
ಚಿಕ್ಕಬಳ್ಳಾಪುರ(ಅ.02): ಅವರೆಲ್ಲಾ ಸ್ನಾತಕೋತ್ತರ ಪದವಿ ಮುಗಿಸಿ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಹೊತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬರೆಯಲು ಆಗಮಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ನಿಮಗೆ ಈ ಪರೀಕ್ಷಾ ಕೇಂದ್ರ ಮಂಜೂರಾಗಿಲ್ಲ ಹೋಗಿ ಅಂದಿದ್ದಾರೆ. ಇದರಿಂದ ವಿಚಲಿತರಾದ ಅಭ್ಯರ್ಥಿಗಳು ದಿಕ್ಕು ತೋಚದೇ ಸ್ಥಳದಲ್ಲಿಯೇ ಪ್ರತಿಭಟನೆಗೆ ಇಳಿದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ನಾತಕೋತ್ತರ ಪದವಿ ಪಡೆದಿರುವರು ಸಹಾಯಕ ಪ್ರಾಧ್ಯಾಪಕರಾಗಲು ಕಡ್ಡಾಯವಾಗಿ ನೆಟ್ ಪರೀಕ್ಷೆ ಬರೆಯಬೇಕು, ಅದಕ್ಕಾಗಿ ಎಂ.ಎ ಪದವೀದರರು ನೆಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕೂಡ ಮಂಡಳಿಯಿಂದ ಪ್ರವೇಶ ಪತ್ರ ಕೂಡ ರವಾನೆ ಆಗಿತ್ತು. ಆದರೆ ಪ್ರವೇಶ ಪತ್ರದಲ್ಲಿ ಪರೀಕ್ಷಾ ಕೇಂದ್ರದ ಹೆಸರು ನಮೂದಾಗಿದ್ದರೂ ಕೂಡ ನಾಗಾರ್ಜುನ ಕಾಲೇಜಿನ ಆಡಳಿತ ಮಂಡಳಿ ಸುಮಾರು 150 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದೇ ನಿಮ್ಮ ಪರೀಕ್ಷಾ ಕೇಂದ್ರ ಇದು ಅಲ್ಲ ಎಂದು ವಾಪಸ್ ಕಳಿಸಲು ಮುಂದಾಗಿದೆ.
ಅವೈಜ್ಞಾನಿಕ ಆದೇಶ ವಾಪಸ್ಸಿಗೆ ಸರ್ಕಾರಕ್ಕೆ ರುಪ್ಸಾ ಮನವಿ, ಇಲ್ಲವಾದರೆ ಪ್ರತಿಭಟನೆ ಎಚ್ಚರಿಕೆ!
ಈ ವೇಳೆ ಸ್ಥಳದಲ್ಲಿದ್ದ ಪರೀಕ್ಷಾರ್ಥಿಗಳು ಪ್ರವೇಶ ಪತ್ರದಲ್ಲಿ ನಾಗಾರ್ಜುನ ತಾಂತ್ರಿಕ ಕಾಲೇಜ್ ಎಂದು ನಮೂದಾಗಿದೆ. ನಮಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಪ್ರವೇಶ ಪತ್ರದಲ್ಲಿ ಪರೀಕ್ಷಾ ಮಂಡಳಿ ಮಾಡಿರುವ ಎಡವಟ್ಟುನಿಂದ ಬೆಂಗಳೂರು ಬದಲಾಗಿ ಚಿಕ್ಕಬಳ್ಳಾಪುರ ಸಮೀಪ ಇರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜ್ ಎಂದು ತಪ್ಪಾಗಿ ನಮೂದು ಮಾಡಿದ್ದರಿಂದ ನೆಟ್ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಅವಕಾಶ ವಂಚಿತರಾದರು.
ಆದ್ದರಿಂದ ಸಿಟ್ಟಾದ ವಿದ್ಯಾರ್ಥಿಗಳು ಸ್ಥಳದಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಕೇಂದ್ರದ ಉನ್ನತ ಶಿಕ್ಷಣ ಸಚಿವಾಲಯ ಮತ್ತೊಂದು ದಿನ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಮೆಣಸೆ ಶಾಲೆಗೆ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಗರಿ
ನಾಗಾರ್ಜುನ ಕಾಲೇಜಿನಲ್ಲಿ ಪರೀಕ್ಷೆ ಬರೆಯಲೆಂದು ನೆಟ್ ಹಾಲ್ ಟಿಕೆಟ್ ಹಿಡಿದು ದೂರದ ಚಿಕ್ಕಮಂಗಳೂರು, ಕೋಲಾರ, ತುಮಕೂರು, ಗುಲ್ಬರ್ಗಾ, ಶಿವಮೊಗ್ಗ, ದಾವಣಗೆರೆ, ರಾಮನಗರ ಜಿಲ್ಲೆಗಳಿಂದ ಆಗಮಿಸಿದ್ದ ಕನ್ನಡ ಪರೀಕ್ಷಾ ಅಭ್ಯರ್ಥಿಗಳು ಕೇಂದ್ರದ ಉನ್ನತ ಶಿಕ್ಷಣ ಇಲಾಖೆ ಅದರಲ್ಲೂ ಯುಜಿಸಿ ಹಾಗೂ ಎನ್‌ಟಿಎ ಮಾಡಿದ ಯಡವಟ್ಟುನಿಂದ ಪರೀಕ್ಷೆ ಬರೆಯಲಾಗದೇ ಬರೀಗೈಯಲ್ಲಿ ವಾಪಸ್ ತೆರಳಬೇಕಾಯಿತು.
ಪ್ರತಿ ಬಾರಿಯು ಕೂಡ ನೆಟ್ ಪರೀಕ್ಷೆಯು ಅವ್ಯವಸ್ಥೆಯಿಂದ ಕೂಡಿರುತ್ತದೆ. ಕಳೆದ ಬಾರಿ ನಡೆದ ನೆಟ್ ಪರೀಕ್ಷೆ ಫಲಿತಾಂಶ ಬಂದಿಲ್ಲ. ಕಳೆದ ಬಾರಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 10 ಪ್ರಶ್ನೆ ಬಿಟ್ಟರೆ ಉಳಿದೆಲ್ಲಾ ಹಿಂದಿ ಭಾಷೆಯಲ್ಲಿದ್ದವು. ಪದೇ ಪದೇ ಕನ್ನಡ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತಿದೆ ಅಂತ ಕೋಲಾರದ ಪರೀಕ್ಷಾ ವಂಚಿತ ಅಭ್ಯರ್ಥಿ ಸ್ವರ್ಣ ತಿಳಿಸಿದ್ದಾರೆ.