* ಶಾಲಾ ಮಕ್ಕಳ ಬೇಸಿಗೆ ರಜೆ ವಿಸ್ತರಣೆ ಗೊಂದಲ
* ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಸಚಿವ ನಾಗೇಶ್
* ಬೇಸಿಗೆ ರಜೆ ವಿಸ್ತರಣೆ ಇಲ್ಲ, ನಿಗದಿಯಂತೆ ಶಾಲೆಗಳು ಆರಂಭ
ಬೆಂಗಳೂರು, (ಮೇ.5): ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆ ಮಾಡುವ ಸಾಧ್ಯತೆ ಎನ್ನುವ ಸುದ್ದಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಎಲ್ಲಾ ಗೊಂದಲಗಿಳಿಗೆ ತೆರೆ ಎಳೆದಿದೆ.
ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಇಂದು(ಗುರುವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಿಗದಿಯಂತೆ ಮೇ 16ರಂದು ಶಾಲೆಗಳು ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ನಿಗದಿತ ದಿನಾಂಕದಂದೇ ಶಾಲೆ ಆರಂಭವಾಗಲಿದ್ದು, ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ 15 ದಿನ ಮೊದಲೇ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಬಾರಿ 15 ದಿನ ಮೊದಲೇ ಶಾಲೆ ಆರಂಭ, ಮೇ 16ರಿಂದ ಶಾಲೆ ಪುನಾರಂಭ!
ಬಿಸಿಲ ತಾಪಮಾನ ಹೆಚ್ಚಾಗಿರುವುದರಿಂದ ಜೂನ್ 15ರವರೆಗೆ ರಜೆ ವಿಸ್ತರಿಸಬೇಕು ಎಂದು ಕೆಲವು ವಿಧಾನಪರಿಷತ್ ಸದಸ್ಯರು ಪತ್ರ ಬರೆದಿದ್ದರು. ಇದಕ್ಕೆ ಶಾಲಾ ಸಿಬ್ಬಂದಿ ಮತ್ತು ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಈಗ ಶಿಕ್ಷಣ ಸಚಿವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್‍ನಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಅಂದಿನಿಂದಲೇ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎರಡು ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಕೌಶಲ್ಯವನ್ನೇ ಕಸಿದುಕೊಂಡಿದೆ. ಇದರಿಂದಾಗಿ ಕಲಿಕಾ ಚೇತರಿಕೆಯ ಕಾರ್ಯಕ್ರಮದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿಗಳಿಗೆ ಬರುವಂತೆ ಮಾಡುವುದು ಹಾಗೂ ಮಕ್ಕಳ ಕಲಿಕೆಯ ನ್ಯೂನ್ಯತೆಯನ್ನು ಪತ್ತೆ ಮಾಡಿ ಉತ್ತಮ ಶಿಕ್ಷಣ ನೀಡಬೇಕಾಗಿದೆ. ಹೀಗಾಗಿ ಮೇ 16ರಿಂದ ಶಾಲೆಗಳು ಪ್ರಾರಂಭವಾಗಲಿದೆ.
ಮಕ್ಕಳ ಕಲಿಕಾ ಹಂತವನ್ನು ಸರಿದೂಗಿಸಲು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಪ್ರಕ್ರಿಯೆ ಸುಗಮವಾಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ಉಪಯೋಗಕಾರಿಯಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದೆ.
ಕಲಿಕಾ ಚೇತರಿಕೆಯ ಉದ್ದೇಶ ಮತ್ತು ಗುರಿಗಳು:
ವಿದ್ಯಾರ್ಥಿಗಳ ಬೇಸಿಕ್ ಶಿಕ್ಷಣ, ಸಂಖ್ಯಾಜ್ಞಾನದ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ನ್ಯೂನ್ಯತೆಯನ್ನು ಸರಿಪಡಿಸಿಕೊಂಡು ಈ ಶೈಕ್ಷಣಿಕ ವರ್ಷಕ್ಕೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವುದು ಕಲಿಕಾ ಚೇತರಿಕೆಯ ಮೂಲ ಉದ್ದೇಶವಾಗಿದೆ.
ವಿದ್ಯಾರ್ಥಿಗಳಿಗೆ ಬುನಾದಿ ಶಿಕ್ಷಣದ ಜೊತೆಗೆ ಸಂಖ್ಯಾ ಜ್ಞಾನವನ್ನು ವೃದ್ದಿಸಿ ಕಲಿಕೆಗೆ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ತಯಾರಿಸಿಕೊಂಡು ಕಲಿಕಾ ಫಲಗಳು ಈಡೇರುವಂತೆ ಮಾಡುವುದಾಗಿದೆ.
ರಾಷ್ಟೀಯ ಶಿಕ್ಷಣ ನೀತಿ 2020- ಆಶಯದಂತೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನವನ್ನು ಬೆಳೆಸುವುದು, 2022-23ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಘೋಷಿಸುವುದು, ರಾಜ್ಯಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನಿಶ್ಚಿತಗೊಳಿಸುವುದು, ಎಲ್ಲಾ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲವಾಗಿ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು, ಎಲ್ಲಾ ವಿದ್ಯಾರ್ಥಿಗಳ ಬುನಾದಿ ಶಿಕ್ಷಣ, ಸಂಖ್ಯಾಜ್ಞಾನ, ಎರಡು ವರ್ಷಗಳ ಕಲಿಯಬೇಕಿದ್ದ ಕಲಿಕಾ ಕೌಶಲ್ಯ ಮತ್ತು ಈ ಶೈಕ್ಷಣಿಕ ವರ್ಷ ಹೆಚ್ಚಾಗಬೇಕಾಗಿರುವ ಕೌಶಲ್ಯದ ಬಗ್ಗೆ ಗಮನಹರಿಸುವ ಗುರಿ ಹೊಂದಲಾಗಿದೆ.
ಒಟ್ಟಾರೆ 2023-24ನೇ ಶೈಕ್ಷಣಿಕ ವರ್ಷ ಪ್ರಾರಂಭದ ವೇಳೆಗೆ ಪ್ರತಿ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆತಡೆ ಇಲ್ಲದೇ ಸಾಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳುವುದು. ಡಿಡಿಪಿಐ ಮತ್ತು ಬಿಇಒಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಜವಾಬ್ದಾರಿಯನ್ನು ಡಿಡಿಪಿಐ ಮತ್ತು ಬಿಇಒಗಳಿಗೆ ನೀಡಲಾಗಿದೆ.
ಶಾಲಾ ಹಂತದಲ್ಲಿ ನಡೆಯಲಿರುವ ಕಲಿಕಾ ಚೇತರಿಕೆಯ ಮಾಹಿತಿಯನ್ನು ಸಿಆರ್ ಪಿಗಳ ಮೂಲಕ ತರಿಸಿಕೊಂಡು ಡಿಡಿಪಿಐ ಮತ್ತು ಬಿಇಒಗಳು ಪರಿಶೀಲಿಸಲಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಕಲಿಕಾ ಚೇತರಿಕೆ ಕಾರ್ಯಕ್ರಮ ಸರ್ಕಾರಿ, ಅನುದಾನಿತ , ಅನುದಾನ ರಹಿತ ಶಾಲೆಗಳಿಗೂ ಇದು ಅನ್ವಯಿಸಲಿದೆ.