್ಷೆ ಇಲ್ಲ

By Kannadaprabha NewsFirst Published Nov 25, 2022, 4:16 AM IST
Highlights

ಭೌತಶಾಸ್ತ್ರ, ರಸಾಯನಶಾಸ್ತ್ರಕ್ಕೆ ಪ್ರಯೋಗಾಲಯದ ತರಗತಿ ಮುಂದುವರಿಕೆ, ಪ್ರಾಯೋಗಿಕ ಪರೀಕ್ಷೆ ಪ್ರಶ್ನೆ ಥಿಯರಿಯಲ್ಲಿ ವಿಲೀನ: ವಿಟಿಯು ಸುತ್ತೋಲೆ

ಲಿಂಗರಾಜು ಕೋರಾ

ಬೆಂಗಳೂರು(ನ.25):  ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೊದಲ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಪ್ರಾಯೋಗಿಕ ಪರೀಕ್ಷೆಗಳಿರುವುದಿಲ್ಲ.

ಹೌದು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು(ವಿಟಿಯು) ಇದೇ ಸಾಲಿನಿಂದ ಮೊದಲ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಪ್ರತ್ಯೇಕವಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿದೆ. ಬದಲಿಗೆ ಪ್ರಾಯೋಗಿಕ ಪರೀಕ್ಷೆಯ ಪ್ರಶ್ನೆಗಳನ್ನು ಥಿಯರಿ ಪ್ರಶ್ನೆಪತ್ರಿಕೆಯೊಂದಿಗೆ ವಿಲೀನಗೊಳಿಸಲು ತೀರ್ಮಾನಿಸಿದೆ. ಅಂದರೆ ವಿದ್ಯಾರ್ಥಿಗಳಿಗೆ ಈವರೆಗೆ ಇದ್ದಂತೆ ಪ್ರಯೋಗಾಲಯದ ತರಗತಿಗಳು ಯಥಾವತ್ತಾಗಿ ನಡೆಯಲಿವೆ. ಆದರೆ ವರ್ಷದ ಕೊನೆಯಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆ ಇರುವುದಿಲ್ಲ.

Reva University; ರೇವಾ ವಿವಿಯಲ್ಲಿ ಪಂಚಭೂತಗಳ ಮಹತ್ವ, ರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ

ಮುಖ್ಯವಾಗಿ ವಿದ್ಯಾರ್ಥಿಗಳ ಮೇಲಿನ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ವಿಟಿಯು ಇಂತಹದ್ದೊಂದು ಮಹತ್ವದ ನಿರ್ಧಾರ ಕೈಗೊಂಡು ಸುತ್ತೋಲೆ ಹೊರಡಿಸಿದೆ. ಇದರೊಂದಿಗೆ ವಿಟಿಯು ಸಂಯೋಜನೆ ಪಡೆದಿರುವ ರಾಜ್ಯದ ಎಲ್ಲಾ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಇನ್ಮುಂದೆ ಮೊದಲ ವರ್ಷದ ಬಿಇ ವ್ಯಾಸಂಗದಲ್ಲಿ ಈ ಪದ್ಧತಿ ಅನ್ವಯಿಸಲಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ಪ್ರಾಯೋಗಿಕ ವಿಭಾಗವು ಮೊದಲ ಹಾಗೂ ಎರಡನೇ ಸೆಮಿಸ್ಟರ್‌ ಕೊನೆಯಲ್ಲಿ ಪರೀಕ್ಷೆ (ಎಸ್‌ಇಇ) ನಡೆಸುವುದಿಲ್ಲ. ಆದರೆ, ಈ ವಿಭಾಗವು ಪ್ರಾಯೋಗಿಕ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಥಿಯರಿ ವಿಭಾಗಕ್ಕೆ ನೀಡಬೇಕು. ಥಿಯರಿ ಹಾಗೂ ಪ್ರಾಯೋಗಿಕ ಎರಡೂ ಪರೀಕ್ಷೆಗಳಿಗೆ ಒಂದೇ ಪ್ರಶ್ನೆ ಪತ್ರಿಕೆ ಇರಲಿದೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವಿಟಿಯುನ ಉನ್ನತ ಅಧಿಕಾರಿಯೊಬ್ಬರು, ನಮ್ಮ ಈ ಕ್ರಮ ಇಂಟಿಗ್ರೇಟೆಡ್‌ ಕೋರ್ಸುಗಳ ಪಠ್ಯಕ್ರಮ ಪರಿಷ್ಕರಣೆ ಕಾರ್ಯದ ಒಂದು ಭಾಗವಾಗಿದೆ. ಇದು ಇಡೀ ಕೋರ್ಸಿಗೆ ಅಥವಾ ಎಲ್ಲ ವಿಷಯಗಳಿಗೂ ಅನ್ವಯಿಸುವುದಿಲ್ಲ. ಮೊದಲ ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ನಿಂದ ಸಂಯೋಜಿತ ವಿಷಯಗಳನ್ನೇ ತೆಗೆದುಹಾಕುವ ಆಲೋಚನೆ ವಿಶ್ವವಿದ್ಯಾಲಯದಲ್ಲಿತ್ತು. ಆದರೆ ವಿಷಯ ಶಿಕ್ಷಕರ ಪ್ರತಿರೋಧದ ನಂತರ, ವಿಷಯಗಳನ್ನು ಉಳಿಸಿಕೊಂಡಿದೆ. ನಾವು ಮೊದಲ ಬಾರಿಗೆ ಗಣಿತಶಾಸ್ತ್ರಕ್ಕೆ ಲ್ಯಾಬ್‌ ಪರಿಚಯಿಸಿದ್ದೇವೆ. ಅದಕ್ಕೆ ಯಾವುದೇ ಪ್ರಾಯೋಗಿಕ ಪರೀಕ್ಷೆ ಇರುವುದಿಲ್ಲ. ಅದೇ ರೀತಿ ಈಗ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೂ ಪ್ರಾಯೋಗಿಕ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ವಿವಿಯ ಕಾರ್ಯಕಾರಿ ಮಂಡಳಿಯ ಹಿರಿಯ ಸದಸ್ಯರು ಹೇಳಿದರು.

ವಿಟಿಯು ನಿರ್ಧಾರದ ಸಂಬಂಧ ರಾಜ್ಯದ ಎಲ್ಲಾ ತನ್ನ ಸಂಯೋಜಿತ ಎಂಜಿನಿಯರಿಂಗ್‌ ಕಾಲೇಜಿಗಳಿಗೆ ಈಗಾಗಲೇ ಸುತ್ತೋಲೆ ಮೂಲಕ ನಿರ್ದೇಶನ ನೀಡಲಾಗಿದೆ. ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಪ್ರತಿಯೊಂದು ವಿಜ್ಞಾನ ವಿಷಯವನ್ನು ಪ್ರತಿ ತರಗತಿಯಲ್ಲೂ ಒಂದು ಮೂಲ ವಿಜ್ಞಾನದ ಭಾಗವಾಗಿ ಅಧ್ಯಾಪಕರು ಕಲಿಸಬೇಕು. ಆದರೆ, ಕೋರ್ಸುಗಳು, ವಿಷಯದ ಹಂಚಿಕೆಯನ್ನು ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!