ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಅಶ್ವಥ್ ನಾರಾಯಣ

By Suvarna NewsFirst Published Sep 9, 2022, 7:13 PM IST
Highlights

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅಭಿಪ್ರಾಯ

ಚಿತ್ರದುರ್ಗ, (ಸೆಪ್ಟೆಂಬರ್.09): ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಕಲಿಕೆಗೆ ಮುಕ್ತ ಅವಕಾಶದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ  ಹೇಳಿದರು. 

ಹಿರಿಯೂರು  ತಾಲ್ಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

Latest Videos

20 ಸಾವಿರ ಅಂಗನವಾಡಿಗಳಲ್ಲೂ ಎನ್‌ಇಪಿ ಜಾರಿ: ಸಚಿವ ನಾಗೇಶ್‌ ಘೋಷಣೆ

ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಬಹಳ ಕಡಿಮೆ ಇದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿಯೂ ಗುಣಮಟ್ಟದ ಕಲಿಕೆ ಇಲ್ಲ.ಇದನ್ನು ಸಂಪೂರ್ಣ ಅರಿತು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ ತರುತ್ತಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯು ಕೇವಲ ಶೈಕ್ಷಣಿಕವಾಗಿ ಮಾತ್ರ ಸೀಮಿತವಾಗಿರದೇ ಸಾಂಸ್ಕೃತಿಕ, ದೈಹಿಕ, ಶೈಕ್ಷಣಿಕ ಹಾಗೂ  ಸಾಮಾಜಿಕ ಚಟುವಟಿಕೆ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಯಲ್ಲಿಯೂ ಭಾಗವಹಿಸಲು ಅವಕಾಶವಿದೆ. ಕಲಿಕೆ ಕೇವಲ ತರಗತಿಯಲ್ಲಿ ಮಾತ್ರವಲ್ಲ. ಸಮಾಜದಲ್ಲಿ ಆಗುವಂತಹ ಪ್ರತಿಯೊಂದು ವಿಚಾರದಲ್ಲಿಯೂ ಕಲಿಯುವುದು ಅವಕಾಶವಿದೆ ಎಂದು ಹೇಳಿದರು. 

ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ, ಗುಣಮಟ್ಟಕ್ಕೆ ಹೆಸರು ವಾಸಿಯಾಗಿರುವಂತೆ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆ ಹೆಸರಿನಲ್ಲಿ ಶಾಲೆ ಸ್ಥಾಪನೆ ಮಾಡಲು ಯೋಜನೆ ಕೈಗೆತ್ತಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು. ನಮ್ಮ ಗ್ರಾಮಗಳಲ್ಲಿರುವ ಶಾಲೆಗಳನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ನಾವೆಲ್ಲರೂ ಪ್ರಯತ್ನ ಮಾಡಿದರೆ ಸಮೃದ್ಧಿಯ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು. 

ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಗುರಿಯಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು. 

ಹಿರಿಯೂರು ತಾಲ್ಲೂಕಿನ ವೇದಾವತಿ, ವಾಣಿ ಸಕ್ಕರೆ, ಜವನಗೊಂಡನಹಳ್ಳಿ ಪ್ರಥಮ ದರ್ಜೆ ಕಾಲೇಜು ಹಾಗೂ ಹರಿಯಬ್ಬೆ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವಂತೆ ಸಚಿವರಿಗೆ ಮನವಿ ಮಾಡಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

click me!