* ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿದ ಸಚಿವ ಸಿ.ಎನ್. ಅಶ್ವತ್ಥನಾರಾಯಣ
* ಮಲ್ಲೇಶ್ವರಂನ 13 ಸರಕಾರಿ ಶಾಲೆಗಳ ಮಕ್ಕಳಿಗೆ ದೈಹಿಕ ಶಿಕ್ಷಣಕ್ಕೆ ಹೊಸ ವ್ಯವಸ್ಥೆ
* ಇದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದ ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಬೆಂಗಳೂರು, (ಫೆ.26): ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 13 ಸರಕಾರಿ ಶಾಲೆಗಳ ಮಕ್ಕಳಿಗೆ ಅತ್ಯುತ್ತಮ ದೈಹಿಕ ಶಿಕ್ಷಣ ಕಲಿಸಲು ಒಂದು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಇದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕ್ಷೇತ್ರದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಸದಸ್ಯರಿಗೆ ವಿವಿಧ ಯೋಜನೆಗಳಡಿ ಮಂಜೂರಾದ ಸಾಲ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.
Summer Holidays ಬದಲಾಯ್ತು ಶಾಲೆ ಬೇಸಿಗೆ ರಜೆ: ಕೆಲ ಮಹತ್ವದ ಬದಲಾವಣೆ ತಂದ ಶಿಕ್ಷಣ ಇಲಾಖೆ
ಹಲವು ಸರಕಾರಿ ಶಾಲೆಗಳಲ್ಲಿ ಮೈದಾನದ ಕೊರತೆ ಇದೆ. ಈ ಶಾಲೆಗಳ ಮಕ್ಕಳನ್ನೆಲ್ಲ ಹತ್ತಿರದ ಮೈದಾನಕ್ಕೆ ವಾಹನದಲ್ಲಿ ಕರೆದುಕೊಂಡು ಹೋಗಿ, ದೈಹಿಕ ಶಿಕ್ಷಣ ಕೊಡಲಾಗುವುದು. ನಂತರ, ಅದೇ ವಾಹನದಲ್ಲಿ ಪುನಃ ಶಾಲೆಗೆ ಸುರಕ್ಷಿತವಾಗಿ ಬಿಡಲಾಗುವುದು. ಸರಕಾರಿ ಶಾಲೆಗಳು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದು, ಸಂಪೂರ್ಣ ಡಿಜಿಟಲೀಕರಣ ಹೊಂದಿವೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸರಕಾರ ಬದ್ಧವಾಗಿದ್ದು, ಕೌಶಲ್ಯವನ್ನು ಕಲಿಸುವುದರೊಂದಿಗೆ ಉದ್ಯೋಗವನ್ನು ಕೊಡಿಸಲೂ ಸಿದ್ಧವಾಗಿದೆ. ಈ ಮಕ್ಕಳಿಗೆ ಉಚಿತವಾಗಿ ಟ್ಯಾಬ್, ಲ್ಯಾಪ್-ಟಾಪ್ ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಮುದಾಯದ 45 ಸದಸ್ಯರಿಗೆ ನಿಗಮದ ಸಾಲ ಸೌಲಭ್ಯ ವಿತರಿಸಿದ ಅವರು, ಸರಕಾರವು ಮಧ್ಯವರ್ತಿಗಳ ಕಾಟವನ್ನು ತಪ್ಪಿಸಿದ್ದು, ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ಈ ಸಾಲದಲ್ಲಿ ಶೇ.50 ಸಬ್ಸಿಡಿ ಕೊಡಲಾಗುತ್ತಿದೆ ಎಂದರು.
ಇದರ ಜತೆಗೆ, ರಾಜಮಹಲ್ ಗುಟ್ಟಹಳ್ಳಿಯಲ್ಲಿರುವ ಸರಕಾರಿ ಆಸ್ಪತ್ರೆಯನ್ನು ಇನ್ನೊಂದು ತಿಂಗಳಲ್ಲಿ 100 ಹಾಸಿಗೆಗಳ ಮಟ್ಟಕ್ಕೆ ಏರಿಸಲಾಗುತ್ತಿದ್ದು, ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಇಲ್ಲಿ ಅತ್ಯುತ್ತಮ ಪ್ರಯೋಗಾಲಯ, ಉಚಿತ ಎಕ್ಸ್-ರೇ, ಔಷಧಿ ಎಲ್ಲವೂ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಶ್ವರಂ ಮಂಡಲದ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೀಲ್, `ಬಿಜೆಪಿ ಸರಕಾರವು ಅಲ್ಪಸಂಖ್ಯಾತ ಸಮುದಾಯದ 14 ಜನರನ್ನು ನಾನಾ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದೆ. ಹಿಂದೆ ಯಾವ ಸರಕಾರವೂ ಇಂಥ ಸಹಾಯ ಮಾಡಿರಲಿಲ್ಲ. ಇವರು ಸದ್ದಿಲ್ಲದೆ ಕ್ರಾಂತಿಕಾರಕ ಕೆಲಸ ಮಾಡುತ್ತಿದ್ದು, ಅಲ್ಪಸಂಖ್ಯಾತರನ್ನು ಮೇಲೆತ್ತುತ್ತಿದ್ದಾರೆ’ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ಸಮೀವುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳ್ಳಂಬೆಳಗ್ಗೆ ಕ್ಷೇತ್ರದಲ್ಲಿ ಪಾದಯಾತ್ರೆ
ಇದಕ್ಕೂ ಮೊದಲು ಲೋಯರ್ ಪ್ಯಾಲೆಸ್ ಗುಟ್ಟಹಳ್ಳಿಯ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಚಿವರು, 8 ಗಂಟೆಯ ಹೊತ್ತಿಗೆ ಎಎಎನ್ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ, ಲೋಯರ್ ಆರ್ಚರ್ಡ್ ಮತ್ತು ವಯ್ಯಾಲಿಕಾವಲ್ ನ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಎಎಎನ್ ಬ್ಲಾಕ್ ಕೊಳೆಗೇರಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ 27 ಮನೆಗಳನ್ನು ಕೆಡವಿ, ಅವುಗಳನ್ನು ನೂತನವಾಗಿ ನಿರ್ಮಿಸಿ ಕೊಡುವಂತೆ ಅವರು ಕೊಳೆಗೇರಿ ನಿರ್ಮೂಲನೆ ಮತ್ತು ಅಭಿವೃದ್ಧಿ ಮಂಡಲಿಯ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ, ಇಲ್ಲಿ ಇನ್ನೂ ಹೆಚ್ಚಿನ ಮನೆಗಳನ್ನು ನಿರ್ಮಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವಂತೆ ಹೇಳಿದರು.
ಜೊತೆಗೆ, ಕಸ ವಿಲೇವಾರಿ, ಚರಂಡಿ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಹಳೆಯ ಮರಗಳ ತೆರವು, ರಸ್ತೆ ಕಾಮಗಾರಿ ಇತ್ಯಾದಿಗಳ ಸುಗಮ ನಿರ್ವಹಣೆಗೆ ಅವರು ಸೂಚಿಸಿದರು. ಅಲ್ಲದೆ, ಈ ಬಡಾವಣೆಗಳಲ್ಲಿ ಬೆಸ್ಕಾಂ ಮತ್ತು ಬಿಡಬ್ಲ್ಯುಎಸ್ಎಸ್ಬಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿ, ನಿಗದಿತ ಕಾಲಮಿತಿಯೊಳಗೆ ಮುಗಿಸುವಂತೆ ನಿರ್ದೇಶಿಸಿದರು.